Mysore
21
overcast clouds

Social Media

ಗುರುವಾರ, 10 ಅಕ್ಟೋಬರ್ 2024
Light
Dark

ಹನೂರು ಪಟ್ಟಣದಲ್ಲಿ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ

ಹನೂರು: ಮುಂದಿನ ಯುವಪೀಳಿಗೆಗೆ ಉತ್ತಮ ಸಂದೇಶ ರವಾನೆ ಮಾಡುವ ನಿಟ್ಟಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ಶಾಸಕ ಎಂಆರ್ ಮಂಜುನಾಥ್ ತಿಳಿಸಿದ್ದಾರೆ.

ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ವ್ಯಾಪ್ತಿಯಲ್ಲಿರುವ ನಾಯಕ ಸಮಾಜದವರನ್ನು ಒಗ್ಗೂಡಿಸಿಕೊಂಡು ಕಳೆದ ವರ್ಷ ವಿಜೃಂಭಣೆಯಿಂದ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಈ ಬಾರಿಯೂ ವಿಶಿಷ್ಟವಾಗಿ ಆಚರಣೆ ಮಾಡಲು ನನ್ನ ಸಹಕಾರ ನಿಮಗೆ ಇದ್ದೇ ಇರುತ್ತದೆ. ಮಹನೀಯರ ಜಯಂತಿಗಳನ್ನು ಆಚರಣೆ ಮಾಡುವಾಗ ಅವರ ಜೀವನ ಚರಿತ್ರೆಯನ್ನು ತಿಳಿದುಕೊಂಡು ಅವರ ಹಾದಿಯಲ್ಲಿ ಮುನ್ನಡೆಯಲು ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ನಾಯಕ ಸಮಾಜದ ತಾಲೂಕು ಅಧ್ಯಕ್ಷ ಪುಟ್ಟ ವೀರನಾಯಕ ಮಾತನಾಡಿ, ಸರ್ಕಾರ ನಿಗದಿ ಪಡಿಸಿರುವಂತೆ ಅಕ್ಟೋಬರ್.17ರಂದು ಸಾಂಪ್ರದಾಯಿಕವಾಗಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಿ. ಅಕ್ಟೋಬರ್.22ರಂದು ತಾಲೂಕು ಸಮುದಾಯದವರೆಲ್ಲರೂ ಸೇರಿ ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಮಾಡಲು ತೀರ್ಮಾನ ಮಾಡಿದ್ದೇವೆ. ಹೀಗೆ ಶಾಸಕರು, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಮಾಜದ ಹಿರಿಯ ಮುಖಂಡ ವೆಂಕಟಾಚಲ ಮಾತನಾಡಿ, ಹನೂರು ತಾಲೂಕು ವ್ಯಾಪ್ತಿಯಲ್ಲಿ ನಾಯಕ ಸಮಾಜದವರು ಹೆಚ್ಚಾಗಿ ಇದ್ದೇವೆ. ಆದರೆ ಹನೂರು ತಾಲೂಕು ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ನಿವೇಶನ ಗುರುತಿಸಿಲ್ಲ. ಆದಷ್ಟು ಬೇಗ ಸೂಕ್ತ ನಿವೇಶನ ನೀಡಿ ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಈಗಾಗಲೇ ನಿವೇಶನ ಹುಡುಕಾಟದಲ್ಲಿದ್ದು, ಆದಷ್ಟು ಬೇಗ ಸಮುದಾಯಕ್ಕೆ ಸಿಹಿಸುದ್ದಿ ನೀಡಲಾಗುವುದು ಎಂದರು.

ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹನೂರು ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ನನಗೆ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದೆ. ಅದರಂತೆ ಕ್ಷೇತ್ರದ ಜನರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ನಾನು ಕ್ಷೇತ್ರದ ಅಭಿವೃದ್ಧಿ ಮಾಡಿದರೆ ನನ್ನನ್ನು ಮುಂದಿನ ಚುನಾವಣೆಯಲ್ಲಿ ಬೆಂಬಲಿಸಿ, ಇಲ್ಲದಿದ್ದರೆ ತಿರಸ್ಕಾರ ಮಾಡಿ ಎಂಬ ಮಾತಿಗೆ ಬದ್ಧನಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಕ್ಷೇತ್ರ ವ್ಯಾಪ್ತಿಯಲ್ಲಿರುವ ರಸ್ತೆಗಳ ಅಭಿವೃದ್ಧಿಗೆ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಪರಿಶಿಷ್ಟ ಪಂಗಡದ ಜನಾಂಗ ಇರುವ ಕಡೆ ಸಿಸಿ ರಸ್ತೆ, ಚರಂಡಿ ನಿರ್ಮಾಣ ಮಾಡಲು ಎಷ್ಟು ಅನುದಾನಬೇಕೆಂದು ಕ್ರಿಯಾಯೋಜನೆ ಮಾಡಲಾಗುತ್ತಿದೆ. ನಂತರ ಹಂತ ಹಂತವಾಗಿ ಅನುದಾನ ತಂದು ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ತಹಸಿಲ್ದಾರ್ ವೈ ಕೆ ಗುರುಪ್ರಸಾದ್, ಇಒ ಉಮೇಶ್, ತಾಲೂಕು ವೈದ್ಯಾಧಿಕಾರಿ ಡಾ ಪ್ರಕಾಶ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಶ್, ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್ ನಾಯಕ ಸೇರಿದಂತೆ ಸಮುದಾಯದ ಮುಖಂಡರುಗಳು ಹಾಜರಿದ್ದರು.

 

 

Tags: