ಚಾಮರಾಜನಗರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟ ಹಾಕಿದ ದಿನದ ಅಂಗವಾಗಿ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಗುರುವಾರ ಮನುಸ್ಮೃತಿಯ ಪ್ರತಿಯನ್ನು ಹರಿದು ಪ್ರತಿಭಟನೆ ಮಾಡಿದರು.
ಇಲ್ಲಿನ ಭುವನೇಶ್ವರಿ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಮನುಸ್ಮೃತಿ ಪ್ರತಿಯನ್ನು ಸುಡಲು ಮುಂದಾದಾಗ ಪೊಲೀಸರು ತಡೆದರು. ಹೀಗಾಗಿ
ಹರಿದು ಹಾಕಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು ಮಾತನಾಡಿ, ಅಂಬೇಡ್ಕರ್ ಅವರ ಹೋರಾಟವನ್ನು ಮುಂದುವರಿಸುವ ಸಲುವಾಗಿ ಮನುಸ್ಮೃತಿ ಸುಡುವ ಪ್ರತಿಭಟನೆ ಮಾಡಲಾಗಿದ್ದು, ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮುನ್ನಡಿ ಬರೆದು ಭಾರತವನ್ನು ಅಂಧಕಾರಕ್ಕೆ ತಳ್ಳಿದ್ಧ ಮನುಸ್ಮೃಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸುಟ್ಟು ಹಾಕಿ ೯೮ ವರ್ಷಗಳು ಆಗಿರುವುದಾಗಿ ಹೇಳಿದರು.
ಇದನ್ನು ಓದಿ: ನಾಳೆ ದೆಹಲಿಗೆ ತೆರಳಲಿದ್ದಾರೆ ಸಿಎಂ ಸಿದ್ದರಾಮಯ್ಯ
ಜಾತಿ ಅಸಮಾನತೆ, ಲಿಂಗ ತಾರತಮ್ಯ, ಮಹಿಳೆಯರ ಮೇಲಿನ ದಬ್ಬಾಳಿಕೆ, ಬಹುಜನರ ಮೇಲೆ ದೌರ್ಜನ್ಯ, ಸತಿಸಹಗಮನ ಪದ್ಧತಿ, ಬಾಲ್ಯ ವಿವಾಹ, ಬೆತ್ತಲೆಸೇವೆ, ದೇವದಾಸಿ ಪದ್ಧತಿ, ಶೂದ್ರಾತಿಶೂದ್ರರಿಗೆ ಅಕ್ಷರ ಜ್ಞಾನ ನಿಷಿದ್ಧ ಮುಂತಾದ ಅನಿಷ್ಟ ಪದ್ಧತಿಗಳು ಶತಮಾನಗಳ ಕಾಲ ಮುಂದುವರಿಯಲು ಕಾರಣವಾದ ಮನುಸ್ಮೃತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ೧೯೨೭ರ ಡಿ.೨೫ರಂದು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದನ್ನು ಇದೇ ವೇಳೆ ಸ್ಮರಿಸಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್ ಉಲ್ಲಾ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ, ಕೆರೆಹಳ್ಳಿ ಬಸವರಾಜು, ಮಹಿಳಾ ಸಂಯೋಜಕಿ ಎಂ.ಆರ್.ಪ್ರಭಾವತಿ, ಜನಶಕ್ತಿ ಸುರೇಶ್, ಸಂಘಟನಾ ಸಂಚಾಲಕರಾದ ಶಿವಕುಮಾರ್, ಸಿ.ರಂಗಸ್ವಾಮಿ, ನಂಜುಂಡಸ್ವಾಮಿ, ತಾಲ್ಲೂಕು ಅಧ್ಯಕ್ಷ ರಂಗಸ್ವಾಮಿ ಮಾಡ್ರಹಳ್ಳಿ, ಶಾಂತರಾಜು, ಇದಾಯತ್ ಷರೀಫ್, ಸಾಹಿತಿ ಸಿದ್ದರಾಜು, ಆಟೋ ಉಮೇಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





