ಹನೂರು : ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಶಾಗ್ಯ ಶಾಖೆಯ ಹೊಳೆಮುರದಟ್ಟಿ ಗಸ್ತಿನ ಕಿರಬನಕಲ್ಲು ಅರಣ್ಯ ಪ್ರದೇಶದಲ್ಲಿ ಆಗಸ್ಟ್ 12 ರಂದು ಎರಡು ಹುಲಿ ಮರಿಗಳ ಸಾವು ಮಾಸುವ ಮುನ್ನವೇ ಚಿರತೆಯ ಕಳೇಬರ ಪತ್ತೆಯಾಗಿರುವುದು ವನ್ಯಜೀವಿ ಪ್ರಿಯರಲ್ಲಿ ಆತಂಕವನ್ನುಂಟು ಮಾಡಿದೆ.
ಹನೂರು ವಲಯದ ಬಂಡಳ್ಳಿ ಶಾಖೆಯ ಮೇಕೆದಾಟು ಗಸ್ತಿನ ತಮ್ಮಡಿ ಬಾವಿ ಹಳ್ಳ ಕಾಡು ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಗಸ್ತು ತಿರುಗುವಾಗ ಅಂದಾಜು 5 ವರ್ಷದ ಹೆಣ್ಣು ಚಿರತೆಯ ಕಳೆಬರ ಪತ್ತೆಯಾಗಿದೆ. ಮೃತ ಚಿರತೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದು, ಚಿರತೆಯ ಹಿಂಗಾಲುಗಳ ಪಾರ್ಶ್ವ ವಾಯುವಿನಿಂದ ಸ್ವಾಧೀನ ಕಳೆದುಕೊಂಡಿವೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಅನಾರೋಗ್ಯವೆಂದು ಭಾವಿಸಿದರೂ ಚಿರತೆಯ ಸಾವಿನ ನಿಖರ ಕಾರಣ ತಿಳಿಯಲು ಪ್ರಮುಖ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮರಣೋತ್ತರ ಪರೀಕ್ಷೆಯ ಬಳಿಕ ಎನ್‌ಟಿಸಿಎ ಸದಸ್ಯರನ್ನೊಳಗೊಂಡ ತಂಡದ ಸಮ್ಮುಖದಲ್ಲಿ ಚಿರತೆಯ ಮೃತದೇಹವನ್ನು ನಿಯಮಾನುಸಾರ ಸುಡಲಾಯಿತು ಎಂದು ಕಾವೇರಿ ವನ್ಯಜೀವಿ ವಲಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಳು ಹುಲಿಗಳ ಸಾವು: ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ 2025ರ ಜೂನ್ 26ರಂದು ಒಂದು ತಾಯಿ ಹುಲಿ ಮತ್ತು ಅದರ ನಾಲ್ಕು ಮರಿಗಳು ಸೇರಿ ಐದು ಹುಲಿಗಳು ವಿಷ ಸೇವನೆಯಿಂದ ಸಾವಿಗೀಡಾದವು. ಈ ಪ್ರಕರಣ ರಾಜ್ಯದಲ್ಲಿ ಭಾರಿ ಸುದ್ದಿಯಾಗಿ ಜನರ ಆಕ್ರೋಶಕ್ಕೂ ಕಾರಣವಾಗಿತ್ತು.
ಕಳೆದ ಮಂಗಳವಾರವೂ ಕಾವೇರಿ ವನ್ಯಜೀವಿಧಾಮದ ಹೊಳೆಮರದೊಟ್ಟಿಗಸ್ತಿನ ಕಿರಬನ ಕಲ್ಲು ಅರಣ್ಯ ಪ್ರದೇಶದಲ್ಲಿಯೂ ಎರಡು ಹುಲಿಮರಿಗಳ ಮೃತಪಟ್ಟಿವೆ. ಒಟ್ಟಾರೆ ಎರಡು ತಿಂಗಳ ಅವಧಿಯಲ್ಲಿ 7 ಹುಲಿ 2 ಚಿರತೆ ಮೃತಪಟ್ಟಿವೆ.





