ಹನೂರು : ಕಾಡಾನೆಯೊಂದು ತಡರಾತ್ರಿ ಸರ್ಕಾರಿ ಶಾಲೆಯ ಕಾಂಪೌಂಡ್ ಗೇಟ್, ಕುಡಿಯುವ ನೀರಿನ ಪೈಪ್‌ಗಳನ್ನು ನಾಶ ಮಾಡಿರುವ ಘಟನೆ ಬುಧವಾರ ರಾತ್ರಿ ಮಲೆ ಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುತ್ತುಗೋಡೆ, ಕಬ್ಬಿಣದ ಗೇಟ್‌ಗೆ ಹಾನಿ ಮಾಡಿದ್ದು ಉಳಿದಂತೆ ಪೈಪ್‌ಗಳನ್ನು ನಾಶಪಡಿಸಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:-ತರಾತುರಿ ಜಾತಿ ಸಮೀಕ್ಷೆಯಲ್ಲಿ ಅನಗತ್ಯ ಪ್ರಶ್ನೆಗಳು ಏಕೆ : ಆರ್.ಅಶೋಕ ಪ್ರಶ್ನೆ
ಸರ್ಕಾರಿ ಶಾಲೆಯ ಕಟ್ಟಡದ ಮೇಲೆ ಕಾಡಾನೆ ಈ ಹಿಂದೆಯೂ ದಾಳಿ ಮಾಡಿ ಸುತ್ತು ಗೋಡೆ, ಕಬ್ಬಿಣದ ಗೇಟ್ ಮುರಿದಿತ್ತು. ಆದರೂ ಸಂಬಂಧ ಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸೋಲಾರ್ ತಂತಿ ಬೇಲಿ ಅಳವಡಿಸಿ :
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುತ್ತಲೂ ಸೋಲಾರ್ ತಂತಿಯನ್ನು ಅಳವಡಿಸಬೇಕು, ಆನೆ ಕಂದಕಗಳನ್ನು ನಿರ್ಮಾಣ ಮಾಡಬೇಕು. ಆ ಮೂಲಕ ಸಾರ್ವಜನಿಕ ಆಸ್ತಿ-ಆಸ್ತಿಗಳನ್ನು ರಕ್ಷಣೆ ಮಾಡಲು ಸಂಬಂಧಪಟ್ಟ ಇಲಾಖೆಯವರು ಮುತುವರ್ಜಿ ವಹಿಸಬೇಕು. ಇಲ್ಲದಿದ್ದರೆ ಪದೇ ಪದೇ ಕಾಡಾನೆ ದಾಳಿ ಮಾಡುವ ಸಂಭವವಿರುತ್ತದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.





