ಆರ್. ಎಸ್. ಆಕಾಶ್
ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 155313 ಕ್ಕೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ.
ಮೈಸೂರು : ಹವಾಮಾನ ವೈಪರಿತ್ಯದಿಂದ ಕೃಷಿ ಕ್ಷೇತ್ರದಲ್ಲಾಗುವ ಗುರುತರ ಬದಲಾವಣೆ ಹಾಗೂ ಹೆಚ್ಚಿನ ಇಳುವರಿಗೆ ತೊಡಕಾಗುವ ರೋಗಗಳ ಸಮಸ್ಯೆಗಳಿಂದ ರೈತರು ಕಂಗೆಟ್ಟು ಹೋಗಿದ್ದು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಜಾರಿಗೆ ತಂದಿರುವ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ಸೌಲಭ್ಯದಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ.
ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಕೀಟ ಮತ್ತು ರೋಗಗಳ ಬಾಧೆಯನ್ನು ನಿಖರವಾಗಿ ಹಾಗೂ ಸಮಯೋಚಿತವಾಗಿ ಗುರುತಿಸುವ ಸಲುವಾಗಿ ರಾಜ್ಯ ಸರ್ಕಾರವು ಕೃಷಿ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿದೆ. ಇದು ರಾಜ್ಯ ಪೀಡೆ ಸರ್ವೇಕ್ಷಣ ಮತ್ತು ಮತ್ತು ಸಲಹಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ಜಿಲ್ಲಾ ಕ್ರೀಡೆ ಸರ್ವೇಕ್ಷಣ ಮತ್ತು ಸಲಹ ಸಮಿತಿಯ ಅಧೀನದಲ್ಲಿ ಕಾರ್ಯ ಆರಂಭಿಸಿದೆ. ಈ ಸಮಿತಿಗಳಲ್ಲಿ ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು, ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಗಳ ವಿಜ್ಞಾನಿಗಳು, ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಇದ್ದಾರೆ. ಆಯಾ ಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಜನವರಿ 7 2021 ರಿಂದ ಈ ಯೋಜನೆ ಜಾರಿಯಲ್ಲಿದ್ದು, ಅನಾ ವೃಷ್ಟಿ, ಅತಿವೃಷ್ಟಿ, ಚಂಡಮಾರುತ, ಬೆಳೆಗಳಿಗೆ ಕಾಡುವ ಕೀಟ ಮತ್ತು ರೋಗ ಬಾಧೆ ಹಾಗೂ ಮಣ್ಣಿನ ಫಲವತ್ತತೆ, ಸುಧಾರಿತ ಕೃಷಿ ಉತ್ಪಾದನಾ ತಾಂತ್ರಿಕತೆ, ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ಶಿಫಾರಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗ ಕೀಟಗಳ ಹತೋಟಿ ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳು ಹೀಗೆ ಹಲವಾರು ಸಮಸ್ಯೆಗಳ ಬಗ್ಗೆ ಈ ಯೋಜನೆ ಬೆಳಕು ಚೆಲ್ಲಲಿದೆ. ರೈತರ ಅಹವಾಲು ಕೇಳಿದ ಕೂಡಲೇ ಕೃಷಿ ಸಂಜೀವಿನಿ ವಾಹನ ರೈತರು ಇರುವ ಸ್ಥಳಕ್ಕೆ ತೆರಳಿ ನೀಡಿ ಸಮಸ್ಯೆ ಬಗೆಹರಿಸುತ್ತದೆ.
ಕೃಷಿ ಸಂಜೀವಿನಿ ಹೇಗೆ ಕಾರ್ಯನಿರ್ವಹಿಸುತ್ತದೆ ?
ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ಬಾಧೆಯನ್ನು ನಿಖರವಾಗಿ ಮತ್ತು ಸಮಯೋಚಿತವಾಗಿ ಗುರುತಿಸುವ ಸಲುವಾಗಿ ರಾಜ್ಯ ಸರ್ಕಾರ ಅನುದಾನ ಮೂಲಕ ರಾಯಚೂರು ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿರುವ ಕೀಟ ಮತ್ತು ರೋಗಗಳ ಸಮರ್ಪಕ ನಿರ್ವಹಣೆ ಹಾಗೂ ರೈತರಿಗೆ ಸಲಹೆ ನೀಡಲು ಇ – ತಂತ್ರಾಂಶ (ಇ -ಸ್ಯಾಪ್) ರೂಪಿಸಿದೆ. ಇದರ ಬಳಕೆ ಮೂಲಕ ನಿಯಮಿತವಾಗಿ ರೈತರ ತಾಪುಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ.
ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನ ದೈನಂದಿನ ಚಲಿಸುವ ಮಾರ್ಗ, ವಾಹನಗಳ ಇರುವಿಕೆಯ ಸ್ಥಳಗಳ ಮಾಹಿತಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ವಾಹನದಲ್ಲಿರುವ ತಾಂತ್ರಿಕ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಲು ಉಪಗ್ರಹ ಆಧಾರಿತ ಜಿಯೋ ಪೆನ್ಸಿಂಗ್ ತಂತ್ರಜ್ಞಾನ ಮೊಬೈಲ್ ನೆಟ್ವರ್ಕ್ ಇಲ್ಲದೆ ಕಾರ್ಯನಿರ್ವಹಿಸುತ್ತದೆ. ರೈತರು ಸಮಸ್ಯೆಗಳಿಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ರಾಜ್ಯಮಟ್ಟದಲ್ಲಿ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 155313 ನೀಡಲಾಗಿದೆ.
ಯೋಜನೆಯ ಉದ್ದೇಶ ?
ರೈತರು ಬೆಳೆಗಳಲ್ಲಿ ಕೀಟಬಾಧೆ ಹಾಗೂ ರೋಗಗಳು ಹರಡಿದ ಸಂದರ್ಭದಲ್ಲಿ ಸಹಾಯವಾಣಿ ಮೂಲಕ ಬೆಳೆ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಕೃಷಿ ಸಂಜೀವಿನಿ ವಾಹನದಲ್ಲಿ ನುರಿತ ಕೃಷಿ ತಜ್ಞರು ಇದ್ದು, ಬೆಳೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಔಷಧಿ ನೀಡುತ್ತಾರೆ. ಅಗತ್ಯವಿದ್ದಲ್ಲಿ ಮಣ್ಣಿನ ರಸಸಾರ, ಲವಣಾಂಶ, ತೇವಾಂಶ ಹಾಗೂ ಉಷ್ಣಾಂಶ ತ್ವರಿತ ಪರೀಕ್ಷೆಯನ್ನು ಸಹ ಮಾಡಲಾಗುತ್ತದೆ. ರಸ ಗೊಬ್ಬರ ಪರೀಕ್ಷೆಯನ್ನು ಸಹ ಒಳಪಡಿಸಬಹುದಾಗಿದ್ದು, ಕಲಬೆರಕೆ ಆಗಿದೆಯೇ ಅಥವಾ ನಕಲಿ ಗೊಬ್ಬರವೇ ಎಂದು ಸ್ಥಳದಲ್ಲೇ ಪರೀಕ್ಷೆ ಮಾಡಿ ರೈತರಿಗೆ ತಿಳಿಸಲಾಗುತ್ತದೆ. ಬೆಳೆಗಳಿಗೆ ಎಷ್ಟು ಗೊಬ್ಬರ ಹಾಕಬೇಕು ಎಂಬ ಸಲಹೆಯು ಪಡೆಯಬಹುದಾಗಿದೆ.
ಮೈಸೂರಿನಲ್ಲಿ ಈಗಾಗಲೇ ಕೃಷಿ ಸಂಜೀವಿನಿ ಕಾರ್ಯನಿರ್ವಹಿಸುತ್ತಿದ್ದು, ಕೃಷಿಯಲ್ಲಿ ಆಸಕ್ತರು, ವಿಷಯಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿಗಳು ತಮ್ಮ ಬಿಡುವಿನ ಸಮಯದಲ್ಲಿ ಸ್ವಆಸಕ್ತಿಯಿಂದ ಈ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮೊದಲು ಜಿಲ್ಲೆಗೆ ಒಂದು ವಾಹನ ಇತ್ತು ಈಗ ಮೈಸೂರಿನ 8 p ತಾಲೂಕುಗಳಲ್ಲೂ ತಲಾ ಒಂದೊಂದು ವಾಹನ ಸೇವೆ ಒದಗಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಎಲ್ಇಡಿ ಟಿವಿಯ ಮೂಲಕ ಪ್ರಚಾರ ಮಾಡಲಾಗುತ್ತಿದೆ.
ಎಸ್ ನಾಗೇಂದ್ರ
ಕೃಷಿ ಅಧಿಕಾರಿ. ಮೈಸೂರು.