Mysore
21
light rain

Social Media

ಭಾನುವಾರ, 03 ನವೆಂಬರ್ 2024
Light
Dark

ಕಾಡ್ಗಿಚ್ಚಿಗೆ ಸಿಲುಕಿ ಗಾಯಗೊಂಡಿದ್ದ ಫಾರೆಸ್ಟ್ ಗಾರ್ಡ್ ಸಾವು

ಹಾಸನ: ಸಕಲೇಶಪುರ ತಾಲ್ಲೂಕಿನ ಪಶ್ಚಿಮಘಟ್ಟದ ಕಾಡ್ಗಿಚ್ಚಿಗೆ ಸಿಲುಕಿ ಬೆಂದು ಹೋಗಿದ್ದ ಫಾರೆಸ್ಟ್ ಗಾರ್ಡ್ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಸುಂದರೇಶ್ ಎಂಬವರು ಮೃತಪಟ್ಟಿದ್ದಾರೆ. ಕಾಡ್ಗಿಚ್ಚು ನಂದಿಸಲು ಹೋಗಿದ್ದ ತಂಡದಲ್ಲಿ ಸುಂದರೇಶ್‌ ಅವರೂ ಇದ್ದರು. ಇವರಿಗೆ ಬೆಂಕಿ ಆವರಿಸಿ ಗಂಭೀರ ಗಾಯಗೊಂಡಿದ್ದರು.

ಗುರುವಾರ ಮಧ್ಯಾಹ್ನ ಕಾಡುಮನೆ ಎಸ್ಟೇಟ್ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಕಾಡ್ಗಿಚ್ಚು ಆರಿಸಲು ಡಿಆರ್‌ಎಫ್‌ಓ ಮಂಜುನಾಥ ನೇತೃತ್ವದಲ್ಲಿ ಆರು ಜನ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿದ್ದರು. ವೇಗವಾಗಿ ವ್ಯಾಪಿಸಿದ್ದ ಬೆಂಕಿ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಸುತ್ತುವರಿದಿತ್ತು.

ಬೆಂಕಿಗೆ ಸಿಲಿಕಿ ಡಿಆರ್‌ಎಫ್‌ಓ ಮಂಜುನಾಥ, ಫಾರೆಸ್ಟ್ ಗಾರ್ಡ್ ಸುಂದರೇಶ್, ವಾಚರ್‌ಗಳಾದ ತುಂಗೇಶ್ ಮತ್ತು ಮಹೇಶ್‌ ಅವರಿಗೆ ಗಾಯಗಳಾಗಿದ್ದವು. ಸುಂದರೇಶ್‌ ಹಾಗೂ ಮಂಜುನಾಥ ಬೆಂಕಿಯಲ್ಲಿ ಬಹುತೇಕ ಬೆಂದು ಹೋಗಿದ್ದರು. ರಸ್ತೆ ಸಂಪರ್ಕ ಇಲ್ಲದ ಸ್ಥಳದಿಂದ ಅವರನ್ನು ಅಡ್ಡೆಯಲ್ಲಿ ಹೊತ್ತು ತಂದು ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಹಾಸನದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಝೀರೊ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿತ್ತು.

ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಇಬ್ಬರಲ್ಲಿ ರಾತ್ರಿ ಸುಂದರೇಶ್ ಸಾವಿಗೀಡಾಗಿದ್ದಾರೆ. ಕಾಡು ರಕ್ಷಣೆಗಾಗಿ ತಮ್ಮ ಪ್ರಾಣ ಪಣಕ್ಕಿಟ್ಟು ಸಿಬ್ಬಂದಿ ಹೋರಾಟ ನಡೆಸಿದ್ದರು. ಶೇ.80 ರಷ್ಟು ಸುಟ್ಟ ಗಾಯಳಾಗಿದ್ದ ಸುಂದರೇಶ್ ಮೃತಪಟ್ಟಿದ್ದಾರೆ. ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಸುಂದರೇಶ್ ಅಂತ್ಯಕ್ರಿಯೆ ನೆರವೇರಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ