ಭೇರ್ಯ ಮಹೇಶ್
ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಲು ರೈತ ಮುಖಂಡರ ಆಗ್ರಹ
ಕೆ.ಆರ್.ನಗರ: ಜಿಲ್ಲೆಯಲ್ಲಿ ಭತ್ತದ ಕಣಜ ಎಂದೇ ಪ್ರಸಿದ್ಧಿಯಾಗಿರುವ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬರದ ಛಾಯೆ ಆವರಿಸಿದೆ.
ಬಹಳಷ್ಟು ಕಡೆ ಬಿತ್ತಿದ ಬೀಜಗಳು ಮೊಳಕೆ ಒಡೆದೇ ಇಲ್ಲ. ಬೆಳೆಗಳು ಒಣಗಿ ಹೋಗಿದ್ದು ಅವಳಿ ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಣೆ ಮಾಡಬೇಕು ಎಂಬ ಆಗ್ರಹ ರೈತ ಮುಖಂಡರಿಂದ ಕೇಳಿಬರುತ್ತಿದೆ. ಪ್ರಸ್ತುತ ವರ್ಷ ಪೂರ್ವ ಮುಂಗಾರು ಬಿತ್ತನೆಗೆ ಮಳೆ ಬಾರದೆ ಹೆಸರು, ಅಲಸಂದೆ, ಎಳ್ಳು, ಉದ್ದು ಬಿತ್ತನೆಗೆ ಹಿನ್ನಡೆಯಾಗಿದೆ. ಪೂರ್ವ ಮುಂಗಾರು ಬಿತ್ತನೆ ನಂತರ ರೋಹಿಣಿ ಮಳೆ ಆರಂಭದಲ್ಲಿಯೇ ಬಂದು ರೈತರಲ್ಲಿ ಕೃಷಿ ಚಟುವಟಿಕೆ ಆರಂಭಿಸಲು ಅನುವು ಮಾಡಿ ಕೊಟ್ಟಿತ್ತಾದರೂ ನಂತರ ಮಳೆ ಸುಳಿಯಲೇ ಇಲ್ಲ.
ಕೆ.ಆರ್.ನಗರ ತಾಲ್ಲೂಕಿನಲ್ಲಿ ಶೇ.೬೦, ಸಾಲಿಗ್ರಾಮ ತಾಲ್ಲೂಕಿನಲ್ಲಿ ಶೇ.೫೬ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡದೆ ಆಗಸದತ್ತ ಮುಖ ಮಾಡಿದ್ದಾರೆ. ಮೇ ತಿಂಗಳು ಮುಗಿಯುತ್ತಾ ಬಂದರೂ ಹೆಸರು, ಅಲಸಂದೆ, ಎಳ್ಳು, ಉದ್ದು ಸೇರಿದಂತೆ ದ್ವಿದಳ ಬೆಳೆಯ ಬಿತ್ತನೆ ಕಾರ್ಯ ಕುಂಠಿತಗೊಂಡಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೇವು ಕೊರತೆ: ಸದ್ಯ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು, ರೈತರಲ್ಲಿ ಜಾನುವಾರುಗಳನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಆತಂಕ ಮನೆ ಮಾಡಿದೆ. ಇನ್ನು ಹೈನು ಗಾರಿಕೆ ನಂಬಿ ಜೀವನ ಸಾಗಿಸುತ್ತಿರುವ ಎಷ್ಟೋ ಕುಟುಂಬಗಳು ಮತ್ತೆ ಸಂಕಷ್ಟಕ್ಕೆ ಸಿಲುಕಲಿವೆ. ಮಳೆ ಕೊರತೆಯಿಂದಾಗಿ ಹಸುಗಳಿಗೆ ಹಸಿರು ಮೇವು ದಾಸ್ತಾನು ಮಾಡಿಕೊಳ್ಳಲು ಕೃಷಿ ಪಂಪ್‌ಸೆಟ್‌ಗಳಲ್ಲಿ ಬಿತ್ತನೆ ಮಾಡಿ ಬೆಳದಿರುವ ಜೋಳ, ಮೆಕ್ಕೆಜೋಳಕ್ಕೆ ಭಾರೀ ಬೇಡಿಕೆ ಬಂದಿದ್ದು ಟನ್ ಹಸಿರು ಜೋಳಕ್ಕೆ ೩ ಸಾವಿರ ರೂ.ನಿಂದ ಮೂರೂವರೆ ಸಾವಿರ ರೂ.ವರೆಗೆ ಹಣ ಕೊಟ್ಟು ಹಸಿರು ಮೇವು ಖರೀದಿಸುತ್ತಿದ್ದಾರೆ.
” ಈಗಾಗಲೇ ಅವಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಆಗದೇ ದ್ವಿದಳ ಧಾನ್ಯಗಳ ಬಿತ್ತನೆ ಆಗಿಲ್ಲ. ಭರಣಿ ಮಳೆ ಕೂಡ ಸೂಕ್ತ ಸಮಯಕ್ಕೆ ಆಗದೇ ರೈತರು ಬಿತ್ತನೆ ಕಾರ್ಯ ಕೈಗೊಂಡಿಲ್ಲ. ಕೃತ್ತಿಕಾ ಮಳೆ ಸಮರ್ಪಕವಾಗಿ ಸುರಿದಿಲ್ಲ. ಹಾಗಾಗಿ ಅವಳಿ ತಾಲ್ಲೂಕುಗಳಲ್ಲಿ ಬರದ ಛಾಯೆ ಮೂಡಿದೆ. ಕ್ಷೇತ್ರದ ಶಾಸಕರು ಜಿಲ್ಲೆಯವರೇ ಆದ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿ ಬರ ಪೀಡಿತ ತಾಲ್ಲೂಕು ಎಂದು ಘೊಷಣೆ ಮಾಡಿಸಲಿ.”
-ಜೆ.ಎಂ.ಕುಮಾರ್, ಗೌರವಾಧ್ಯಕ್ಷ, ರಾಜ್ಯ ರೈತ ಪರ್ವ ಸಂಘ
” ಈ ಬಾರಿ ಪೂರ್ವ ಮುಂಗಾರು ಕೈಕೊಟ್ಟಿದೆ. ರೈತರು ಗದ್ದೆ ಮತ್ತು ಹೊಲಗಳಲ್ಲಿ ಮಳೆ ಕೊರತೆಯಿಂದ ಯಾವುದೇ ಬಿತ್ತನೆ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ರೈತರು ರೈತ ಸಂಪರ್ಕ ಕೇಂದ್ರದಲ್ಲಿ ದ್ವಿದಳ ಧಾನ್ಯಗಳಾದ ಹೆಸರು, ಉದ್ದು, ಅಲಸಂದೆ, ಎಳ್ಳು ಸೇರಿದಂತೆ ಬಿತ್ತನೆ ಬೀಜಗಳನ್ನು ಮಳೆ ಕೊರತೆಯಿಂದ ಖರೀದಿ ಮಾಡಿಲ್ಲ. ಸರ್ಕಾರ ಕೂಡ ಕೃಷಿಗೆ ಯಾವುದೇ ಅನುದಾನ ಒದಗಿಸಿಲ್ಲ. ಸರ್ಕಾರ ಒಣ ಬರ ಎಂದು ಘೋಷಣೆ ಮಾಡಿ, ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.”
-ಅರ್ಜುನಹಳ್ಳಿ ರಾಮ್‌ಪ್ರಸಾದ್, ಅಧ್ಯಕ್ಷರು, ಯುವ ರೈತ ವೇದಿಕೆ




