Mysore
28
light rain

Social Media

ಬುಧವಾರ, 25 ಜೂನ್ 2025
Light
Dark

ವೀರಶೈವ ಸಂಪ್ರದಾಯದಂತೆ ನೆರವೇರಿದ ಸಾಲೂರು ಮಠದ ಗುರುಸ್ವಾಮಿಗಳ ಅಂತ್ಯಕ್ರಿಯೆ

ಹನೂರು: ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ 17ನೇ ಪೀಠಾಧ್ಯಕ್ಷರಾದ ಗುರುಸ್ವಾಮಿ ರವರು ನಿಧನರಾದ ಹಿನ್ನೆಲೆ ಸುತ್ತೂರು ಶ್ರೀ ದೇಶಿ ಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ವೀರಶೈವ ಸಂಪ್ರದಾಯದಂತೆ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ ಆವರಣದಲ್ಲಿ ಇದುವರೆಗೂ ಪೀಠಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಮೃತಪಟ್ಟಿರುವ ಸ್ವಾಮಿಜಿರವರ ಗದ್ದುಗೆಯ ಸಮೀಪದಲ್ಲಿಯೇ ಶ್ರೀ ಪಟ್ಟದ ಗುರುಸ್ವಾಮಿಗಳ ಅಂತ್ಯಕ್ರಿಯೆಯನ್ನು ಶಾಸ್ತ್ರೋತ್ತವಾಗಿ ನೆರವೇರಿಸಲಾಯಿತು.

ಮಠದ ಗದ್ದಿಗೆ ಆವರಣದಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಕ್ರಿಯಾ ಸಮಾಧಿ ನಿರ್ಮಾಣ ಮಾಡಿ ಮರಳು ಮುಚ್ಚಲಾಗಿತ್ತು. ಇಂದು ಪಟ್ಟದ ಗುರುಸ್ವಾಮಿಗಳು ನಿಧನರಾದ ಹಿನ್ನೆಲೆ ಮರಳು ತೆರವುಗೊಳಿಸಿ ಕ್ರಿಯಾ ಸಮಾಧಿಗೆ ಬಣ್ಣ ಬಳಿದು, ಗದ್ದುಗೆಯ ಮೇಲ್ಭಾಗದಲ್ಲಿ ಹಸಿರು ಚಪರ ಹಾಕಿ ವಿವಿಧ ಫಲ ಪುಷ್ಪಗಳಿಂದ ಅಲಂಕಾರ ಮಾಡಿ ವಿಧಿ ವಿಧಾನಗಳೊಂದಿಗೆ ವೀರಶೈವ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಶ್ರೀ ಸುತ್ತೂರು ಮಠದ ದೇಶಿಕೇಂದ್ರ ಮಹಾಸ್ವಾಮಿಗಳು, ಕನಕಪುರ ದೇಗುಲ ಮಠದ ಶ್ರೀಗಳ ನೇತೃತ್ವದಲ್ಲಿ ವಿವಿಧ ಗ್ರಾಮಗಳ ನೂರಾರು ಮಠಾಧೀಶರ ಸಮ್ಮುಖದಲ್ಲಿ ಮಂತ್ರ ಜಪಿಸಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಕ್ರಿಯಾ ಸಮಾಧಿಗೆ ಪೂಜೆ ಸಲ್ಲಿಸಲಾಯಿತು.

ಶ್ರೀಗಳ ಮೆರವಣಿಗೆ: ಸಾಲೂರು ಬೃಹನ್ ಮಠದ 17ನೇ ಪೀಠಾಧ್ಯಕ್ಷರಾದ ಪಟ್ಟದ ಗುರುಸ್ವಾಮಿಗಳು ನಿಧನರಾದ ಹಿನ್ನೆಲೆ ಟ್ರ್ಯಾಕ್ಟರ್ ಗೆ ಫಲ ಪುಷ್ಪಗಳಿಂದ ಅಲಂಕಾರ ಮಾಡಿ ಗದ್ದುಗೆ ನಿರ್ಮಾಣ ಮಾಡಿ ಶ್ರೀಗಳನ್ನು ಕೂರಿಸಿ ಮನೆ ಮಹದೇಶ್ವರ ಬೆಟ್ಟದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಹಾಲಿ ಶಾಸಕ ಎಂಆರ್ ಮಂಜುನಾಥ್ ಹಾಗೂ ಮಾಜಿ ಶಾಸಕ ಆರ್ ನರೇಂದ್ರ ಜೊತೆಗೂಡಿ ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ಸಾವಿರಾರು ಭಕ್ತರು ಮೆರವಣಿಗೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಮಾಜಿ ಶಾಸಕ ಆರ್ ನರೇಂದ್ರ ನೇತೃತ್ವ: ಸಾಲೂರು ಬೃಹನ್ ಮಠದ ಪೀಠಾಧ್ಯಕ್ಷರಾದ ಗುರುಸ್ವಾಮಿಗಳು ನಿಧನರಾದ ಹಿನ್ನೆಲೆ ಮಾಜಿ ಶಾಸಕ ಆರ್ ನರೇಂದ್ರ ಮಂಗಳವಾರ ಬೆಳಗ್ಗೆಯೇ ಶ್ರೀಮಠಕ್ಕೆ ತೆರಳಿ ಅಂತಿಮ ದರ್ಶನ ಪಡೆದ ನಂತರ ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮುಂದೆ ನಿಂತು ಅಚ್ಚುಕಟ್ಟಾಗಿ ನಿಭಾಯಿಸಿದರು.

ಅಂತಿಮ ದರ್ಶನ ಪಡೆದ ಗಣ್ಯರು: ಸ್ಥಳೀಯ ಶಾಸಕರಾದ ಎಂ ಆರ್ ಮಂಜುನಾಥ್ , ಗಣೇಶ್ ಪ್ರಸಾದ್ ಮಾಜಿ ಶಾಸಕಿ ಪರಿಮಳ ನಾಗಪ್ಪ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಜಿಲ್ಲಾಧಿಕಾರಿ ಸಿಟಿ ಶಿಲ್ಪನಾಗ್, ಸಿಇಒ ಮೋನೋರೋತ್, ಎಸ್ಪಿ ಡಾ. ಬಿ ಟಿ ಕವಿತಾ, ಬಿಜೆಪಿ ಮುಖಂಡರಾದ ನಿಶಾಂತ್ ಸೇರಿದಂತೆ ವಿವಿಧ ಗಣ್ಯರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ಸೂಕ್ತ ಪೊಲೀಸ್ ಬಂದೋಬಸ್ತ್: ಮಠದ ಭಕ್ತಾದಿಗಳು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದ ಹಿನ್ನೆಲೆ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ ಮೂವರು ಇನ್ಸ್ಪೆಕ್ಟರ್ , ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಶ್ರೀಗಳ ಅಂತಿಮ ದರ್ಶನ ಪಡೆಯಲು ಸಕಲ ವ್ಯವಸ್ಥೆಯನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಲಾಗಿತ್ತು.

Tags:
error: Content is protected !!