ಚಾಮರಾಜನಗರ: ಇಂದು ಈ ವರ್ಷದ ಕೊನೆಯ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಪವಾಡ ಪುರುಷ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿದೆ.
ಇಂದು ಎಳ್ಳಮವಾಸ್ಯೆ ಪ್ರಯುಕ್ತ ತಡರಾತ್ರಿಯಿಂದಲೂ ಮಲೆ ಮಹದೇಶ್ವರ ಬೆಟ್ಟಕ್ಕೆ ಜನಸಾಗರವೇ ಹರಿದುಬಂದಿದ್ದು, ಇಂದು ಬೆಳಿಗ್ಗೆಯಿಂದಲೇ ಮಾದಪ್ಪನಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿದೆ.
ಅಮಾವಾಸ್ಯೆಯಂದು ಮಾದಪ್ಪನ ದರ್ಶನ ಪಡೆದರೆ ಇಷ್ಟಾರ್ಥ ಸಿದ್ದಿಯಾಗುತ್ತೆ ಎಂಬ ವಾಡಿಕೆಯಿದೆ. ಈ ಹಿನ್ನೆಲೆಯಲ್ಲಿ ಅಮಾವಾಸ್ಯೆ ಬಂದರೆ ಸಾಕು ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಜನರು ಭೇಟಿ ನೀಡುತ್ತಾರೆ.
ಕೊರೆಯುವ ಚಳಿಯಿದ್ದರೂ ರಾಜ್ಯ ಹಾಗೂ ಹೊರ ರಾಜ್ಯದಿಂದ ಸಾರ್ವಜನಿಕರು ಭೇಟಿ ನೀಡುತ್ತಿದ್ದು, ಅಮವಾಸ್ಯೆ ದಿನಗಳಂದು ಬೆಟ್ಟದಲ್ಲಿ ಕಾಲಿಡಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಚುಮು ಚುಮು ಚಳಿಯ ನಡುವೆಯೂ ಸಾರ್ವಜನಿಕರು ಚಿನ್ನದ ರಥ, ಬೆಳ್ಳಿರಥ ಸೇರಿದಂತೆ ಅನೇಕ ಸೇವೆಗಳನ್ನು ಸಲ್ಲಿಸಿ, ಭಕ್ತಿ ಭಾವ ಮೆರೆದಿದ್ದಾರೆ.
ಇನ್ನು ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚಿನ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ತೆರಳುವ ಸಾರ್ವಜನಿಕರಿಗೆ ತೀವ್ರ ಅನುಕೂಲವಾಗಿದೆ ಎನ್ನಲಾಗಿದೆ.