ಯಳಂದೂರು: ಯಳಂದೂರು ತಾಲೂಕು ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಡಯಾಲಿಸೀಸ್ ಘಟಕಗಳ ಕಟ್ಟಡವನ್ನು ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು. ಇವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಚಿದಂಬರ ಸಾಥ್ ನೀಡಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಎಆರ್‌ಕೆ ಅವರು, 2024-2025 ನೇ ಸಾಲಿನಲ್ಲಿ ಎಸ್‌ಪಿಎಸ್, ಎಸ್‌ಪಿ. ಮತ್ತು ಟಿಎಸ್ಪಿ ಯೋಜನೆಯಡಿ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಗೌಡಹಳ್ಳಿ, ಹೊನ್ನೂರು, ಅಗರ-ಮಾಂಬಳ್ಳಿ, ಚಿಲಕವಾಡಿ, ಹೊಂಗನೂರು, ಇರಸವಾಡಿ, ಉಮ್ಮತ್ತೂರು, ಬಾಗಳಿ, ಕುದೇರು, ಕಜ್ಜಿಹುಂಡಿ, ಟಿ. ಹೊಸೂರು ಗ್ರಾಮಗಳ ಆರೋಗ್ಯ ಕೇಂದ್ರಗಳ ಕಟ್ಟಡ ಹಾಗೂ ಕಾಂಪೌಂಡ್ ಮತ್ತು ಕುಡಿಯುವ ನೀರಿನ ವ್ಯವಸ್ಥೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಲ್ಲೂಕು ವೈದ್ಯಧಿಕಾರಿ ಡಾ.ಶ್ರೀಧರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜೆ. ಯೋಗೇಶ್, ಮಾಜಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ನಿರಂಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.