ಹೈದರಾಬಾದ್: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಮತ್ತು ಮಾಜಿ ಸಂಸದೆ ಕೆ.ಕವಿತಾ ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ.
ಕವಿತಾ ಅವರು ತಮ್ಮ ಪಕ್ಷಕ್ಕೆ ತೆಲಂಗಾಣ ರಾಷ್ಟ್ರ ಸೇನಾ ಎಂದು ಹೆಸರಿಸಿದ್ದಾರೆ. ಇದು ಈ ಹಿಂದೆ ಅವರ ತಂದೆ ಕೆಸಿಆರ್ ಅವರು ಬಳಸುತ್ತಿದ್ದ ‘ತೆಲಂಗಾಣ ರಾಷ್ಟ್ರ ಸಮಿತಿ’ ಹೆಸರನ್ನು ನೆನಪಿಸುವಂತಿದ್ದು, ತೆಲಂಗಾಣದ ಮೂಲ ಅಸ್ಮಿತೆಯನ್ನು ಮರಳಿ ಪಡೆಯುವ ಸಂಕೇತವಾಗಿ ಬಳಸಲಾಗಿದೆ.
ಕವಿತಾ ಅವರು ಸೆಪ್ಟೆಂಬರ್ 2025ರಲ್ಲಿ ಭಾರತ್ ರಾಷ್ಟ್ರ ಸಮಿತಿಯಿಂದ ಹೊರಬಂದಿದ್ದರು. ಆಂತರಿಕ ಭಿನ್ನಮತ ಮತ್ತು ಅವರ ಸಹೋದರ ಕೆ.ಟಿ. ರಾಮರಾವ್ ಅವರೊಂದಿಗಿನ ವೈಮನಸ್ಸಿನಿಂದಾಗಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ನಂತರ ಅವರು ಎಂಎಲ್‍ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
ಇಂದು ಹೈದರಾಬಾದ್‍ನ ಮುನೀರ್‍ಬಾದ್‍ನಲ್ಲಿ ನಡೆದ ಸಮಾವೇಶದಲ್ಲಿ ಪಕ್ಷದ ಧ್ವಜ ಮತ್ತು ಸಿದ್ಧಾಂತಗಳನ್ನು ಅನಾವರಣಗೊಳಿಸಲಾಗಿದೆ. ಈ ಹೊಸ ಪಕ್ಷವು ನೇರವಾಗಿ ಬಿಆರ್‍ಎಸ್ ಮತ್ತು ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಗಳಿಗೆ ಸವಾಲು ಒಡ್ಡಲಿದೆ.
ಸುದ್ದಿಗೋಷ್ಠಿಯಲ್ಲಿ ಹೊಸ ಪಕ್ಷದ ರಚನೆಯ ಕುರಿತು ಮಾತನಾಡಿದ ಕವಿತಾ, ತೆಲಂಗಾಣ ರಾಜ್ಯವಾಗಿ 12 ವರ್ಷಗಳಿಗೂ ಹೆಚ್ಚು ಸಮಯ ಕಳೆದಿದೆ. ಆದರೆ ಸಾರ್ವಜನಿಕರ ನಿರೀಕ್ಷೆಗಳು ಇನ್ನೂ ಈಡೇರಿಲ್ಲ. 12 ವರ್ಷಗಳ ನಂತರವೂ, ತೆಲಂಗಾಣ ಚಳವಳಿಯ ಅಡಿಪಾಯವಾಗಿದ್ದ ನೀಲು, ನಿಧಿ, ನಿಯಮಕ್ಲು (ನೀರು, ಹಣ ಮತ್ತು ಉದ್ಯೋಗ) ಗಳನ್ನು ಕೊಡುವಲ್ಲಿ ಆಡಳಿತ ನಡೆಸಿದ ಪಕ್ಷಗಳು ವಿಫಲವಾಗಿದೆ ಎಂದು ಕವಿತಾ ಅವರು ಆರೋಪ ಮಾಡಿದರು.
ತಮ್ಮ ಪಕ್ಷವು ತೆಲಂಗಾಣದ ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ವೇದಿಕೆಯಾಗಲಿದೆ. ಮುಖ್ಯವಾಗಿ ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಹಿತರಕ್ಷಣೆಗಾಗಿ ಶ್ರಮಿಸಲಿದೆ ಎಂದು ಕವಿತಾ ಹೇಳಿದ್ದಾರೆ.





