ಚಾಮರಾಜನಗರ: ಕಡೆಯ ಶ್ರಾವಣ ಶನಿವಾರದ ಪ್ರಯುಕ್ತ ಇಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾವಿರಾರು ಮಂದಿ ಸಾರ್ವಜನಿಕರು ಆಗಮಿಸಿ ಗೋಪಾಲನ ದರ್ಶನ ಪಡೆದರು.
ಶ್ರಾವಣ ಮಾಸದ ಕೊನೆಯ ಶನಿವಾರವಾದ ಹಿನ್ನೆಲೆಯಲ್ಲಿ ಇಂದು ಗುಂಡ್ಲುಪೇಟೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಟ್ಟಕ್ಕೆ ತೆರಳಲು ಸುಮಾರು 25ಕ್ಕೂ ಅಧಿಕ ಬಸ್‌ಗಳನ್ನು ನಿಯೋಜನೆ ಮಾಡಲಾಗಿತ್ತು.
ಮೈಸೂರು, ಮಂಡ್ಯ, ಚಾಮರಾಜನನಗರ, ಹಾಸನ ಸೇರಿದಂತೆ ಕೇರಳ ಕಡೆಯಿಂದ ಸಾವಿರಾರು ಮಂದಿ ಸಾರ್ವಜನಿಕರು ಬೆಟ್ಟಕ್ಕೆ ಆಗಮಿಸಿದ್ದರು. ಬೆಳಿಗ್ಗೆ 10 ಗಂಟೆಯಿಂದಲೇ ಅಧಿಕ ಮಂದಿ ಭೇಟಿ ನೀಡಿದ್ದ ಕಾರಣ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕಿಲೋ ಮೀಟರ್‌ಗಟ್ಟಲೇ ಜನರು ಸಾಲುಗಟ್ಟಿ ನಿಲ್ಲುವಂತಾಯಿತು. ಬಳಿಕ ಟಿಕೆಟ್ ಖರೀದಿಸಿ ಬೆಟ್ಟಕ್ಕೆ ತೆರಳಿದರು.
12 ಗಂಟೆ ವೇಳೆಗೆ ದೇವಸ್ಥಾನದಲ್ಲಿ ಅಧಿಕ ಮಂದಿ ಆಗಮಿಸಿದ್ದ ಕಾರಣ ಜನಜಂಗುಳಿ ಏರ್ಪಟ್ಟಿತ್ತು. ಇದರಿಂದ ದೇವಸ್ಥಾನದ ಸುತ್ತಲೂ ಎರಡು ಸಾಲಿನಲ್ಲಿ ನಿಂತ ಸಾರ್ವಜನಿಕರು ಗಂಟೆಗಟ್ಟಲೇ ನಿಂತು ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದರು.
ಇನ್ನು ಕಡೆಯ ಶ್ರಾವಣ ಶನಿವಾರದ ಪ್ರಯುಕ್ತ ಗೋಪಾಲಸ್ವಾಮಿಗೆ ವಿವಿಧ ಬಗೆಯ ಹೂವು ಹಾಗೂ ತುಳಸಿಯಿಂದ ವಿಶೇಷ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು.