ಚಾಮರಾಜನಗರ : ಜಿಲ್ಲೆಯ ಗಡಿಭಾಗದಲ್ಲಿರುವ ತಮಿಳುನಾಡಿಗೆ ಸೇರಿದ ಆಸನೂರು ಬಳಿ ಕಬ್ಬಿನ ಆಸೆಗೆ ರಸ್ತೆಗಿಳಿದ ಕಾಡಾನೆಯೊಂದು ಎದುರಿಗೆ ಬಂದ ಲಾರಿ ಹತ್ತಲು ಮುಂದಾಗಿ, ಕಬ್ಬು ಕಿತ್ತುಕೊಂಡ ಘಟನೆ ನಡೆದಿದೆ.
ಆಸನೂರಿನ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆಯು ಲಾರಿಯನ್ನು ತಡೆದು ಅದರ ಮುಂಭಾಗದ ಮೇಲೆ ಕಾಲಿಟ್ಟು ಕಬ್ಬು ಕಿತ್ತಿದೆ. ಆನೆ ಕಾಲಿಟ್ಟಿದ್ದೇ ತಡ ಲಾರಿಯ ಗಾಜು ಪುಡಿ ಪುಡಿಯಾಗಿದೆ. ಆದರೂ ಆನೆ ಒಂದು ಕಂತೆ ಕಬ್ಬನ್ನು ಎಳೆದೊಯ್ದಿದೆ. ಇದರಿಂದಾಗಿ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ತಮಿಳುನಾಡು ಹಾಗೂ ಕರ್ನಾಟಕ ಗಡಿಯಲ್ಲಿ ನಿರಂತರವಾಗಿ ಕಾಡಾನೆ ಓಡಾಡುತ್ತಿದ್ದು, ಹೆದ್ದಾರಿ ಬದಿ ಬಂದು ನಿಂತು ತಮಿಳುನಾಡಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುವ ಲಾರಿಗಳನ್ನು ತಡೆಯುತ್ತಿದೆ. ನಂತರ ಕಬ್ಬಿನ ಕಂತೆಯನ್ನು ಪಡೆದು ಸುಮ್ಮನಾಗುತ್ತಿದೆ. ಇತರೆ ವಾಹನಗಳಗತ್ತ ಕಣ್ಣೆತ್ತಿಯೂ ನೋಡದ ಕಾಡಾನೆ ಕಬ್ಬು ಹಾಗೂ ತರಕಾರಿ ತುಂಬಿದ ವಾಹನಗಳನ್ನೇ ಆಯ್ಕೆ ಮಾಡುತ್ತಿದೆ. ಇದರಿಂದಾಗಿ ಲಾರಿ ಚಾಲಕರು ಪರದಾಡುವಂತಾಗಿದೆ.
ಹಿಂದಿನಿಂದಲೂ ಕಾಡಾನೆಯು ಹೆದ್ದಾರಿ ಬದಿಗೆ ಬಂದಾಗ ಕಬ್ಬಿನ ಲಾರಿಗಳ ಸಿಬ್ಬಂದಿ ಕಬ್ಬಿನ ಕಂತೆ ಎಸೆದು ದಾರಿ ಬಿಡಿಸಿಕೊಂಡು ಹೋಗುತ್ತಿದ್ದರು. ಕಬ್ಬಿನ ರುಚಿ ಕಂಡಿರುವ ಆನೆಯು ಆಗಾಗ್ಗೆ ಹೆದ್ದಾರಿಗೆ ಬಂದು ನಿಂತು ಕಬ್ಬಿನ ಲಾರಿಗಳನ್ನು ತಡೆಯುತ್ತಿದೆ.





