ಬಂಡೀಪುರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ರಸ್ತೆಗೆ ಬಂದ ಗಜರಾಜನ ಜೊತೆ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳಲು ಹುಚ್ಚಾಟ ನಡೆಸಿರುವ ಘಟನೆ ನಡೆದಿದೆ.
ಬಂಡೀಪುರ ಅರಣ್ಯದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ಪ್ರವಾಸಿಗರು ಕಾಡು ಪ್ರಾಣಿಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ರಸ್ತೆಗೆ ಬಂದ ಕಾಡಾನೆಯನ್ನು ಕಂಡ ಪ್ರವಾಸಿಗರು ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಅಠಾತ್ತನೇ ಬಂದ ಆನೆಯನ್ನು ಕಂಡು ಪ್ರವಾಸಿಗರು ವಾಪಸ್ ಆಗಿದ್ದಾರೆ.
ಈ ಘಟನೆಗಳು ಅರಣ್ಯ ರಸ್ತೆಯಲ್ಲಿ ಪದೇ ಪದೇ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಕ್ರಮ ವಹಿಸದೇ ಇರುವುದು ದುರ್ದೈವವೇ ಸರಿ ಎನ್ನುವಂತಾಗಿದೆ.
ಕಳೆದ ವಾರವೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಈಗಲೂ ಕೂಡ ಈ ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಪ್ರಾಣಿಪ್ರಿಯರು ಪ್ರಾಣಿಗಳ ಜೊತೆ ಚೆಲ್ಲಾಟ ಆಡುವ ಪ್ರವಾಸಿಗರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರಾಣಿಪ್ರಿಯರು ಒಂದು ವೇಳೆ ಆನೆ ಈ ಮೂರ್ಖರನ್ನು ತುಳಿದಿದ್ದರೆ, ಅದನ್ನು ಸೆರೆಹಿಡಿಯಲು ಪದೇ ಪದೇ ಆಗ್ರಹ ಕೇಳಿಬರುತ್ತಿತ್ತು. ಆದರೆ ವನ್ಯಜೀವಿಗಳ ಆವಾಸಸ್ಥಾನಗಳಲ್ಲಿ ಪ್ರವಾಸಿಗರು ಅನುಚಿತವಾಗಿ ವರ್ತಿಸಿದರೆ ಅಂತಹವರ ವಿರುದ್ಧ ಅರಣ್ಯ ಸಿಬ್ಬಂದಿ ಏನೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಘಟನೆಗಳು ನಡೆಯದಂತೆ ಅರಣ್ಯ ಇಲಾಖೆ ಹಾಗೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.





