ಹನೂರು: ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪಿ.ಜಿ ಪಾಳ್ಯ ಸಫಾರಿ ಕೇಂದ್ರಕ್ಕೆ ವನ್ಯಜೀವಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆ ಹೆಚ್ಚುವರಿಯಾಗಿ ಹೊಸದಾಗಿ ಸಫಾರಿ ವಾಹನ ನೀಡಲಾಗಿದೆ.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿ ಜಿ ಪಾಳ್ಯ ಸಫಾರಿ ಕೇಂದ್ರವು ಡಿಸೆಂಬರ್‌ನಲ್ಲಿ ಪ್ರಾರಂಭವಾಗಿದ್ದು ಇದುವರೆಗೂ ಎರಡು ಸಫಾರಿ ವಾಹನಗಳಲ್ಲಿ ವನ್ಯಜೀವಿ ಪ್ರಿಯರನ್ನು ಕರೆದೊಯ್ಯಲಾಗುತ್ತಿತ್ತು. ಆದರೆ ಪ್ರವಾಸಿಗರ ಸಂಖ್ಯೆಗೆ ತಕ್ಕಂತೆ ವಾಹನದ ಸೌಲಭ್ಯ ಇಲ್ಲದೆ ಇರುವುದರಿಂದ ಟಿಕೆಟ್ ಸಿಗದೇ ನಿರಾಸೆಯಿಂದ ವಾಪಸ್ ತೆರಳುತ್ತಿದ್ದರು.
ಹೀಗಾಗಿ ವನ್ಯಜೀವಿ ಪ್ರಿಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಒಂದು ವಾಹನದ ಸೌಲಭ್ಯ ಕಲ್ಪಿಸುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಹೊಸದಾಗಿ ಒಂದು ವಾಹನ ನೀಡಿದ್ದು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಮೂರು ವಾಹನಗಳಲ್ಲಿ ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಹೋಗಲಿದ್ದಾರೆ.
ಕಳೆದ 9 ತಿಂಗಳ ಅವಧಿಯಲ್ಲಿ 2700 ಪ್ರವಾಸಿಗರು, 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ 11 ಲಕ್ಷ ಆದಾಯ ಬಂದಿದೆ. ಸಫಾರಿಗೆ ಬರುವ ಪ್ರವಾಸಿಗರ ವಾಹನಕ್ಕೆ ಪ್ರವೇಶ ಶುಲ್ಕ ನೂರು ರೂಪಾಯಿ ನಿಗದಿಪಡಿಸಲಾಗಿದೆ.
ಸಫಾರಿ ಪ್ರಾರಂಭವಾದ ದಿನದಿಂದ ಸಫಾರಿಗೆ ತೆರಳುವವರಿಗೆ ಆನೆ, ಕಾಡೆಮ್ಮೆ, ಚಿರತೆ ,ಕಡವೆ, ಕರಡಿ, ಆಮೆ, ಸೀಳು ನಾಯಿ, ಮುಂಗುಸಿ, ಉಡ ಮಾತ್ರ ಕಾಣಸಿಗುತ್ತಿತ್ತು. ಆದರೆ ಇತ್ತೀಚೆಗೆ ಸುಮಾರು 20ಕ್ಕೂ ಹೆಚ್ಚು ಬಾರಿ ಪ್ರವಾಸಿಗರಿಗೆ ಹುಲಿರಾಯನ ದರ್ಶನ ಸಿಕ್ಕಿದೆ.
ರಜಾ ದಿನಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರವಾಸಿಗರು, ವಾರದ ದಿನಗಳಲ್ಲಿ 10ಕ್ಕೂ ಹೆಚ್ಚು ಜನರು ಆಗಮಿಸುತ್ತಾರೆ. ಕೆಲವೊಮ್ಮೆ ಹೆಚ್ಚು ಪ್ರವಾಸಿಗರು ಆಗಮಿಸಿ ಟಿಕೆಟ್ ಸಿಗದೇ ನಿರಾಸೆಯಿಂದ ವಾಪಸ್ ತೆರಳುತ್ತಿದ್ದರು. ಇದೀಗ ಇನ್ನೊಂದು ವಾಹನ ಬಂದಿರುವುದರಿಂದ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಸಿಗಲಿದೆ. – ವಿಠ್ಠಲ್, ಸಫಾರಿ ವಾಹನಗಳ ಮೇಲುಸ್ತುವಾರಿ.