ಹನೂರು : ಅರಣ್ಯಕ್ಕೆ ಅಕ್ರಮ ಪ್ರವೇಶಮಾಡಿ ಹುಲಿ ಬೇಟೆಯಾಡಿ ಅರ್ಧ ಹುಲಿಯ ಕಳೆಬರವನ್ನು ಮಣ್ಣಿನಲ್ಲಿ ಹುದಗಿಸಿರುವ ಘಟನೆ ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಪಚ್ಚೆದೊಡ್ಡಿ ಗ್ರಾಮದ ಸಮೀಪ ಪತ್ತೆಯಾಗಿದೆ.
ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ವಲಯ ಹನೂರು ಗಸ್ತಿನಲ್ಲಿರುವ ಪಚೆತೊ ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ವಲಯ ಹನೂರು ಗಸ್ತಿನಲ್ಲಿರುವ ಪಚ್ಚೆದೊಡ್ಡಿ ಗ್ರಾಮದ ಹತ್ತಿರ ಅಕ್ಟೋಬರ್ 2ರಂದು ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದಾಗ ಹುಲಿಯ ಅರ್ಧ ಕಳೆಬರಹವೂಂದು ಮಣ್ಣಿನಲ್ಲಿ ಹುದಗಿಸಿರುವುದು ಪತ್ತೆಯಾಗಿದೆ.
ಹುಲಿಯ ತಲೆ, ಭುಜ ಮುಂದಿನ ಕಾಲುಗಳು ಪತ್ತೆಯಾಗಿದ್ದು ಉಳಿದ ಭಾಗಗಳು ಇನ್ನು ಪತ್ತೆಯಾಗಿಲ್ಲ, ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಿಕ್ಕಿರುವ ಕಳೇಬರಹದ ಭಾಗದಲ್ಲಿ ಉಗುರುಗಳು ಮತ್ತು ಹಲ್ಲುಗಳು ಇದ್ದು ಇನ್ನುಳಿದ ಭಾಗವನ್ನು ಹುಡುಕಲು ಕ್ರಮ ವಹಿಸಲಾಗಿದೆ.
ಇದನ್ನು ಓದಿ : ಮ.ಬೆಟ್ಟದಲ್ಲಿ ಮತ್ತೊಂದು ಹುಲಿ ಹತ್ಯೆ : ಪಿಸಿಸಿಎಫ್ ತಂಡದ ತನಿಖೆಗೆ ಖಂಡ್ರೆ ಆದೇಶ
ಈ ಘಟನೆ ಸಂಬಂಧದ ಕಳ್ಳ ಬೇಟೆಯ ಪ್ರಕರಣವೆಂದು ವಿಶೇಷವಾಗಿ ಪರಿಗಣಿಸಿ ಈಗಾಗಲೇ ತನಿಖೆ ಕೈಗೊಳ್ಳಲಾಗಿದೆ. ಸೀನ್ ಆಫ್ ಕ್ರೈಂ, ನಾಯಿ ತನಿಖಾದಳ ಮತ್ತಿತರರ ಸಹಾಯದಿಂದ ಅರಣ್ಯ ಇಲಾಖೆ ತಕ್ಷಣವೇ ತನಿಖೆ ಪ್ರಾರಂಭಿಸಿದೆ ಪ್ರಕರಣಕ್ಕೆ ಕಾರಣ ಮತ್ತು ಕಾರಣಕರ್ತರನ್ನು ಆದಷ್ಟು ಬೇಗ ಪತ್ತೆಹಚ್ಚಲಾಗುವುದು ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿಯನ್ನು ನಂತರ ನೀಡಲಾಗುವುದು ಎಂದು ಮಲೆ ಮಹದೇಶ್ವರ ವನ್ಯಜೀವಿ ಧಾಮದ ಡಿಸಿಎಫ್ ಭಾಸ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
4 ತಿಂಗಳಲ್ಲಿ ಎಂಟು ಹುಲಿಗಳ ಸಾವು
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯ ವ್ಯಾಪ್ತಿಯ ಮಹದೇಶ್ವರ ದೇವಸ್ಥಾನದ ಸಮೀಪ ಹುಲಿ ಬೇಟೆಯಾಡಿದ್ದ ಹಸುವಿಗೆ ಕ್ರಿಮಿನಾಶಕ ಹಾಕಿ ಐದು ಹುಲಿಗಳನ್ನು ಹತ್ಯೆ ಮಾಡಲಾಗಿತ್ತು, ಇದಾದ ನಂತರ ಆಗಸ್ಟ್ 12ರಂದು ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಎರಡು ಮರಿಗಳು ಮೃತಪಟ್ಟಿದ್ದವು. ಇದಾದ ನಂತರ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪಚ್ಚೆದೊಡ್ಡಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೇಟೆಗಾರರ ಕೃತ್ಯಕ್ಕೆ ಮತ್ತೊಂದು ಹುಲಿ ಬಲಿಯಾಗಿದೆ. ಒಟ್ಟಾರೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮ ಹಾಗೂ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಎಂಟು ಹುಲಿಗಳು ಮೃತಪಟ್ಟಿರುವುದು ವನ್ಯಜೀವಿ ಪ್ರಿಯರಲ್ಲಿ ಅಸಮಾಧಾನ ತಂದಿದೆ.





