ಹನೂರು: ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿರುವ ಘಟನೆ ಹನೂರು ತಾಲ್ಲೂಕಿನ ಜಡೇಗೌಡನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಜರುಗಿದೆ.
ಪಿಜಿಪಾಳ್ಯ ಗ್ರಾಪಂ ವ್ಯಾಪ್ತಿಯ ಜಡೇಗೌಡನದೊಡ್ಡಿ ಗ್ರಾಮದಲ್ಲಿ ಟಿಸಿ ಗೆ ಅಳವಡಿಸಿರುವ ಕೇಬಲ್ ದುರಸ್ತಿಗೊಂಡು 5ತಿಂಗಳು ಕಳೆದಿದ್ದರೂ ಸಹ ಇದುವರೆಗೂ ಸಮಸ್ಯೆ ಬಗೆ ಹರಿಸದೇ ಇರುವುದರಿಂದ ಗ್ರಾಮಸ್ಥರು ಕಗ್ಗತ್ತಲಲ್ಲಿ ಜೀವನ ನಡೆಸುವಂತಹ ಪರಿಸ್ಥಿತಿ ಬಂದೊದಗಿದೆ.
ಗ್ರಾಮದಲ್ಲಿ 45ಕ್ಕೂ ಹೆಚ್ಚು ಕುಟುಂಬಗಳಿದ್ದು ಸುಮಾರು 170 ಜನಸಂಖ್ಯೆಯನ್ನು ಹೊಂದಿದೆ.ಗ್ರಾಮವು ಮಲೆಮಹದೇಶ್ವರ ವನ್ಯಧಾಮದ ಕಾಡಂಚಿನಲ್ಲಿರುವುದರಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಸೋಮವಾರ ತಡರಾತ್ರಿ ಆನೆಗಳ ಹಿಂಡು ಗ್ರಾಮಕ್ಕೆ ಬಂದು ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ ಅಲ್ಲದೆ ಸೋಲಾರ್ ತಂತಿ ಮುರಿದು ಹಾಕಿದ್ದು ಲಕ್ಷಾಂತರ ರೂ ನಷ್ಟವಾಗಿದೆ ಎಂದು ರುದ್ರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಮಲ್ಲಮ್ಮ ಮಾತನಾಡಿ ನಮ್ಮ ಹಾಡಿಯಲ್ಲಿ ಕುಡಿಯುವ ನೀರಿಗೂ ಸಹ ತೀವ್ರ ತೊಂದರೆಯಾಗಿದೆ. ಗಾಳಿ ಮಳೆ ಬೀಳುವ ಸಂದರ್ಭದಲ್ಲಿ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.ವಿದ್ಯುತ್ ಇಲ್ಲದೇ ಇರುವುದರಿಂದ ಮೊಬೈಲ್ ಚಾರ್ಜ್ ನ್ನು ಸಹ ಮಾಡಿಕೊಳ್ಳಲು ಸಾಧ್ಯವಾಗದೆ ಪರಿತಪಿಸುವಂತಾಗಿದೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಸಹ ತೊಂದರೆಯಾಗಿದ್ದು ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಯಾವುದೇ ಪ್ರಯೋಜನವಿಲ್ಲ ಈ ಹಿನ್ನೆಲೆ ಗ್ರಾಮದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದಾಗಿ ಆಂದೋಲನ ಪತ್ರಿಕೆಗೆ ತಿಳಿಸಿದ್ದಾರೆ .
ಜಡೇಗೌಡನದೊಡ್ಡಿ ಗ್ರಾಮದಲ್ಲಿ ಕೇಬಲ್ ದುರಸ್ತಿಗೊಂಡಿರುವ ಬಗ್ಗೆ ಕಿರಿಯ ಅಭಿಯಂತರರು ನನ್ನ ಗಮನಕ್ಕೆ ತಂದಿರಲಿಲ್ಲ ಇದೀಗ ನೀವು (ಮಾಧ್ಯಮದವರು)ಗಮನಕ್ಕೆ ತಂದಿದ್ದು ಈ ದಿನವೇ ಸಮಸ್ಯೆಯನ್ನು ಬಗೆಹರಿಸುತ್ತೇನೆ.
ಶಂಕರ್ .ಎಇಇ ಸೆಸ್ಕಾಂ ಹನೂರು ಉಪ ವಿಭಾಗ