ಗುಂಡ್ಲುಪೇಟೆ : ತಾಲ್ಲೂಕಿನ ತೆರಕಣಾಂಬಿ ಸುತ್ತಮುತ್ತ ಎಗ್ಗಿಲ್ಲದೆ ಗಣಿಗಾರಿಕೆ ನಡೆಯುತ್ತಿದ್ದು ಮಧ್ಯರಾತ್ರಿಯಲ್ಲೂ ಬಿಳಿಕಲ್ಲು ತುಂಬಿಕೊಂಡು ಟಿಪ್ಪರ್‌ಗಳು ಸಂಚರಿಸುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮಧ್ಯರಾತ್ರಿಯಲ್ಲೂ ಟಿಪ್ಪರ್‌ಗಳು ಕಲ್ಲುಗಳನ್ನು ತುಂಬಿಕೊಂಡು ಸಂಚರಿಸುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಆರ್ ಟಿಒ, ಪೊಲೀಸ್ ಇಲಾಖೆಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದನ್ನು ಓದಿ: ಫಿಟ್ ಇಂಡಿಯಾ ಮೂಲಕ ಆರೋಗ್ಯ ಜಾಗೃತಿ : ಸಂಸದ ಯದುವೀರ್
ರಸ್ತೆಯಲ್ಲಿ ಟಿಪ್ಪರ್‌ಗಳ ಆರ್ಭಟದಿಂದ ಅಪಘಾತಗಳೂ ನಡೆಯುತ್ತಿವೆ. ಬೆಳಿಗ್ಗೆ ಸಂದರ್ಭದಲ್ಲಿ ಟಿಪ್ಪರ್‌ಗಳು ಅತಿ ವೇಗ ಮತ್ತು ಅಧಿಕ ಭಾರ ಹೊತ್ತು ಸಾಗುವುದರಿಂದ ಸಾಕಷ್ಟು ಅಪಘಾತ ಪ್ರಕರಣಗಳು ನಡೆದಿವೆ. ರಾತ್ರಿಯಲ್ಲಿ ನಿಯಮ ಮೀರಿ ಟಿಪ್ಪರ್‌ಗಳು ಸಂಚರಿಸುತ್ತಿದ್ದು, ಅಪಾಯವಾಗುವ ಮುನ್ನ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲವೇ ಸಾರ್ವಜನಿಕರು ಬೀದಿಗೆ ಇಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ತೆರಕಣಾಂಬಿ ಭಾಗದಲ್ಲಿ ರಾತ್ರಿ ೧೧ ಗಂಟೆಯಾದರೂ ಬಿಳಿ ಕಲ್ಲು ತುಂಬಿಕೊಂಡು ಟಿಪ್ಪರ್‌ಗಳು ಸಂಚರಿಸುತ್ತಿವೆ. ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ರಾಜಕೀಯ ಶಕ್ತಿ ಬಳಸಿಕೊಂಡು ಎಗ್ಗಿಲ್ಲದೆ ಗಣಿಗಾರಿಕೆ ನಡೆಯುತ್ತಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು, ಆರ್‌ಟಿಒ ಅಧಿಕಾರಿಗಳು, ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಮಂಜು ಆಗ್ರಹಿಸಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ತೆರಕಣಾಂಬಿ ಠಾಣೆ ಸಬ್‌ಇನ್ಸ್‌ಪೆಕ್ಟರ್ ಮಹೇಶ್, ರಾತ್ರಿ ಸಮಯ ಗಣಿಗಾರಿಕೆ ನಡೆಯುತ್ತಿದ್ದರೆ ಆರೋಪ ಮಾಡಿದವರು ಗಣಿ ಇಲಾಖೆಗೆ ದೂರು ನೀಡಲಿ. ಈ ಬಗ್ಗೆ ಮಾಹಿತಿ ಬಂದಿದ್ದು, ಗಮನಿಸುತ್ತೇವೆ ಎಂದರು.





