ಹನೂರು: ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವಲಯ ವ್ಯಾಪ್ತಿಯ ಮಿಣ್ಯಂ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ತಾಯಿ ಹುಲಿ ಹಾಗೂ ಹುಲಿ ಮರಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಹನೂರು ತಾಲೂಕು ವ್ಯಾಪ್ತಿಯಲ್ಲಿ ಮಲೆ ಮಹದೇಶ್ವರ ಕಾವೇರಿ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಿವೆ. ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಆಗಾಗ ಹುಲಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಪಿ.ಜಿ ಪಾಳ್ಯ ಹಾಗೂ ಅಜ್ಜೀಪುರ ಸಫಾರಿ ಕೇಂದ್ರ ಪ್ರಾರಂಭವಾದ ನಂತರ ಹುಲಿಗಳು ಕಾಣಿಸಿಕೊಳ್ಳುತ್ತಿದೆ.
ಇದೀಗ ಹೂಗ್ಯಂ ವಲಯ ವ್ಯಾಪ್ತಿಯಲ್ಲಿ ಏಕಾಏಕಿ ತಾಯಿ ಹುಲಿ ಹಾಗೂ ಮರಿ ಹುಲಿಗಳು ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ವಿಷಪ್ರಾಶನದಿಂದ ಮೃತಪಟ್ಟಿರುವ ಶಂಕೆ?: ಹೂಗ್ಯಂ ವಲಯ ವ್ಯಾಪ್ತಿಯ ಮಿಣ್ಯಂ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಹುಲಿ ದಾಳಿಗೆ ಒಂದು ಹಸು ಮೃತಪಟ್ಟಿತ್ತು. ಮತ್ತೆ ಮಾಂಸ ತಿನ್ನಲು ಹುಲಿ ಬರುತ್ತದೆ ಎಂದು ಶಂಕಿಸಿ ವಿಷಪ್ರಾಶನ ಮಾಡಿದ್ದಾರೆ. ಇದನ್ನು ತಿಂದ ತಾಯಿ ಹುಲಿ ಹಾಗೂ ಮರಿಗಳು ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.





