ಮಡಿಕೇರಿ: ಬ್ರಿಟೀಷರು ಯಾವ ರೀತಿ ಭಾರತವನ್ನು ಒಡೆದರೊ ಕಾಂಗ್ರೇಸ್ ಕೂಡ ಅದೇ ಹಾದಿಯನ್ನು ಹಿಡಿದಿದ್ದು, ಕಾಂಗ್ರೆಸ್ ದೇಶವನ್ನು ಜೋಡಿಸುವ ಕೆಲಸ ಎಂದೂ ಮಾಡಿಲ್ಲ ಎಂದು ಶಿಕ್ಷಣ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಟೀಕಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನದು ಬಾಸ್ ಇಸ್ ಆಲ್‌ವೇಸ್ ರೈಟ್ ಎಂಬ ಸಂಸ್ಕೃತಿ. ಬಾಸ್ ಎಂಬುದು ಇಲ್ಲಿ ಒಂದು ಕುಟುಂಬ ಅಷ್ಟೇ. ಕಾಂಗ್ರೆಸ್ ಒಡೆದು ಆಳುವ ನೀತಿಯಲ್ಲೆ ಬಂದಿರೋದು. ಇವರು ಬರಿ ಕಾಂಗ್ರೇಸ್ ಒಡೆಯಲ್ಲಿಲ್ಲ, ದೇಶವನ್ನೂ ಕೂಡ ಒಡೆದಿದ್ದಾರೆ. ಹಿರಿಯ ಮುಸಲ್ಮಾನ ನಾಯಕರು ಕಾಂಗ್ರೆಸ್ ಬಿಡುವ ಭಯದಿಂದ ಭಾರತ್ ಜೋಡೊ ಆರಂಭವಾಗಿದೆ. ಆ ಮೂಲಕ ಕಾಂಗ್ರೆಸ್ ನಾಟಕವಾಡುತ್ತಿದೆ ಎಂದು ಲೇವಡಿ ಮಾಡಿದರು.
ಭಾರತ್ ಜೋಡೊ ಬಿಜೆಪಿಗೆ ಭಯ ಹುಟ್ಟಿಸಿದೆ ಎಂಬ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ನಾಗೇಶ್, ಬಿ.ಕೆ ಹರಿಪ್ರಸಾದ್‌ಗೆ ಹೆಚ್ಚಿನ ಒತ್ತು ಕೊಡವ ಅವಶ್ಯಕತೆ ಇಲ್ಲ. ಅವರು ಚುನಾವಣೆ ಎದುರಿಸಿ ನಾಯಕರಾದವರಲ್ಲ. ಕಾಂಗ್ರೆಸ್‌ಗೆ ಈ ರೀತಿಯ ಪಾದಯಾತ್ರೆ ಹೊಸತು, ಬಿಜೆಪಿಗೆ ಅಲ್ಲ. ಬಿಜೆಪಿ ಪಕ್ಷ ಸ್ಥಾಪನೆಯಾಗಿದ್ದೆ ಜನರ ಸಮಸ್ಯೆ ಬಗೆಹರಿಸುವ ಮೂಲಕ. ಬಿಜೆಪಿ ಈ ರೀತಿಯ ಸಾಕಷ್ಟು ಅಭಿಯಾನಗಳನ್ನು ಮಾಡಿದೆ. ಮಾಜಿ ಸಿಎಂ ಯಡಿಯೂರಪ್ಪ ಕೂಡ ಹಿಂದೆ ಸಾಕಷ್ಟು ಪಾದಯಾತ್ರೆ ಮಾಡುವ ಮೂಲಕ ಗಮನ ಸೆಳೆದಿದ್ದರು. ಕಾಂಗ್ರೆಸ್ ಮಾಡುತ್ತಿದ್ದಾರೆ ಎಂದು ನಾವು ಪಾದಯಾತ್ರೆ ಮಾಡುತ್ತಿಲ್ಲ. ಕಾಂಗ್ರೆಸಿಗರೆ ನಮ್ಮನ್ನು ಕಾಪಿ ಮಾಡುತ್ತಿದ್ದಾರೆ ಎಂದರು.
ತುಮಕೂರಿನಲ್ಲಿ ನಡೆದ ಭಾರತ್ ಜೋಡೊದಲ್ಲಿ ೫ ಕಿ.ಮೀ. ಕೂಡ ನಡೆಯಲು ಕಾಂಗ್ರೆಸಿಗರಿಗೆ ಆಗಲಿಲ್ಲ. ವಾಲ್ಮೀಕಿ ಜಯಂತಿಯಂದು ರಾಹುಲ್ ಗಾಂಧಿ ವಾಲ್ಮೀಕಿಗೆ ಅಪಮಾನ ಮಾಡಿದ್ದಾರೆ. ವಾಲ್ಮೀಕಿಯ ಫೋಟೊ ಇದ್ದ ಸ್ಟೇಜ್ ಕಡೆಗೂ ಕಾಂಗ್ರೇಸ್ ನಾಯಕರು ಸುಳಿಯದಿರೋದು ದುರಾದೃಷ್ಟ. ಓಟಿಗಾಗಿ ಇವರು ಭಾರತ್ ಜೋಡೊ ಮೂಲಕ ನಾಟಕವಾಡುತ್ತಿದ್ದಾರೆ. ದೇಶದ ಸಂಸ್ಕೃತಿಗೆ ಮರ್ಯಾದೆ ಕೊಡುವ ಕೆಲಸವನ್ನ ಅವರು ಕಲಿತೆ ಇಲ್ಲ. ಭಾರತ್ ಜೋಡೊದಲ್ಲಿ ಆರ್‌ಎಸ್‌ಎಸ್ ಬಗ್ಗೆ ಸಾರ್ವಕರ್ ಬಗ್ಗೆ ಮಾತನಾಡೋಕೆ ಏನಿದೆ? ಮುಸಲ್ಮಾನ ಓಟಿಗಾಗಿ ಕಾಂಗ್ರೆಸಿಗರು ಈ ರೀತಿ ಮಾಡುತ್ತಿದ್ದಾರೆ. ಜನರು ಕೊನೆಯದಾಗಿ ಭಾರತ್ ಚೋಡೊ ದಿನವನ್ನು ನೀಡುತ್ತಾರೆ ಎಂದು ಲೇವಡಿ ಮಾಡಿದರು.