ಚಾಮರಾಜನಗರ : ತಾಲ್ಲೂಕಿನ ಸಾಗಡೆ-ತಮ್ಮಡಹಳ್ಳಿ ಸಂಪರ್ಕ ರಸ್ತೆ ಬದಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಒಂದು ವಾರದ ಮಗು ಎಂದು ಅಂದಾಜಿಸಲಾಗಿದೆ.
ಸಾಗಡೆ ಗ್ರಾಮದ ಪರಮೇಶ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಬದಿ ಮಗುವಿನ ತಲೆ ಕಾಣಿಸಿದೆ. ಆ ವೇಳೆ ಬೈಕ್ ನಿಲ್ಲಿಸಿ ನೋಡಿದಾಗ ಮಗು ಎಂದು ಗೊತ್ತಾಗಿ ತಕ್ಷಣವೇ ಮಗುವನ್ನು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಕೊಂಡೊಯ್ದು ಅಲ್ಲಿನ ಅಂಗನವಾಡಿ ಕಾರ್ಯಕರ್ತೆ ನಾಗಮಣಿ, ಆಶಾ ಕಾರ್ಯಕರ್ತೆ ಆಶಾ, ಸಹಾಯಕ ಆರೋಗ್ಯ ಸಿಬ್ಬಂದಿ ಶಿಲ್ಪಾ ಅವರಿಗೆ ಒಪ್ಪಿಸಿದ್ದಾರೆ.
ಈ ವಿಷಯ ತಿಳಿದು ಕೇಂದ್ರದತ್ತ ಗ್ರಾಮದ ಜನರು ಆಗಮಿಸಿ ಜನಸಂದಣಿ ಹೆಚ್ಚಾಯಿತು. ಬಳಿಕ ಮಗುವನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಆಂಬ್ಯುಲೆನ್ಸ್ ಮೂಲಕ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ನಾಗಮಣಿ ಮಾಹಿತಿ ನೀಡಿದರು.
ಮಗುವನ್ನು ಜಿಲ್ಲಾಸ್ಪತ್ರೆಯ ಮಕ್ಕಳ ಆರೈಕೆ ಘಟಕದಲ್ಲಿ ಇರಿಸಿ ನಿಗಾ ಇಡಲಾಗಿದೆ. ಪತ್ತೆಯಾಗಿರುವ ಮಗು ಒಂದು ವಾರದ ಮಗುವಾಗಿದ್ದು, ಬೆಳಿಗ್ಗೆ ಸ್ನಾನ ಮಾಡಿಸಿ ನೀಲಿ ಬಣ್ಣದ ಪಂಚೆಯಲ್ಲಿ ಸುತ್ತಿ ರಸ್ತೆ ಬದಿಯಲ್ಲಿ ಇಟ್ಟು ಪರಾರಿಯಾಗಿದ್ದಾರೆ. ಪೋಷಕರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ.





