ಗುಂಡ್ಲುಪೇಟೆ : ತಾಲ್ಲೂಕಿನ ದೇಶಿಪುರ ಕಾಲೋನಿಯಲ್ಲಿ ಪುಟ್ಟಮ್ಮ ಎಂಬ ಗಿರಿಜನ ಮಹಿಳೆ ಹುಲಿ ದಾಳಿಯಿಂದ ಮೃತಪಟ್ಟ ಬಳಿಕ ಆತಂಕದಲ್ಲಿರುವ ಜನತೆಗೆ ಈಗ ಹಾಲಹಳ್ಳಿ ಜಮೀನೊಂದರಲ್ಲಿ ಕುಳಿತು ಘರ್ಜಿಸುತ್ತಿರುವ ಹುಲಿಯ ದರ್ಶನವಾಗಿರುವುದು ಕಂಗಾಲಾಗಿಸಿದೆ.
ಜಮೀನಿನಲ್ಲಿ ಹುಲಿ ಕುಳಿತು ಗರ್ಜಿಸುತ್ತಿದ್ದುದನ್ನು ಜಮೀನಿನವರು ದೂರದಿಂದಲೇ ನೋಡಿ ವಿಡಿಯೋ ಮಾಡಿದ್ದು, ಅದು ಎಲ್ಲೆಡೆ ಹರಿದಾಡುತ್ತಿದೆ. ಹುಲಿ ಕಾಣಿಸಿಕೊಂಡಿರುವ ವಿಚಾರ ಈಗ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಹೊರವಲಯದ ತೋಟಪ್ಪ ಎಂಬವರ ಜಮೀನಿನಲ್ಲಿ ಪಂಪ್‌ಸೆಟ್ ಮನೆ ಮೇಲೆ ಕುಳಿತು ಗರ್ಜಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ: ಚಾಮರಾಜನಗರ | ಬಹಿರ್ದೆಸೆಗೆ ಹೋಗಿದ್ದ ವ್ಯಕ್ತಿಯ ಮೇಲೆ ಹುಲಿ ದಾಳಿ
ತಾಲ್ಲೂಕಿನ ಹಾಲಹಳ್ಳಿ, ಸೋಮಹಳ್ಳಿ, ಪಡಗೂರು, ಸಂಪಿಗೆಪುರ, ಕಲ್ಲಹಳ್ಳಿ, ಕುರುಬರಹುಂಡಿ ಸೇರಿದಂತೆ ಅನೇಕ ಕಡೆಗಳಲ್ಲಿ ಹುಲಿ ಕಾಣಿಸಿಕೊಂಡಿದ್ದು ಮನುಷ್ಯರ ಮೇಲೆ ಅದು ದಾಳಿ ಮಾಡುವ ಮೊದಲೇ ಅರಣ್ಯ ಇಲಾಖೆ ಹುಲಿ ಸೆರೆ ಹಿಡಿಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇತ್ತ ಮಹಿಳೆ ಕೊಂದು ಹಾಕಿದ್ದ ಹುಲಿ ಸೆರೆಗೆ ದೇಶಿಪುರ ಕಾಲೋನಿಯಲ್ಲಿ ಆನೆಯೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ನಡೆಸುತ್ತಿದ್ದಾರೆ. ಆದರೆ, ಹುಲಿಯ ಚಲನವಲನ ಕಂಡುಬಂದಿಲ್ಲ.




