ಹನೂರು : ತಾಲ್ಲೂಕಿನ ಗಾಜನೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದೆ.
ಗುರುವಾರ ತಡರಾತ್ರಿ ಕಾಡಾನೆಗಳು ದಾಳಿ ನಡೆಸಿ, ರೈತ ಕಾಮರಾಜು ಎಂಬವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಫಸಲನ್ನು ಸಂಪೂರ್ಣವಾಗಿ ನಾಶಪಡಿಸಿವೆ.
ಅರಣ್ಯದಿಂದ ಆಗಮಿಸಿದ ಕಾಡಾನೆಗಳು ಜಮೀನಿಗೆ ನುಗ್ಗಿ ಹಲವಾರು ಬಾಳೆ ಗಿಡಗಳನ್ನು ಮುರಿದು ಹಾಕಿ, ತುಳಿದು ನಾಶ ಪಡಿಸಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಈ ಘಟನೆ ಬಗ್ಗೆ ಸಂಬಂಧಿತ ಅರಣ್ಯ ಇಲಾಖೆ ಯಾವುದೇ ತುರ್ತು ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ. ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸೂಕ್ತ ರಕ್ಷಣೆ ಮತ್ತು ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ. ಕಾಡಾನೆಗಳು ದಿನೇ ದಿನೇ ಜಮೀನುಗಳಲ್ಲಿ ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಮೌನವಾಗಿದ್ದು, ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.





