ಹನೂರು: ಪವಾಡ ಪುರುಷ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಪು, ಶ್ಯಾಂಪು ಬಳಕೆಗೆ ನಿಷೇಧ ವಿಧಿಸಲಾಗಿದೆ.
ಅಂತರಗಂಗೆಯ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪು ಮಾರಾಟಕ್ಕೂ ನಿರ್ಬಂಧ ವಿಧಿಸಲಾಗಿದೆ ಎಂದು ಮಲೆಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಅಂತರಗಂಗೆಯಲ್ಲಿ ನಿತ್ಯ ನೂರಾರು ಭಕ್ತರು ಸ್ನಾನ ಮಾಡುತ್ತಾರೆ. ಸೋಪು, ಶ್ಯಾಂಪು ಬಳಕೆಯಿಂದ ನೀರು ಮಲಿನಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಂತರಗಂಗೆಯ ಶುಚಿತ್ವ, ಪಾವಿತ್ರ್ಯತೆ ಕಾಪಾಡಲು ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ.
ಈ ಸಂಬಂಧ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಯಾರಾದರೂ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.