ಹನೂರು : ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ವಾಪಸ್ ತೆರಳುವಾಗ ಆಕಸ್ಮಿಕವಾಗಿ ಸರ್ಕ್ಯೂಟ್ ನಿಂದ ಕಾರು ಬೆಂಕಿಗೆ ಆಹುತಿಯಾಗಿರುವ ಘಟನೆ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲೇಮಾಳ ಸಮೀಪ ನಡೆದಿದೆ.
ಬೆಂಗಳೂರು ಮೂಲದ ಶ್ರೀಧರ್ ಹಾಗೂ ಅವರ ಸ್ನೇಹಿತ ಮಹದೇಶ್ವರ ಬೆಟ್ಟಕ್ಕೆ ತೆರಳಿ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದಾಗ ಎಲ್ಲೇಮಾಳ ಗ್ರಾಮದ ಸಮೀಪ (ಕೆ.ಎಂ.-೦೫ ಎಂ.ಜೆ ೯೬೩೭) ಸಂಖ್ಯೆಯ ಇಟಿಯೋಸ್ ಕಾರಿನ ಇಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ.
ತಕ್ಷಣ ಕಾರಿನ ಮಾಲೀಕ ಶ್ರೀಧರ್ ಹಾಗೂ ಸ್ನೇಹಿತ ಕಾರಿನಿಂದ ಕೆಳಗಿಳಿದು ಬಾನೆಟ್ ತೆಗೆದಿದ್ದಾರೆ. ಆಗ ಇದ್ದಕ್ಕಿದ್ದಂತೆ ಬೆಂಕಿ ಮತ್ತಷ್ಟು ಆವರಿಸಿಕೊಂಡಿದೆ. ಪೆಟ್ರೋಲ್ ಕಾರ್ ಆಗಿರುವುದರಿಂದ ಹೆಚ್ಚಿನ ಅನಾಹುತ ಸಂಭವಿಸಬಹುದು ಎಂದು ದೂರ ಸರಿದು, ಹನೂರು ಪಟ್ಟಣದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಕಾರು ಬೆಂಕಿಗೆ ಆಹುತಿಯಾಗಿದೆ.
ಪ್ರಭಾರ ಠಾಣಾಧಿಕಾರಿ ಮಹೇಶ್ ನೇತೃತ್ವದಲ್ಲಿ ಸಿಬ್ಬಂದಿ ವರ್ಗದವರಾದ ರವಿ, ಆನಂದ್, ಜಯಪ್ರಕಾಶ್, ಅಶೋಕ್, ಬಸವರಾಜು ಘಟನಾ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿ, ಅಕ್ಕಪಕ್ಕ ಬೆಂಕಿ ವ್ಯಾಪಿಸಿ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.
ಈ ಸಂಬಂಧ ಹನೂರು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮಾಲೀಕ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.





