ತಮಿಳುನಾಡುಅರಣ್ಯ ಸಿಬ್ಬಂದಿ ಆನೆಗಳನ್ನು ಜಿಲ್ಲೆಯತ್ತ ಹಿಂದಕ್ಕೆ ಅಟ್ಟುತ್ತಿರುವ ಆರೋಪ..
ಚಾಮರಾಜನಗರ: ಜಿಲ್ಲೆಯ ಗಡಿಯಿಂದ ಓಡಿಸಿದ ಕಾಡಾನೆಗಳನ್ನು ತಮಿಳುನಾಡು ಅರಣ್ಯ ಸಿಬ್ಬಂದಿ ವಾಪಸ್ ಅಟ್ಟುತ್ತಿದ್ದು ಇದರಿಂದಾಗಿ ಎರಡೂ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರ ಬೆಳೆಗಳು ಸುಮಾರು ದಿನಗಳಿಂದ ಆನೆಗಳ ಬಾಯಿಗೆ ತುತ್ತಾಗುತ್ತಿವೆ!
ಕಳೆದ ಒಂದು ವಾರದಿಂದ 20ಕ್ಕೂ ಹೆಚ್ಚು ರೈತರ ಕಬ್ಬು,ಬಾಳೆ ,ಜೋಳ ಬೆಳೆಗಳ ಮೇಲೆ ಆನೆಗಳು ದಾಳಿ ಮಾಡಿವೆ.
ಶುಕ್ರವಾರ ಬೆಳಗಿನ ಜಾವ ಮೂಡಲ ಹೊಸಹಳ್ಳಿಯ ಕುಮಾರ್ ಅವರ ತೋಟಕ್ಕೆ ದಾಂಗುಡಿ ಇಟ್ಟು 6ತಿಂಗಳ ನೇಂದ್ರ ಬಾಳೆಯನ್ನು ತಿಂದು ತುಳಿದಾಡಿವೆ. ಗುರುವಾರ ಸಂಜೆಹೊಂಗಲವಾಡಿ ಪುಟ್ಟಮಾದಮ್ಮ ಅವರ 2ಎಕರೆ ಸಸಿ ಕಬ್ಬನ್ನು ತಿಂದಾಡಿವೆ. ಲಿಂಗನಪುರದಲ್ಲೂಭುಗಿಯಪ್ಪ, ಲಿಂಗಪ್ಪ ಅವರ ಮುಸುಕಿನ ಜೋಳವನ್ನು ಹಾಳುಗೆಡಗಿವೆ. ಸಿದ್ದಯ್ಯನಪುರ,ಹೊಂಗಲವಾಡಿ, ಕುಂಭೇಶ್ವರ ಕಾಲೋನಿ, ಅರಕಲವಾಡಿ, ಹೊಸಹಳ್ಳಿ,ವಡ್ಡರಹಳ್ಳಿ ಇನ್ನಿತರ ಗ್ರಾಮಗಳ ವ್ಯಾಪ್ತಿಯಲ್ಲಿ’ ಆನೆ ಬಂದವು-ಬೆಳೆತಿಂದವು’ ಎಂಬುದು ಸಾಮಾನ್ಯಸುದ್ದಿಯಾಗಿ ಹೋಗಿದೆ!
ಇಲ್ಲಿಯ ಅರಣ್ಯ ಇಲಾಖೆಯ ಗಾರ್ಡ್,ವಾಚರ್ ಇನ್ನಿತರ ಸಿಬ್ಬಂದಿ ರ್ಯಾಪಿಡ್ ರೆಸ್ಪಾನ್ಸ್ ಟೀಂನೊಂದಿಗೆ ಸೇರಿ ಪಟಾಕಿ ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಆರ್ಭಟಿಸಿ ರಾಜ್ಯದ ಹೊಸಳ್ಳಿ ಗಡಿಯಿಂದ ತಮಿಳು ನಾಡು ಅರಣ್ಯದತ್ತ ಆನೆಗಳನ್ನು ವಾಪಸ್ ಓಡಿಸಲಾಗುತ್ತಿದೆ.
ಹೀಗೆ ಜಿಲ್ಲೆ ದಾಟಿ ಹೋದ ಆನೆ ಗಳು ಅಲ್ಲಿಯ ಅರಣ್ಯ ತಲುಪುವ ತನಕ ಸಾಕಷ್ಟು ರೈತರ ಭೂಮಿಯನ್ನು ಹಾದು ಹೋಗಬೇಕಿದೆ.ಇದರಿಂದ ರೈತರಿಗೆ ಹೆಚ್ಚಿನ ಹಾನಿ ಆಗು ವುದರಿಂದ ಜಿಲ್ಲೆಯಿಂದ ಹೋದ ಆನೆಗಳನ್ನುಅಲ್ಲಿನ ಗಡಿಯಲ್ಲೇ ಕಾದು ಹಿಂದಕ್ಕೆ ಅಟ್ಟಿ ತಮ್ಮ ಶ್ರಮ ಕಡಿಮೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಸ್ಥಳೀಯ ಅರಣ್ಯ ಸಿಬ್ಬಂದಿ ಹಗಲು, ರಾತ್ರಿ ಎನ್ನದೇ ಆನೆಗಳೊಂದಿಗೆ ಕಾದಾಟ ನಡೆಸಬೇಕಾಗಿದೆ ಮಾತ್ರವಲ್ಲದೇ ರೈತರು ತುಂಬಾ ಬೆಳೆನಷ್ಠ ಅನುಭವಿಸುವಂತಾಗಿದೆ ಎಂದು ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ(ಬಿ ಆರ್ ಟಿ) ಅಧಿಕಾರಿಯೊಬ್ಬರು ತಿಳಿಸಿದರು.
ಯಣಗುಂಬ ,ಎತ್ತಿಗಟ್ಟಿಯಿಂದ ಹೊಸಳ್ಳಿ ಗೇಟ್ ವರೆಗೆ ಆನೆ ತಡೆ ಕಂದಕ ಮಾಡಲಾಗಿದ್ದು ಇದರಿಂದ ಮುಂದಕ್ಕೆಅಂದರೆ ಬಿಸಲವಾಡಿ ಕಡೆಗೆ ಕಂದಕ ನಿರ್ಮಾಣ ಪೂರ್ಣವಾಗದೇ ಉಳಿದಿರುವುದು ಇಷ್ಟೆಲ್ಲಾ ಸಮಸ್ಯೆಗೆ ಮೂಲ ಕಾರಣ ಎಂಬುದು ರೈತರ ಆರೋಪ.
ಎಸಿಎಫ್ ಬಂದ ಮೇಲೆ ಸಿಬ್ಬಂದಿ ಬಂಧಮುಕ್ತ!
ಮೂಡಲಹೊಸಳ್ಳಿಯಲ್ಲಿ ಶುಕ್ರವಾರ ಬೆಳಗಿನಜಾವ ಕಾಡಾನೆಗಳು ಬಾಳೆ ಹಾಳು ಮಾಡಿರುವ ಸ್ಥಳ ಪರಿಶೀಲನೆಗೆಂದು ಬಂದಿದ್ದ ಫಾರೆಸ್ಟರ್ ಹರ್ಷ ಸೇರಿ 6 ಸಿಬ್ಬಂದಿಯನ್ನು ಮೇಲಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ರೈತರು ಬಿಟ್ಟಿರಲಿಲ್ಲ!
ಮಧ್ಯಾಹ್ನ ಎಸಿಎಫ್ ಸುರೇಶ್,ಆರ್ ಎಫ್ ಒ ವಿನೋದ್ ಗೌಡ ಅವರು ಆಗಮಿಸಿ,ಇತ್ತಿಂದ ಓಡಿಸಿದ ಆನೆಗಳನ್ನು ತಮಿಳು ನಾಡು ಕಡೆಯಿಂದ ವಾಪಸ್ ಅಟ್ಟಲಾಗುತ್ತಿದೆ. ಇಲ್ಲಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಲ್ಲಿಯ ಅಧಿಕಾರಿ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.ಆನೆಗಳ ತಡೆಗೆ ಇನ್ನೊಂದು ವಾಹನ ಮತ್ತು ಅದಕ್ಕೆ ಬೇಕಾದ ಸಿಬ್ಬಂದಿ ಒದಗಿಸಿಆಗಿರುವ ಬೆಳೆಹಾನಿಗೆ ಬೇಗ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ ಮೇರೆಗೆ ಅರಣ್ಯ ಸಿಬ್ಬಂದಿಯನ್ನು ರೈತರು ‘ಬಂಧಮುಕ್ತ’ ಮಾಡಿದರು.
ತಂತಿಬೇಲಿ ಕಲ್ಲುಗಳನ್ನು ಮುರಿದು ಜಮೀನಿನ ಒಳ ಬಂದು ನನ್ನ ಎರಡು ಎಕರೆ ಬಾಳೆ ತೋಟವನ್ನು ಒಂಬತ್ತು ಆನೆಗಳು ಶುಕ್ರವಾರ ಬೆಳಗಿನಜಾವ ಹಾಳು ಮಾಡಿದ್ದು ಇದರಿಂದ ತಮಗೆ ಲಕ್ಷಾಂತರ ರೂ.ನಷ್ಟ ಉಂಟಾಗಿದೆ.
–ಕುಮಾರ್ , ಮೂಡಲ ಹೊಸಳ್ಳಿ.