ಹನೂರು: ತಾಲೂಕಿನ ಒಡೆಯರಪಾಳ್ಯ ಗ್ರಾಮದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಚಾಲಕನಿಗೆ ಮೂರ್ಛೆರೋಗ ಕಾಣಿಸಿಕೊಂಡು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಜರುಗಿದೆ.
ತಾಲೂಕಿನ ಒಡೆಯರ ಪಾಳ್ಯ ಗ್ರಾಮದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಮುಂಭಾಗದ ತಿರುವಿನಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಅನಾಹುತ ಸಂಬಂಧಿಸಿಲ್ಲ. ಬಸ್ ಮುಂಭಾಗದಲ್ಲಿ ಕುಳಿತಿದ್ದ ಸುಮಾರು ಐದಾರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಒಂದೊಮ್ಮೆ ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯದೆ ಹೋಗಿದ್ದರೆ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಭಾಗಕ್ಕೆ ಬಿದ್ದು ಪಲ್ಟಿಯಾಗಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರತಿದಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಕೊಳ್ಳೇಗಾಲ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದರು. ಇಂದು ಭಾನುವಾರವಾಗಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೆರಳದೇ ಇರುವುದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ.
ಅಪಘಾತ ಸಂಭವಿಸಿರುವ ವಿಚಾರ ತಿಳಿಯುತ್ತಿದ್ದಂತೆ ಅಕ್ಕ ಪಕ್ಕ ಗ್ರಾಮದ ಸ್ಥಳೀಯ ನಿವಾಸಿಗಳು ಆಗಮಿಸಿ ಗಾಯಗೊಂಡಿದ್ದ ಪ್ರಯಾಣಿಕರನ್ನು ಖಾಸಗಿ ವಾಹನಗಳ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.