ಹನೂರು: ಚಾಮರಾಜನಗರ ಜಿಲ್ಲೆಯಲ್ಲಿ ಸ್ಮಶಾನವಿಲ್ಲದ ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಕಲ್ಪಿಸಲು 2.25 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಉತ್ತರಿಸದ್ದಾರೆ.
ವಿಧಾನಮಂಡಲದ ಅಧಿವೇಶನದಲ್ಲಿ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ಚಾ.ನಗರ ಜಿಲ್ಲೆಯಲ್ಲಿ ಒಟ್ಟು 407 ಗ್ರಾಮಗಳ ಪೈಕಿ 394 ಗ್ರಾಮಗಳಲ್ಲಿ ಈಗಾಗಲೇ ಸ್ಮಶಾನಕ್ಕಾಗಿ ಜಮೀನನ್ನು ಒದಗಿಸಲಾಗಿದೆ. ಇನ್ನುಳಿದ 13 ಗ್ರಾಮಗಳಲ್ಲಿ ಸ್ಮಶಾನ ಸೌಕರ್ಯವಿಲ್ಲ. ಆಗಾಗಿ ಸರ್ಕಾರಿ ಜಮೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಕಲ್ಪಿಸುವುದಕ್ಕಾಗಿ ಖಾಸಗಿ ಜಮೀನನ್ನು ಖರೀದಿಸಲು 2.25 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಶಾಸಕ ಆರ್.ನರೇಂದ್ರ ಅವರು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರಿಗೆ ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 83 ಪಶು ವೈದ್ಯಕೀಯ ಸಂಸ್ಥೆಗಳಿದ್ದು, ಇದರಲ್ಲಿ 13 ಪಶು ಆಸ್ಪತ್ರೆ, 37 ಪಶು ಚಿಕಿತ್ಸಾ ಕೇಂದ್ರ, 28 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಹಾಗೂ 4 ಸಂಚಾರಿ ಪಶು ಚಿಕಿತ್ಸಾ ಕೇಂದ್ರಗಳಿವೆ. ಖಾಲಿ ಇರುವ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ನೇಮಕಾತಿಯ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಅಲ್ಲದೇ 250 ಕಿರಿಯ ಪಶು ವೈದ್ಯಕೀಯ ಪರೀಕ್ಷಕರ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಲು ಕ್ರಮ ವಹಿಸಲಾಗಿದೆ. ಅಲ್ಲಿಯವರೆಗೆ ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಪಶು ವೈದ್ಯಾಧಿಕಾರಿ ಹುದ್ದೆ ಖಾಲಿಯಿರುವ ಕಡೆಗಳಲ್ಲಿ ಹತ್ತಿರದ ಪಶು ವೈದ್ಯ ಸಂಸ್ಥೆಯಿದ ಅಧಿಕಾರಿಯನ್ನು ಪ್ರಭಾರದ ಮೇಲೆ ನಿಯೋಜಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉತ್ತರ ನೀಡಿದ್ದಾರೆ.