ಚಾಮರಾಜನಗರ : ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನಾ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ತಮಿಳುನಾಡು ಮೂಲದ ಓರ್ವ ಸೇರಿದಂತೆ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹುಲಿ ಬೇಟೆಯಾಡಿದ್ದ ಹಸುವಿಗೆ ಕ್ರಿಮಿನಾಶಕ ಹಾಕಿರುವ ಶಂಕೆಯ ಮೇರೆಗೆ ಆರು ಮಂದಿಯನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆದಿದೆ. ಇನ್ನೂ ಗ್ರಾಮಸ್ಥರನ್ನು ಸಹ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಹುಲಿಗಳ ಮೃತದೇಹಗಳು ದೊರೆತ ಸ್ಥಳದಲ್ಲಿಯೇ ಹಸುವಿನ ಶವ ಕೂಡ ಸಿಕ್ಕಿದ್ದು, ಮೃತಪಟ್ಟಿರುವ ಹಸುವಿನ ಮಾಲೀಕ ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ, ಪೊಲೀಸರು ಹಸು ಮಾಲೀಕನ ಪತ್ತೆ ಹಚ್ಚುವ ಕಾರ್ಯ ಚುರುಕುಗೊಳಿಸಿದ್ದು, ಸಿಡಿಯರ್ ಮತ್ತು ಟವರ್ ಲೊಕೇಶನ್ ಆಧಾರದಲ್ಲಿ ವಿಷ ಹಾಕಿದವರ ಮತ್ತು ಮಾಲೀಕನ ಪತ್ತೆಗೆ ಬಲೆ ಬೀಸಿದ್ದಾರೆ.
ಹುಲಿ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಆಶ್ವಾಸನೆ ನೀಡಿದೆ. ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಕೈಸೇರಿದ ಬಳಿಕ ಸಾವಿಗೆ ನಿಖರ ಕಾರಣ ಏನೆಂಬುದು ತಿಳಿಯಲಿದೆ.





