ಹನೂರು: ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮ ಸಮೀಪದ ರೈತರ ಜಮೀನಿಗೆ ಕಾಡಾನೆಯೊಂದು ಲಗ್ಗೆ ಇಟ್ಟು ಆತಂಕ ಸೃಷ್ಟಿಸಿದೆ.
ಪಿ.ಜಿ.ಪಾಳ್ಯ ವನ್ಯಜೀವಿ ವಲಯದಿಂದ ಬಂದ ಕಾಡಾನೆ ಬಾಲಾಜಿ ಎಂಬ ರೈತನ ಜಮೀನಿಗೆ ಲಗ್ಗೆ ಇಟ್ಟು ಬೆಳೆದಿದ್ದ ಬೆಳೆಯನ್ನು ನಾಶಗೊಳಿಸಿದೆ. ರೈತರು ಬ್ಯಾಟರಿ ಬೆಳಕು ಹಾಗೂ ಪಟಾಕಿಗಳ ಸಹಾಯದಿಂದ ಆನೆಯನ್ನು ಕಾಡಿಗೆ ಓಡಿಸಲು ಹರಸಾಹಸಪಟ್ಟಿದ್ದಾರೆ.
ಪಿ.ಜಿ.ಪಾಳ್ಯ, ಹುತ್ತೂರು, ಬೈಲೂರು, ಹುಣಿಸೆ ಪಾಳ್ಯ ಗ್ರಾಮದ ಜಮೀನುಗಳ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ರೈತರು ಬೆಳೆದ ಬೆಳೆಗಳು ಕಾಡುಪ್ರಾಣಿಗಳ ಪಾಲಾಗುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು. ನಷ್ಟ ಪರಿಹಾರ ನೀಡಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.





