ಹನೂರು: ತಾಲ್ಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ವಾರ್ಡಿನಲ್ಲಿ ಕಳೆದ ಒಂದು ವಾರದಿಂದ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ.
ಬಂಡಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದ ಒಂದನೇ ವಾರ್ಡಿನ ಜೆ.ಎಸ್.ಎಸ್ ಪ್ರೌಢಶಾಲೆಯಿಂದ ಕಾವೇರಿ ಗ್ರಾಮೀಣ ಬ್ಯಾಂಕ್ ಸರ್ಕಲ್‌ವರೆಗೆ 50ಕ್ಕೂ ಹೆಚ್ಚು ಮನೆಗಳಿದ್ದು ಸುಮಾರು 250ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ಕಳೆದ ಒಂದು ವಾರದಿಂದ ಸಮರ್ಪಕ ಕುಡಿಯುವ ನೀರಿಲ್ಲದೆ ಹನಿ ಹನಿ ನೀರಿಗೂ ಮಕ್ಕಳು, ಹೆಂಗಸರು, ಅಂಗವಿಕಲರು, ವಯೋವೃದ್ಧರು ಕುಡಿಯುವ ನೀರು ಶೇಖರಣೆ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ತಡರಾತ್ರಿ ನೀರು ಬಿಡುವ ವಾಟರ್ ಮ್ಯಾನ್: ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರತಿದಿನ ಬೆಳಗ್ಗೆ ಗ್ರಾಮದ ನಿವಾಸಿಗಳಿಗೆ ನೀರು ಪೂರೈಕೆ ಮಾಡುವುದು ಸಹಜ ಪ್ರಕ್ರಿಯೆ. ಆದರೆ ಬಂಡಳ್ಳಿ ಗ್ರಾಮದಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದ್ದು ಪ್ರತಿದಿನ ರಾತ್ರಿ 11, 12 ಗಂಟೆಗೆ ನೀರುಗಂಟಿ ನೀರು ಬಿಟ್ಟಾಗ ಇಲ್ಲಿನ ನಿವಾಸಿಗಳು ಬೇರೆ ವಾರ್ಡಿಗೆ ಹೋಗಿ ಕುಡಿಯುವ ನೀರು ಸಂಗ್ರಹಣೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ.
ಇನ್ನು ಮುಂದಾದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಜನಪ್ರತಿನಿಧಿಗಳು ವಾರ್ಡಿನ ನಿವಾಸಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.





