Mysore
23
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಚಾ.ನಗರ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ವಿ. ಸೋಮಣ್ಣ

  • ಮಳೆ ಹಾನಿಯ ವಿವಿಧ ಪ್ರದೇಶಗಳಿಗೆ ಸಚಿವ ವಿ ಸೋಮಣ್ಣ ಭೇಟಿ.
  • ಪರಿಹಾರದ ಭರವಸೆ, ಅಧಿಕಾರಿಗಳಿಗೆ ತರಾಟೆ.

ಚಾಮರಾಜನಗರ: ಕಳೆದ ೩-೪ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಮಳೆಯ ನಡುವೆಯೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜ್ಯೋತಿ ಗೌಡನಪುರ ಗ್ರಾಮಕ್ಕೆ ಭೇಟಿ: ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಚಾ.ನಗರ ತಾಲ್ಲೂಕಿನ ಜ್ಯೋತಿ ಗೌಡನಪುರ ಗ್ರಾಮಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಸೂಕ್ತ ರೀತಿಯ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು.

ಚಾ.ನಗರ ತಾಲ್ಲೂಕಿನ ಜ್ಯೋತಿ ಗೌಡನಪುರ ಗ್ರಾಮದಲ್ಲಿ ಸತತ ಮಳೆಯಿಂದಾಗಿ ಸಮೀಪದ ಕೆರೆಕಟ್ಟೆಗಳು ಕೋಡಿ ಬಿದ್ದು ಗ್ರಾಮವೇ ಜಲಾವೃತವಾಗಿತ್ತು ಈ ಸಂದರ್ಭದಲ್ಲಿ ಗ್ರಾಮದಲ್ಲಿರುವ ಒಟ್ಟು ೯೯೮ ಕುಟುಂಬಗಳಲ್ಲಿ ೫೨೭ ಮನೆಗಳಿಗೆ ನೀರು ನುಗ್ಗಿ ಅಸ್ತವ್ಯಸ್ತವಾದರೆ, ೬೬ ಮನೆಗಳ ಗೋಡೆ ಕುಸಿದು ಸಾರ್ವಜನಿಕರ ಬದುಕು ದುಸ್ತರವಾಗಿತ್ತು.

 

 

ಜ್ಯೋತಿ ಗೌಡನಪುರ ಗ್ರಾಮದ ಗ್ರಾ.ಪಂ ಕಟ್ಟಡದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ವಿ.ಸೋಮಣ್ಣ
ಮಳೆ ನೀರು ನುಗ್ಗಿ ಹಾನಿಯಾಗಿರುವ ಒಟ್ಟು ೫೨೭ ಮನೆಗಳಿಗೂ ಕೂಡಲೇ ೧೦ ಸಾವಿರ ರೂ ವಿತರಿಸಿ ಅಷ್ಟೂ ಕುಟುಂಬಗಳಿಗೂ ಕೂಡಲೇ ಆಹಾರ ಕಿಟ್ ವಿತರಣೆ ಮಾಡಬೇಕು. ಅಧಿಕಾರಿಗಳು ಗೋಡೆ ಕುಸಿದಿರುವ ೬೬ ಮನೆಗಳಿಗೆ ಭೇಟಿ ನೀಡಿ ೫೦ ಸಾವಿರ ಪರಿಹಾರ ನೀಡಬೇಕು ತುಂಬಾ ತೊಂದರೆ ಆಗಿದ್ದಲ್ಲಿ ತಲಾ ೩.೫ ಲಕ್ಷ ಪರಿಹಾರ ವಿತರಿಸಬೇಕು ಎಂದು ಸೂಚಿಸಿದರು.

 ಅಧಿಕಾರಿಗಳಿಗೆ ತರಾಟೆ: ಜ್ಯೋತಿ ಗೌಡನಪುರ ಗ್ರಾ.ಪಂ ಕಟ್ಟಡದಲ್ಲಿ ಸಭೆ ನಡೆಯುವ ಸಂದರ್ಭದಲ್ಲಿ ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ ಮಾಡಲು ತಿಳಿಸಿದರು. ಮಧ್ಯೆ ಪ್ರವೇಶಿಸಿದ ತಹಶೀಲ್ದಾರ್ ಅವರು ಈಗಾಗಲೇ ೫೦೦ ಕಿಟ್ ವಿತರಣೆ ಮಾಡಲಾಗಿದೆ ಪರಿಶೀಲಿಸಿ ಉಳಿದವರಿಗೆ ನೀಡುತ್ತೇವೆ ಎಂದರು. ಈ ವೇಳೆ ಸಚಿವ ವಿ.ಸೊಮಣ್ಣ ಅವರು ಗರಂ ಆಗಿ ಪರಿಶೀಲನೆ ನಂತರ ಇಟ್ಟುಕೊಳ್ಳಿ ಎಲ್ಲರಿಗೂ ಆಹಾರ ಕಿಟ್ ವಿತರಿಸುತ್ತೀರೋ ಇಲ್ಲವೋ ಎಂದು ಗದರಿದರು.

ಕಾಡಾ ಅಧ್ಯಕ್ಷರ ವಿರುದ್ಧ ಅಸಮಾಧಾನ: ಸಚಿವ ವಿ.ಸೋಮಣ್ಣ ಅವರು ನೆರೆ ಸಂತ್ರಸ್ತರ ದುಃಖ ದುಮ್ಮಾನ ವಿಚಾರಿಸುವ ವೇಳೆ ಪಕ್ಷದ ಕಾರ್ಯಕರ್ತರೊಬ್ಬರು ಕಾಡಾ ಅಧ್ಯಕ್ಷರು ಕಾಟಾಚಾರಕ್ಕೆ ಭೇಟಿ ನೀಡಿದರು ಎಂದು ಸಚಿವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದ ಮನೆಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸಿ ಸಂಜೆಯಾದರೂ ಯಾವ ಅಧಿಕಾರಿಗಳು ಭೇಟಿ ನೀಡಿರಲಿಲ್ಲ , ಸಂಜೆಯೊತ್ತಿಗೆ ಭೇಟಿ ನೀಡಿದ ಕಾಡಾ ಅಧ್ಯಕ್ಷರಾದ ನಿಜಗುಣರಾಜು ಅವರು ೫೦೦ ಆಹಾರ ಕಿಟ್ ಹಾಗೂ ೫೦೦ ಹೊದಿಕೆ ಕಳುಹಿಸಿಕೊಡುವುದಾಗಿ ಆಶ್ವಾಸನೆ ನೀಡಿ ಹೋದವರು ಈ ಕಡೆ ತಲೆ ಹಾಕಲಿಲ್ಲ, ಅಮ್ಮನಪುರ ಮಲ್ಲೇಶ್ ಅವರು ಇಂತಿಷ್ಟು ಪರಿಹಾರ ನೀಡಲಿಲ್ಲ ಅಂದರೆ ನಾವು ಪಕ್ಷದ ಹೆಸರು ಹೇಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್, ರೈತ ಮುಖಂಡ ಅಮ್ಮನಪುರ ಮಲ್ಲೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ, ಎಸ್ಪಿ ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ, ಎಎಸ್ಪಿ ಸುಂದರ್ ರಾಜ್ ಹಾಗೂ ಇತರರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ