ನಂಜನಗೂಡು : ನಗರದ ಹೊರವಲಯದ ಶ್ರೀರಾಂಪುರ ದೇವರಸನಹಳ್ಳಿ ಮಾರ್ಗ ಮಧ್ಯದ ಹುಲ್ಲಹಳ್ಳಿ ನಾಲೆಯ ಬಲಭಾಗದ ಏರಿ ಕುಸಿದಿದ್ದು, ಆ ಭಾಗದ ಅಚ್ಚು ಕಟ್ಟುದಾರರಲ್ಲಿ ಆತಂಕ ಮೂಡಿದೆ.
ನಾಲೆಯ ನೀರು ಜಮೀನಿಗೆ ಹರಿಯುವ ನಲ್ಲಿ ಪಕ್ಕ ಏರಿ ಕುಸಿದುಬಿದ್ದಿದ್ದು ನಾಲೆಯಲ್ಲಿ ನೀರು ಬಿಟ್ಟರೆ ಗುಂಡ್ಲು ನದಿ ಪಾಲಾಗುತ್ತದೆ. ಹಾಗಾದರೆ ಮುಂದಿನ ಅಚ್ಚುಕಟ್ಟುದಾರರ ಪರಿಸ್ಥಿತಿ ಏನು ಎನ್ನುತ್ತಾರೆ ಈ ಭಾಗದ ರೈತರು.
ಏರಿ ಕುಸಿದು ಹತ್ತು ದಿನಗಳ ನಂತರ ಬಂದ ಅಧಿಕಾರಿಗಳು ಕುಸಿದ ಏರಿಯನ್ನು ಭದ್ರವಾಗಿ ಕಟ್ಟುವ ಬದಲು ಜೆಸಿಬಿಯಿಂದ ಆ ಹೊಂಡಕ್ಕೆ ದಡದ ಮಣ್ಣನ್ನೇ ತುಂಬುತ್ತಿರುವುದರಿಂದ ನಾಲೆಯಲ್ಲಿ ನೀರು ಬಿಟ್ಟರೆ ರಭಸಕ್ಕೆ ತುಂಬಿದ ಮಣ್ಣು ಕೊಚ್ಚಿ ಹೋಗುತ್ತದೆ. ಆಗಾದರೆ ನೀರು ಮುಂದಕ್ಕೆ ಹರಿಯುವ ಬಗೆ ಹೇಗೆ ಎನ್ನುವ ರೈತರ ಪ್ರಶ್ನೆಗೆ ಅಧಿಕಾರಿಗಳಲ್ಲಿ ಉತ್ತರವೇ ಇಲ್ಲದಂತಾಗಿದೆ. ನೀರು ಬಿಡುವ ಮೊದಲು ಕುಸಿದ ಏರಿಯನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು ಎಂದು ಪಕ್ಕ್ಕದ ಜಮೀನಿನ ಮಹದೇವಮ್ಮ ಒತ್ತಾಯಿಸಿದ್ದಾರೆ.





