ಮಹಾದೇಶ್ ಎಂ ಗೌಡ
ಹನೂರು: ಹಲವು ದಿನಗಳಿಂದ ರೈತರಿಗೆ ತೊಂದರೆ ನೀಡುತ್ತಿರುವ ತಾಯಿ ಚಿರತೆ ಸೆರೆ ಹಿಡಿಯಲು ಬೋನಿನಲ್ಲಿ ಇಡಲಾಗಿದ್ದ ಎರಡು ಚಿರತೆ ಮರಿಗಳ ಪೈಕಿ ಒಂದನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿರುವ ದೃಶ್ಯ ಅರಣ್ಯ ಇಲಾಖೆಯ ಕ್ಯಾಮರದಲ್ಲಿ ಸೆರೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಹನೂರು ತಾಲೂಕಿನ ಕೆ ಗುಂಡಾಪುರ ಗ್ರಾಮದ ಸಮೀಪ ಕಬ್ಬು ಕಟಾವು ಮಾಡುವ ವೇಳೆ ಸಿಕ್ಕ ಎರಡು ಚಿರತೆ ಮರಿಗಳ ಮೂಲಕ ತಾಯಿ ಚಿರತೆ ಸೆರೆ ಹಿಡಿಯಲು ಬೋನು ಇಡಲಾಗಿತ್ತು. ಆದರೆ ಚಾಲಾಕಿ ಚಿರತೆ ತನ್ನ ಒಂದು ಮರಿಯನ್ನು ಎತ್ತಿಕೊಂಡು ಮತ್ತೊಂದು ಮರೆ ಚಿರತೆಯನ್ನು ಅಲ್ಲೇ ಬಿಟ್ಟು ಹೋಗಿರುವ ದೃಶ್ಯ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹನೂರು ಪಟ್ಟಣದ ನಿವಾಸಿ ಪ್ರಕಾಶ್ ರವರಿಗೆ ಗುಂಡಾಪುರ ಗ್ರಾಮದಲ್ಲಿ ವ್ಯವಸಾಯದ ಜಮೀನಿದ್ದು, ಇದರಲ್ಲಿ ಕಬ್ಬು ಬೆಳೆದಿದ್ದರು. ಕಬ್ಬು ಕಟಾವು ಮಾಡುವ ವೇಳೆ ಎರಡು ಚಿರತೆ ಮರಿಗಳು ಸಿಕ್ಕಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಮರಿಯನ್ನು ರಕ್ಷಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೇರೆಡೆಗೆ ಬಿಡಲು ತೀರ್ಮಾನಿಸಿದ್ದರು.
ಇದನ್ನೂ ಓದಿ:-ಮತ್ತೆ ಮುನ್ನೆಲೆಗೆ ಬಂದ ಲಿಂಗಾಯತ ಪ್ರತ್ಯೇಕ ಧರ್ಮದ ಚರ್ಚೆ
ಆದರೆ ರೈತ ಮುಖಂಡರುಗಳು ಮರಿ ಚಿರತೆಗಳನ್ನು ಬೋನಿನಲ್ಲಿ ಇಟ್ಟು ತಾಯಿ ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು. ಅರಣ್ಯ ಇಲಾಖೆಯವರು ಬೋನು ತಂದು ಇರಿಸಿ ಚಿರತೆ ಮರಿಗಳನ್ನು ಬೋನಿನ ಒಂದು ಬಾಕ್ಸ್ ನಲ್ಲಿ ಹಾಕಿ ತಾಯಿ ಚಿರತೆಗಾಗಿ ಕಾದು ಕುಳಿತಿದ್ದರು. ಕಳೆದ ಒಂದು ವಾರದಿಂದ ರಾತ್ರಿ ವೇಳೆ ಮರಿಗಳನ್ನೇ ಬೋನಿನಲ್ಲಿ ಇಟ್ಟು ನಂತರ ಹನೂರು ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಅರಣ್ಯ ಇಲಾಖೆಯ ವಸತಿಗೃಹದಲ್ಲಿ ಪಾಲನೆ ಮಾಡಲಾಗುತ್ತಿತ್ತು. ಆದರೆ ಚಿರತೆ ಸೆರೆ ಹಿಡಿಯಲು ಎರಡು ಚಿರತೆ ಮರಿಗಳನ್ನು ಬೋನಿನಲ್ಲಿ ಇಟ್ಟಿದ್ದಾಗ ತಾಯಿ ಚಿರತೆ ಒಂದು ಮರಿ ಚಿರತೆಯನ್ನು ಬಾಯಲ್ಲಿ ಕಚ್ಚಿಕೊಂಡು ಕಾಡಿನತ್ತ ತೆರಳಿರುವ ದೃಶ್ಯ ಸೆರೆಯಾಗಿದೆ.
ಇನ್ನೊಂದು ಮರಿ ಚಿರತೆಗೆ ಭದ್ರತೆ ನೀಡಲಾಗಿದ್ದು ತಾಯಿ ಚಿರತೆ ಮತ್ತೊಮ್ಮೆ ಬರುವ ಸಾಧ್ಯತೆ ಇರುವ ಹಿನ್ನೆಲೆ ಬೋನನ್ನು ಹಿಡಲು ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರಿಗೂ ರಾತ್ರಿ ವೇಳೆ ಎಚ್ಚರಿಕೆಯಿಂದ ಇರುವಂತೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಹಾಗೂ ಅಜ್ಜೀಪುರ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಿಗೆ ಅನುಕೂಲ ಮಾಡಲು ತಾಯಿ ಚಿರತೆ ಸೆರೆ ಹಿಡಿಯಲು ಬೋನು ಇಟ್ಟಿದ್ದರು. ಆದರೆ ತಾಯಿ ಚಿರತೆ ಒಂದು ಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗಿರುವುದು ಕ್ಯಾಮರದಲ್ಲಿ ಸೆರೆಯಾಗಿದೆ ಇದು ಕಾಡಿನತ್ತ ಹೋಗಿದಿಯೋ ಅಥವಾ ರೈತರ ಜಮೀನಿನಲ್ಲಿ ಅನುಮಾನವಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಶೀಘ್ರದಲ್ಲಿಯೇ ಎರಡು ಮರಿ ಹಾಗೂ ತಾಯಿ ಚಿರತೆಯನ್ನು ಸೆರೆಹಿಡಿದು, ಬೇರೆಡೆಗೆ ಸ್ಥಳಾಂತರ ಮಾಡಬೇಕು. ಇಲ್ಲದಿದ್ದರೆ ರೈತರಿಗೆ ಮತ್ತಷ್ಟು ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.





