Mysore
21
overcast clouds
Light
Dark

ಗುಂಡ್ಲುಪೇಟೆಯಲ್ಲಿ ನಿಲ್ಲದ ಕಾಡಾನೆಗಳ ಉಪಟಳ: ರೈತರು ಬೆಳೆದಿದ್ದ ಜೋಳದ ಫಸಲು ನಾಶ

ಗುಂಡ್ಲುಪೇಟೆ: ರಾತ್ರೋರಾತ್ರಿ ಕಾಡಾನೆಗಳ ಹಿಂಡು ಜಮೀನಿಗೆ ಲಗ್ಗೆಯಿಟ್ಟ ಪರಿಣಾಮ ರೈತ ಬೆಳೆದ ಜೋಳದ ಫಸಲು ಸಂಪೂರ್ಣ ನಾಶವಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಹದೇವಸ್ವಾಮಿ ಎಂಬುವವರ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಜೋಳ, ತೆಂಗಿನ ಸಸಿಗಳು ಹಾಗೂ ಪೈಪ್‌ಲೈನ್‌ನ್ನು ಆನೆಗಳು ತುಳಿದು ಹಾಕಿವೆ.

ಜೋಳದ ಬೆಳೆಯನ್ನು ಸಂಪೂರ್ಣ ನಾಶ ಮಾಡಿದ ಆನೆಗಳು ಬಳಿಕ ಪಕ್ಕದಲ್ಲಿದ್ದ ವೆಂಕಟರಾಮಯ್ಯ, ಚನ್ನನಾಯಕ ಎಂಬುವವರ ಜಮೀನಿಗೂ ನುಗ್ಗಿ ಟೊಮೊಟೋ ಹಾಗೂ ಕೃಷಿ ಉಪಕರಣಗಳನ್ನು ತುಳಿದು ನಾಶಪಡಿಸಿವೆ.

ಆನೆಗಳ ದಾಳಿಯಿಂದ ಒಂದೇ ದಿನ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇನ್ನು ಈ ಭಾಗದಲ್ಲಿ ಆನೆಗಳ ದಾಳಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲಾ ಘಟನೆಗಳು ಆದರೂ ಇನ್ನಾದರೂ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗಸ್ತಿಗೆಂದು ಅರಣ್ಯ ಸಿಬ್ಬಂದಿಯನ್ನು ನೇಮಿಸಬೇಕು. ಆನೆಗಳು ಬರುವುದನ್ನು ನೋಡಿ ನಮಗೆ ಮಾಹಿತಿ ನೀಡಿದರೆ ನಾವು ಆನೆಗಳನ್ನು ಹೇಗಾದರೂ ಮಾಡಿ ಕಾಡಿಗೆ ಓಡಿಸುತ್ತೇವೆ. ಆದಷ್ಟು ಬೇಗ ಅರಣ್ಯ ಇಲಾಖೆ ಈ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.