ಹನೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿವೇಶನಗಳ ದಾಖಲಾತಿಗಳು ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಡ್ರೋನ್ ಮುಖಾಂತರ ನಿವೇಶನಗಳನ್ನು ಗುರುತಿಸಿ ಪಿಆರ್ ಕಾರ್ಡ್ ನೀಡಲು ಸ್ವಾಮಿತ್ವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ಎಂಆರ್ ಮಂಜುನಾಥ್ ತಿಳಿಸಿದರು.
ತಾಲೂಕಿನ ಅಜ್ಜಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾಮಿತ್ವ ಯೋಜನೆ ಗ್ರಾಮ ಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ನಿವೇಶನಗಳನ್ನು ಡ್ರೋನ್ ಹಾಗೂ ಯುಎಬಿ ತಂತ್ರಜ್ಞಾನದ ಮೂಲಕ ಸರ್ವೆ ನಡೆಸಿ ಡ್ರೋನ್ ಮುಖಾಂತರ ನಿಮ್ಮ ಜಾಗದ ಅಳತೆಯನ್ನು ನಡೆಸಿ ನಿಮಗೆ ಪಿ ಆರ್ ಕಾರ್ಡ್ ವಿತರಣೆ ಮಾಡಲಾಗುವುದು, ಈ ಪಿಆರ್ ಕಾರ್ಡಿನಲ್ಲಿ ನಿಮ್ಮ ನಿವೇಶನಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಸಿಗುತ್ತದೆ. ಇದಲ್ಲದೆ ನೀವು ನಿಮ್ಮ ಜಾಗದ ಸಂಪೂರ್ಣ ಮಾಹಿತಿಯನ್ನು ಮೊಬೈಲ್ ಮುಖಾಂತರ ತಿಳಿದುಕೊಳ್ಳಬಹುದು ಈ ಯೋಜನೆಯನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಯು.ಎ.ವಿ ತಂತ್ರಜ್ಞಾನದ ಮೂಲಕ ಹಾಗೂ ಡ್ರೋನ್ ಮುಖಾಂತರ ಪ್ರಾಯೋಗಿಕವಾಗಿ ಅಜ್ಜಿಪುರ ಮತ್ತು ಸುಳ್ಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸರ್ವೆ ಮಾಡಲಾಗುತ್ತಿದೆ ಮುಂದಿನ ದಿನಗಳಲ್ಲಿ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಈ ಯೋಜನೆ ಮುಂದುವರೆಯಲಿದೆ, ಮೊದಲು ಗ್ರಾಮಪಟಣ ವ್ಯಾಪ್ತಿಗಳಲ್ಲಿ ಸರ್ವೆ ನಡೆಸಲಾಗುವುದು ನಂತರ ಮರು ಸರ್ವೆ ನಡೆಸಿ ಜಮೀನುಗಳಲ್ಲಿ ನಿರ್ಮಾಣ ಮಾಡಿಕೊಂಡಿರುವ ಮನೆ ಹಾಗೂ ನಿವೇಶನಗಳ ಬಗ್ಗೆ ಸರ್ವೆ ಮಾಡಿಸಿ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಡಿಡಿ ಎಲ್ ಆರ್ ವಿದ್ಯಾರಾಣಿ ಮಾತನಾಡಿ ಕಳೆದ 50 ವರ್ಷಗಳ ಹಿಂದೆ ಕಂದಾಯ ಕಟ್ಟಿರುವ ಜಮೀನುಗಳಿಗೆ ಮಾತ್ರ ಸರ್ವೆ ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಠಾಣಾ ಆಸ್ತಿಗಳ ಬಗ್ಗೆ ಸಮರ್ಪಕ ದಾಖಲಾತಿಗಳು ಲಭ್ಯವಿಲ್ಲದೆ ಇರುವುದರಿಂದ ಇದೀಗ ಡ್ರೋನ್ ಮುಖಾಂತರ ನಿವೇಶನಗಳನ್ನು ಸರ್ವೆ ಮಾಡಲಾಗುತ್ತಿದೆ. ನಿವೇಶನದ ಮಾಲೀಕರು ಹಾಗೂ ಗ್ರಾಮ ಪಂಚಾಯಿತಿಯವರ ಜೊತೆ ಚರ್ಚೆ ನಡೆಸಿ ಪಿಆರ್ ಕಾರ್ಡ್ ಗಳ ಡ್ರಾಪ್ಟಗಳನ್ನು ವಿತರಿಸಲಾಗುತ್ತಿದೆ. ಈ ಕಾಡಿನಲ್ಲಿ ಯಾವುದಾದರೂ ತೊಂದರೆಗಳಿದ್ದಲ್ಲಿ ಪಂಚಾಯಿತಿ ಪಿಡಿಒ ಅಧಿಕಾರಿಗಳ ಮುಖಾಂತರ ಸರಿಪಡಿಸಿಕೊಳ್ಳಬೇಕು. ಯಾವುದೇ ತೊಂದರೆಗಳಿಲ್ಲದಿದ್ದರೆ 30 ದಿನಗಳ ಒಳಗಾಗಿ ನಿಮ್ಮ ಸಂಪೂರ್ಣ ಮಾಹಿತಿಯುಳ್ಳ ಪಿಆರ್ ಕಾರ್ಡ್ ವಿತರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಗುರುಪ್ರಸಾದ್, ಇಒ ಉಮೇಶ್, ಎಡಿಎಲ್ ಆರ್ ನಟರಾಜು, ಸರ್ವೆ ಸೂಪರ್ವೈಸರ್ ಭಾನುರೇಖಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರ ನಾಯಕ್, ಉಪಾಧ್ಯಕ್ಷ ಪ್ರಭುಸ್ವಾಮಿ, ಸದಸ್ಯರಾದ ಚಂದ್ರು, ಮುರುಳಿ, ರಾಜೇಂದ್ರ ಸೈಯದ್ ಜಬ್ಬಾರ್, ಕೃಷ್ಣಮೂರ್ತಿ, ಶಿವಮೂರ್ತಿ, ರಾಜೇಂದ್ರ, ಪಿಡಿಒ ನಂದೀಶ್, ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಇನ್ನಿತರರು ಹಾಜರಿದ್ದರು .