ಚಿತ್ರೋದ್ಯಮಿಗಳೂ ಆಗಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಮೊನ್ನೆ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಮತ್ತು ಮಾಜಿ ಅಧ್ಯಕ್ಷರ ನಿಯೋಗ ಅಧ್ಯಕ್ಷರಾದ ಡಾ. ಜಯಮಾಲ ನೇತೃತ್ವದಲ್ಲಿ ಭೇಟಿಯಾಗಿತ್ತು. ಅದು ಕನ್ನಡ ಚಿತ್ರೋದ್ಯಮಕ್ಕೆ ಅತ್ಯಗತ್ಯವಾಗಿ ಆಗಬೇಕಾದ ಕೆಲಸಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿತ್ತು.
ಹೊಸ ಚಲನಚಿತ್ರ ನೀತಿಯಲ್ಲಿ ಒಟಿಟಿ ಮತ್ತು ಡಿಜಿಟಲ್ ವಿತರಣಾ ವ್ಯವಸ್ಥೆ, ಎಐ ಮತ್ತು ಹೊಸ ತಂತ್ರeನ ಬಳಕೆ, ಕನ್ನಡ ಚಿತ್ರರಂಗ ರಕ್ಷಣೆ, ಸಣ್ಣ ಚಿತ್ರಗಳಿಗೆ ಪ್ರೋತ್ಸಾಹ, ಚಿತ್ರಮಂದಿರಗಳ ಉಳಿವು, ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರ ಕಲ್ಯಾಣ, ಚಲನಚಿತ್ರ ಶಿಕ್ಷಣ, ಪ್ರಾಚ್ಯಾಗಾರ, ಜಗತಿಕ ಮಾರುಕಟ್ಟೆ ಸೇರಿದಂತೆ ಹಲವು ಬದಲಾವಣೆಗಳಾಗಬೇಕು ಎನ್ನುವುದಿತ್ತು. ಚಲನಚಿತ್ರ ಸಹಾಯಧನ ಮೊತ್ತದಲ್ಲಿ ಏರಿಕೆ, ಪ್ರಶಸ್ತಿ ಮತ್ತು ಸಹಾಯಧನವನ್ನು ಸಕಾಲದಲ್ಲಿ ನೀಡುವ ವ್ಯವಸ್ಥೆ, ಈ ಹಿಂದೆ ಪ್ರಸ್ತಾಪಿಸಿದಂತೆ ರಾಜಕುಮಾರ್ ಹುಟ್ಟುಹಬ್ಬದ ದಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ ಮೊದಲಾದ ಬೇಡಿಕೆಗಳು ಅಲ್ಲಿದ್ದವು. ಎಲ್ಲ ಬೇಡಿಕೆಗಳೂ ಉದ್ಯಮದ ದೃಷ್ಟಿಯಿಂದ ಕೂಡಲೇ ಆಗಬೇಕಾದದ್ದೂ ಹೌದು.
ಈಗ ಚಾಲ್ತಿಯಲ್ಲಿರುವ ಕರ್ನಾಟಕ ಚಲನಚಿತ್ರ ನೀತಿ – ೨೦೧೧, ‘ಸಂತೆಗೆ ಮೂರು ಮೊಳ ನೇಯ್ದ’ ಮಾತಿನಂತೆ ಅವಸರದಲ್ಲಿ ಆದ ಕೆಲಸ. ಹಿಂದಿನ ವರ್ಷದ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡೇತರ ಭಾಷೆಯ ಚಿತ್ರದ ನಟಿಯೊಬ್ಬರಿಗೆ ಪ್ರಶಸ್ತಿ ನೀಡಿದ್ದನ್ನು ಪ್ರಶ್ನಿಸಿ ನಿರ್ಮಾಪಕರೊಬ್ಬರು ನ್ಯಾಯಾಲಯದ ಮೆಟ್ಟಲೇರಿದ್ದರು; ಆಗ ನ್ಯಾಯಾಲಯ ಸರ್ಕಾರದ ನಿಯಮಾವಳಿಯನ್ನು ಕೋರಿದ ಸಂದರ್ಭಕ್ಕೆ ತುರ್ತಾಗಿ ಈ ನೀತಿಯನ್ನು ಪ್ರಕಟಿಸಲಾಯಿತು ಎನ್ನಲಾಗಿದೆ.
ವಸ್ತುಸ್ಥಿತಿ ಏನೇ ಇರಲಿ, ಆ ನೀತಿಯಲ್ಲಿ ತೆರಿಗೆ ವಿನಾಯಿತಿ, (ಆಗ ಕನ್ನಡ ಚಿತ್ರಗಳಿಗೆ ಸಂಪೂರ್ಣ ಮನರಂಜನಾ ತೆರಿಗೆ ವಿನಾಯಿತಿ ಇತ್ತು), ಸಹಾಯಧನ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಗಳ ವಿಸ್ತೃತ ವಿವರಗಳಿದ್ದವು. ಅದೊಂದು ಸಮಗ್ರ ಚಲನಚಿತ್ರ ನೀತಿ ಆಗಿರಲಿಲ್ಲ. ಈಗಲೂ ಅದೇ ಚಾಲ್ತಿಯಲ್ಲಿದೆ. ಐದು ವರ್ಷಗಳ ಅವಧಿಯ (ಸಾಮಾನ್ಯವಾಗಿ ಎಲ್ಲ ನೀತಿಗಳೂ ಈ ಅವಧಿಯದ್ದೇ ಆಗಿರುತ್ತವೆ) ಈ ನೀತಿ ೧೫ ವರ್ಷಗಳಾದರೂ ಬದಲಾಗಿಲ್ಲ ಎನ್ನುವುದು ಸರ್ಕಾರಕ್ಕೆ, ಸಂಬಂಧಪಟ್ಟವರಿಗೆ ಇದರ ಮೇಲಿರುವ ಗಮನಕ್ಕೆ ಸಾಕ್ಷಿ. ಈ ನಡುವೆ, ೨೦೧೬ -೧೭ರ ಅವಧಿಯಲ್ಲಿ ಹೊಸ ನೀತಿಯ ಕರಡನ್ನು ಒಪ್ಪಿಸಿದ್ದರೂ, ಆ ಕುರಿತಂತೆ ಯಾವುದೇ ಬೆಳವಣಿಗೆಗಳಾಗಲಿಲ್ಲ.
ಮೊನ್ನೆ ಮುಖ್ಯಮಂತ್ರಿಗಳನ್ನು ಭೇಟಿಯಾದ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯೋಗಕ್ಕೆ ಸರ್ಕಾರ ಎಲ್ಲ ರೀತಿಯ ನೆರವು ನೀಡುವ, ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಆಗಬಹುದಾದ ಎಲ್ಲ ನೆರವು ನೀಡುವ ಆಶ್ವಾಸನೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಮಾತ್ರವಲ್ಲ, ಹೊಸ ಚಲನಚಿತ್ರ ನೀತಿಯ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ಹೊಸದಾಗಿ ನಿಯುಕ್ತರಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಂ. ಎನ್. ಅನುಚೇತ್ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ನಿಯೋಗ ಅವರನ್ನು ಕೂಡಾ ಭೇಟಿಯಾಗಿದೆ. ೨೦೨೨, ೨೦೨೩, ೨೦೨೪, ೨೦೨೫ – ಈ ನಾಲ್ಕು ವರ್ಷಗಳ ಸಹಾಯಧನ ಮತ್ತು ಪ್ರಶಸ್ತಿಗಳಿಗೆ ಚಲನಚಿತ್ರಗಳನ್ನು ಆಹ್ವಾನಿಸಿ, ಆಯ್ಕೆ ಮಾಡುವ ಪ್ರಕ್ರಿಯೆಗೆ ಇಷ್ಟರ ಚಾಲನೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ಧಾರೆ ಎಂದು ಮಂಡಳಿಯ ಮೂಲಗಳು ಹೇಳಿವೆ.
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮವನ್ನು ಹೊರತುಪಡಿಸಿದರೆ, ರಾಜ್ಯಗಳ ಪೈಕಿ ಚಲನಚಿತ್ರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು ಕರ್ನಾಟಕ (ಆಗ ಮೈಸೂರು). ಹೆಸರಘಟ್ಟದಲ್ಲಿನ ಚಿತ್ರನಗರಿ ಯೋಜನೆ ಮೊದಲ್ಗೊಂಡು ಹಲವು ಯೋಜನೆಗಳು ಅದರ ಸುಪರ್ದಿಯಲ್ಲಿದ್ದವು. ಆದರೆ ಅದು ನಷ್ಟದ ನಿಗಮ ಎಂದು ಮುಚ್ಚಲಾಯಿತು. ದೇಶದ ಬಹುತೇಕ ರಾಜ್ಯಗಳಲ್ಲಿ ಆಯಾ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮಗಳಿವೆ, ಕರ್ನಾಟಕದ ಹೊರತಾಗಿ.
೨೦೧೧ರ ಚಲನಚಿತ್ರ ನೀತಿಯ ದಿನಗಳಿಗೂ ಇಂದಿಗೂ ಚಲನಚಿತ್ರ ಉದ್ಯಮ ಮತ್ತು ಮಾಧ್ಯಮಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಎಲ್ಲ ರಾಜ್ಯಗಳೂ ಚಲನಚಿತ್ರ ಪ್ರವಾಸೋದ್ಯಮಕ್ಕೆ ಸಾಕಷ್ಟು ನೆರವು ನೀಡುತ್ತಿವೆ. ನಮ್ಮಲ್ಲೂ ಚಲನಚಿತ್ರ ಪ್ರವಾಸೋದ್ಯಮ ನೀತಿ ಇದೆ ಇದೆ. ಹಾಗೊಂದು ಇದೆ ಎನ್ನುವುದು ಇಲ್ಲಿನ ನಿರ್ಮಾಪಕರಿಗಾಗಲಿ, ಹೊರಗಿನ ನಿರ್ಮಾಪಕರಿಗಾಗಲಿ ಗೊತ್ತಿದ್ದಂತಿಲ್ಲ.
ಈ ಹಿಂದೆ ಪ್ರಸ್ತಾಪಿಸಿದಂತೆ, ಎವಿಜಿಸಿ -ಎಕ್ಸ್‌ಆರ್ ನೀತಿಯನ್ನು ತಂದ ಮೊದಲ ರಾಜ್ಯ ಕರ್ನಾಟಕ. ಕರ್ನಾಟಕ ಅದಾಗಲೇ ಮೂರನೇ ನೀತಿಯನ್ನು ಜರಿಮಾಡಿದೆ. ಅನಿಮೇಶನ್, ವಿಶುವಲ್ ಎ-ಕ್ಟ್ಸ್ ಸೇರಿದಂತೆ ಚಿತ್ರೋದ್ಯಮಕ್ಕೆ ಪೂರಕವಾದ ಈ ಎಲ್ಲ ಡಿಜಿಟಲ್ ತಂತ್ರeನದ ಕುರಿತೂ ಚಲನಚಿತ್ರ ನೀತಿ ಪ್ರಸ್ತಾಪಿಸಬೇಕು.
ಚಲನಚಿತ್ರ ಅಕಾಡೆಮಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿತು. ಸಿನಿಮಾ ಮಾಧ್ಯಮದ ಕುರಿತಂತೆ ಅದು ಕೆಲಸ ಮಾಡಬೇಕು. ‘ಚಲನಚಿತ್ರದಲ್ಲಿ ಶಿಕ್ಷಣ, ಶಿಕ್ಷಣದಲ್ಲಿ ಚಲನಚಿತ್ರ’ ಅಕಾಡೆಮಿಯ ಧ್ಯೇಯವಾಕ್ಯ. ಕರ್ನಾಟಕದಲ್ಲಿರುವ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ, ಏಷ್ಯಾದ ಅತ್ಯಂತ ಹಿರಿಯ ಶಾಲೆ. ಅದನ್ನು ಮೇಲ್ದರ್ಜೆಗೇರಿಸಿ, ಬೇರೆಬೇರೆ ವಿಭಾಗಗಳಲ್ಲಿ ತರಬೇತಿ ನೀಡುವ ಕೆಲಸ ಆಗಬೇಕು.
ಕರ್ನಾಟಕದಲ್ಲಿರುವ ಸಿನಿಮಾ ಸಂಬಂಽತ ಸಂಸ್ಥೆಗಳನ್ನು ಒಂದು ಸೂರಿನಡಿಯಲ್ಲಿ ತರಲು ಸಾಧ್ಯವೇ ಎಂದು ಯೋಚಿಸಬಹುದು. ಕೇಂದ್ರ ಸರ್ಕಾರ, ಅದು ಚಿತ್ರೋದ್ಯಮಕ್ಕೆ ಪೂರಕವಾಗಿ ಇದ್ದ ಎಲ್ಲ ಸಂಸ್ಥೆಗಳನ್ನೂ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ತೆಕ್ಕೆಗೆ ನೀಡಿದೆ. ಫಿಲಂ ಡಿವಿಜನ್, ಎ-ಟಿಐಐ, ಸಿನಿಮಾ ಪ್ರಾಚ್ಯಾಗಾರ, ಮಕ್ಕಳ ಚಿತ್ರ ಸಮಾಜ, ಚಿತ್ರೋತ್ಸವ ನಿರ್ದೇಶನಾಲಯ ಎಲ್ಲವೂ ಈಗ ಆ ನಿಗಮದ ಉಸ್ತುವಾರಿಯಲ್ಲಿವೆ.
ಹೊಸ ನೀತಿಯ ವೇಳೆ ಇಂತಹದೊಂದು ನಿರ್ಧಾರ, ನಿಲುವು ಸಾಧ್ಯವೇ? ಎಲ್ಲ ಕ್ಷೇತ್ರಗಳಲ್ಲೂ ತಾವು ಕ್ರಾಂತಿಕಾರಕ ಬದಲಾವಣೆ ತರಬೇಕು ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ಇಂತಹ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಬಲ್ಲರು. ಕೆಲವು ರಾಜ್ಯಗಳಲ್ಲಿ ಸಂಸ್ಕೃತಿ ಇಲಾಖೆಯ ಜೊತೆ ಸಿನಿಮಾ ಕೂಡ ಸೇರಿಸಿ, ಅದಕ್ಕೆ ಮಂತ್ರಿಗಳಿರುತ್ತಾರೆ. ನಮ್ಮಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಗಳಿರುವಂತೆ, ಕರ್ನಾಟಕ ಚಲನಚಿತ್ರ ಪ್ರಾಧಿಕಾರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಡಿಯಲ್ಲಿ ಸ್ಥಾಪಿಸಬಹುದು. ಚಲನಚಿತ್ರ ಅಕಾಡೆಮಿ, ಕಂಠೀರವ ಸ್ಟುಡಿಯೊ, ಒಟಿಟಿ, ಚಿತ್ರನಗರಿ, ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ತರಬೇತಿ ಸಂಸ್ಥೆ ಸೇರಿದಂತೆ ಎಲ್ಲವುಗಳ ಮೇಲುಸ್ತುವಾರಿ ಹೊಣೆ ಇದರದ್ದಾಗಬೇಕು.
ಸಿನಿಮಾಕ್ಕೆ ಸೀಮಿತವಾಗಿ ಪ್ರವಾಸೋದ್ಯಮ ಇಲಾಖೆಯ, ಮಾಹಿತಿ ತಂತ್ರeನ ಇಲಾಖೆಯ ಪ್ರತಿನಿಧಿಗಳು, ಚಿತ್ರರಂಗದಲ್ಲಿ ಸಿನಿಮಾ ಮಾಧ್ಯಮ ಮತ್ತು ಉದ್ಯಮಗಳ ತಜ್ಞರು ಇರುವ ಈ ಪ್ರಾಽಕಾರ ಚಿತ್ರೋದ್ಯಮಕ್ಕೆ ಕಾಯಕಲ್ಪ ನೀಡಲು, ಕನ್ನಡ ಮಾತ್ರವಲ್ಲದೆ, ಕನ್ನಡೇತರ ನಿರ್ಮಾಪಕರನ್ನು ಇಲ್ಲಿ ಬರುವಂತೆ ಮಾಡಬಹುದು. ದೇಶದ ಬಹುತೇಕ ರಾಜ್ಯಗಳು ಇದನ್ನು ಮಾಡುತ್ತಿವೆ.
ರಾಜ್ಯ ಸರ್ಕಾರ ಸಹಾಯಧನ ಮೊತ್ತವನ್ನು ಹೆಚ್ಚಿಸಬೇಕು ಎನ್ನುವ ಬೇಡಿಕೆಗೆ ಮುಖ್ಯಮಂತ್ರಿಗಳು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಹಿಂದೆ ಡಾ. ಜಯಮಾಲ ಅವರು ಸಹಾಯಧನ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ವೇಳೆ, ಈ ಆಯ್ಕೆಯ ಕುರಿತಂತೆ ತಮ್ಮ ಸಲಹೆಯನ್ನು ನೀಡಿದ್ದರು. ಅದನ್ನು ಪರಿಶೀಲಿಸಿ, ಕೊಂಚ ಮಾರ್ಪಾಡು ಮಾಡಿ ಪರಿಗಣಿಸಬಹುದು. ಆಯಾ ರಾಜ್ಯಗಳಲ್ಲಿ ತಯಾರಾಗುವ, ಚಿತ್ರೀಕರಣವಾಗುವ ಚಿತ್ರಗಳಿಗೆ ಅಲ್ಲಿ ಸಹಾಯಧನ ನೀಡಲಾಗುತ್ತದೆ. ಸಾಹಿತ್ಯ ಕೃತಿಗಳನ್ನು ಆಧರಿಸಿದ, ನಾಡಿನ ಪರಂಪರೆಯನ್ನು ಉತ್ತೇಜಿಸುವ ಚಿತ್ರಗಳನ್ನು ವಿಶೇಷವಾಗಿ ಪರಿಗಣಿಸಬಹುದು. ಈಗಿರುವಂತೆ ಮಕ್ಕಳ ಚಲನಚಿತ್ರಗಳು ಜೊತೆಗೆ ಮಹಿಳಾ ಪ್ರಧಾನ ಚಿತ್ರಗಳು, ನಿರ್ದೇಶಕಿಯರ ಚಿತ್ರಗಳು, ಬುಡಕಟ್ಟು ಮತ್ತು ಗ್ರಾಮೀಣ ಕಥೆಗಳ ಚಿತ್ರಗಳು, ಪರಿಸರ ಸಂರಕ್ಷಣೆಯ ಕಾಳಜಿಯ ಚಿತ್ರಗಳನ್ನು ವಿಶೇಷವಾಗಿ ಪರಿಗಣಿಸಬಹುದು.
ಗ್ಯಾರಂಟಿ ಯೋಜನೆಗೆ ಈಗ ಸರ್ಕಾರ ಹೇಳಿದಂತೆ, ಗೋವಾ ಸರ್ಕಾರ ಅಲ್ಲಿನ ನಿರ್ಮಾಪಕರ ಚಿತ್ರಗಳನ್ನು ಮಾತ್ರ ಪರಿಗಣಿಸುವಂತೆ ಇಲ್ಲೂ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಿತ್ರಗಳನ್ನು ಪರಿಗಣಿಸುವಾಗ ಆ ನಿಯಮವನ್ನು ಉಳಿಸಿಕೊಳ್ಳಬಹುದು.
ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದು ಕಡಿಮೆ ಎನ್ನುವ ಮಾತೇನೋ ಇದೆ. ಆದರೆ ಅದು ಸಾರ್ವಕಾಲಿಕ ಸತ್ಯ ಆಗಲಾರದು ಎಂದು ನಿರೀಕ್ಷಿಸೋಣ. ಏಕಪರದೆಯ ಚಿತ್ರಮಂದಿರಗಳ ನವೀಕರಣಕ್ಕೆ ಬೆಂಬಲ, ಡಿಜಿಟಲ್ ಪ್ರೊಜೆಕ್ಷನ್ ನೆರವು, ಪ್ರೇಕ್ಷಕರಿಗೆ ಸುಲಭ ಸಾಧ್ಯವಾಗುವ ಪ್ರವೇಶದರ ಹೀಗೆ ಹೊಸ ನೀತಿ ಎಲ್ಲವನ್ನೂ ಒಳಗೊಂಡಿದ್ದರೆ ಚೆನ್ನ, ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಮೂಲದ ಚಿತ್ರಗಳು ಹೆಚ್ಚು ನೆರವು ಪಡೆಯುವ ಹಾಗಿರಬೇಕು.
ಚಲನಚಿತ್ರ ಪ್ರಾಧಿಕಾರ ಇಲ್ಲವೇ ಚಲನಚಿತ್ರ ಅಭಿವೃದ್ಧಿ ನಿಗಮದ ಸ್ಥಾಪನೆ, ಅದರ ಮೂಲಕ ಕರ್ನಾಟಕದಲ್ಲಿ ಚಿತ್ರೋದ್ಯಮಕ್ಕೆ ಪೂರಕ ಕೆಲಸ ಕಷ್ಟಸಾಧ್ಯ ವೇನೂ ಅಲ್ಲ.
ಮುಖ್ಯಮಂತ್ರಿಗಳ ಉತ್ಸಾಹಕ್ಕೆ ಇಂಬುಕೊಡುವ ಸಮರ್ಥ ಅಧಿಕಾರಿಗಳಿದ್ದರೆ ಭಾರತೀಯ ಚಿತ್ರರಂಗಕ್ಕೇ ಕರ್ನಾಟಕ ಕಾಯಕಲ್ಪವಾಗಬಲ್ಲದು.




