ಅಂತರ್ಮುಖಿಯಾಗಿರುತ್ತಿದ್ದ ಶ್ರೀಗಳ ಪಾಂಡಿತ್ಯ ಅಸಾಮಾನ್ಯವಾಗಿತ್ತು
-ಪ್ರೊ.ಮಲೆಯೂರು ಗುರುಸ್ವಾಮಿ
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯ
ಬಯಲ ಜೀವನ ಬಯಲ ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯ
ನಿಮ್ಮ ಪೂಜಿಸಿದವರು ಮುನ್ನಡೆ ಬಯಲಾದರು
ನಾ ನಿಮ್ಮ ಪೂಜಿಸಿ ಬಯಲಾದೆ ಗುಹೇಶ್ವರಾ
ಅಲ್ಲಮನ ಈ ವಚನವನ್ನು ನಿರ್ವಹಿಸುತ್ತಾ ಹೋದಂತೆ ನಿಧನರಾದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಬದುಕು ನಮ್ಮ ಕಣ್ಣುಗಳ ಮುಂದೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಜ್ಞಾನಯೋಗವನ್ನೇ ತಮ್ಮ ಜೀವನ ಯೋಗವನ್ನಾಗಿಸಿಕೊಂಡು ಬಯಲ ಬದುಕನ್ನು ಬದುಕಿದ ಶ್ರೀ ಸಿದ್ದೇಶ್ವರರ ಬದುಕು ಮೇಲ್ನೋಟಕ್ಕೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಂಡು ಬರುತ್ತಿತ್ತು. ಸದಾ ಶುಭ್ರ ಶ್ವೇತ ವಸನ ಧಾರಿಗಳಾಗಿರುತ್ತಿದ್ದ ಸ್ವಾಮೀಜಿಯವರ ಬದುಕು ಅವರ ಅಂತರಂಗದ ಧವಳ ಶ್ರೀಗೆ ಕನ್ನಡಿ ಹಿಡಿದಂತೆ ಇರುತ್ತಿತ್ತು. ಸದಾ ಮಂದ್ರಸ್ಥಾಯಿಯಲ್ಲಿಯೇ ಸಂಚರಿಸುತ್ತಿದ್ದ ಅವರ ಮಾತು ಅನಂತ ಧ್ವನಿ ತರಂಗಗಳಲ್ಲಿ ಕೇಳುಗರ ಎದೆಯೊಳಕ್ಕೆ ಇಳಿ ಬಿಡುತ್ತಿತ್ತು. ಅವರದ್ದು ಒಂದು ರೀತಿಯಲ್ಲಿ ಮೌನದ ಮಾತು; ಮಾತಿನ ಮೌನ! ಆದ್ದರಿಂದಲೇ ಅವರ ಪ್ರವಚನಗಳು ಕೇವಲ ಕೇಳಿಸಿಕೊಳ್ಳುವ ಮಾತುಗಳಾಗಿರಲಿಲ್ಲ ಅನುಭವಿಸುವ ನಾದತರಂಗಗಳಾಗಿರುತ್ತಿದ್ದವು.
‘‘ಮಹಾತ್ಮರ ಮಾತುಗಳನ್ನ ನಾವು ಕಂಠಪಾಠ ಗಿಳಿಪಾಠ ಮಾಡಿದ ಮಾತ್ರಕ್ಕೆ ಅವು ನಮ್ಮನ್ನು ಎಂದೂ ರಕ್ಷಿಸುವುದಿಲ್ಲ , ಆ ನುಡಿಗಳನ್ನು ನಾವು ಮನನ ಮಾಡಿ ರಕ್ತಗತ ಮಾಡಿಕೊಳ್ಳಬೇಕು. ಆಗ ಅವು ನಮ್ಮನ್ನು ಕಾಯುತ್ತವೆ.
‘‘ಪ್ರೇಮವು ಹೃದದ ಯಒಂದು ಮಧುರ ಭಾವಾಂಶ. ಈ ಪ್ರೇಮ ಭಾವದಿಂದ ವಸ್ತುಗಳು ಸುಖದಾಯಕವಾಗಿ ಪರಿಭಾವಿಸುತ್ತದೆ. ಜೀವನವು ರಸಪೂರ್ಣವಾಗುತ್ತದೆ, ಈ ಭಾವವೇ ಇಲ್ಲದಿದ್ದರೆ ಮನುಷ್ಯನಿಗೂ ಯಂತ್ರಗಳಿಗೂ ವ್ಯತ್ಯಾಸವೇ ಉಳಿಯುವುದಿಲ್ಲ ಯಂತ್ರ ಮಾನವನು ನಮಗಿಂತ ಎಷ್ಟೋ ಪಾಲು ಬುದ್ಧಿವಂತನಿದ್ದಾನೆ. ಆದರೆ ಅವನು ಮಾನವನಂತೆ ಸುಖ ದುಃಖಗಳನ್ನು ಅನುಭವಿಸಲಾರನು ಏಕೆಂದರೆ ಯಂತ್ರ ಮಾನವನಿಗೆ ಪ್ರಚಂಡ ಬುದ್ಧಿಯಿದೆ; ಆದರೆ ಹೃದಯವಿಲ್ಲ’’.
ಅನೇಕ ಕಡೆ ಅವರ ಪ್ರವಚನಗಳು ಸೂರ್ಯೋದಯಕ್ಕೆ ಮೊದಲೇ ಪ್ರಾರಂಭವಾಗುತ್ತಿದ್ದು ದೂ ಉಂಟು. ಹೀಗಿದ್ದೂ 2-3 ಸಾವಿರ ಜನ ಸೇರಿಬಿಡುತ್ತಿದ್ದರು. ಅದೂ ಒಂದೆರಡು ದಿನಗಳದ್ದಲ್ಲ, ತಿಂಗಳುಗಟ್ಟಲೆಯ ಪ್ರವಚನ ಅಲ್ಲೆಲ್ಲೂ ಅವರ ಪಾಂಡಿತ್ಯ ಪ್ರದರ್ಶನವಾಗಲಿ ಯಾವುದೇ ನಿರ್ದಿಷ್ಟ ಧರ್ಮದ ಪ್ರಸಾರದ ಉದ್ದೇಶವಾಗಲೀ ಕಿಂಚಿತ್ತು ಕಂಡುಬರುತ್ತಿರಲಿಲ್ಲ ಮಾತಿನ ಮೂಲ ಧಾತು ಉಪನಿಷತ್ತುಗಳ ವಚನಗಳಾದರೂ ಅವಕ್ಕೆ ಪೂರಕವಾಗಿ ಜಗತ್ತಿನ ಪ್ರಮುಖ ಧರ್ಮಗಳು ಹಾಗೂ ಪ್ಲೇಟೋ ಅರಿಸ್ಟಾಟಲ್ ಲಾವೊ, ಕ್ರಿಸ್ತ, ಬುದ್ಧ, ಮಹಾವೀರ ಎಲ್ಲರೂ ಬಂದು ಹೋಗುತ್ತಿದ್ದರು. ಈ ಎಲ್ಲರೂ ಹೇಳುವುದು ಹೇಗೆ ಒಂದೇ ಧರ್ಮ ಅದೇ ಮಾನವ ಧರ್ಮ ಎನ್ನುವುದನ್ನು ಕೇಳುಗರ ಮನದುಂಬುವಂತೆ ವಿವರಿಸುತ್ತಿದ್ದರು. ಜಡ ವಸ್ತುಗಳೆಂದು ನಾವು ಹೇಳುವ ಮಣ್ಣು ಕಲ್ಲುಗಳು ಹಾಗೆೆಯೇ ಹೂವು ಹಣ್ಣು ಗಿಡಮರಗಳು ಪ್ರಾಣಿ ಪಕ್ಷಿಗಳು ಅವರ ಗಂಭೀರ ಪ್ರವಚನದಲ್ಲಿ ಗೌರವಾನ್ವಿತ ಸ್ಥಾನ ಪಡೆಯುತ್ತಿದ್ದವು. ಪೂರ್ಣ ದೃಷ್ಟಿಯ ಭವ್ಯ ಮಾನವ ಅವರು ಸದಾ ಅಂತರ್ಮುಖಿಯಾಗಿರುತ್ತಿದ್ದ ಅವರ ಪಾಂಡಿತ್ಯ ಅಸಾಮಾನ್ಯವಾದುದೇ ಆಗಿತ್ತು. ತಮ್ಮ ಗುರುಗಳು ಮಾಡುತ್ತಿದ್ದ ಮರಾಠಿ ಭಾಷೆಯಲ್ಲಿನ ಸಿದ್ಧಾಂತ ಶಿಖಾಮಣಿ ವೀರಶೈವ ಧರ್ಮದಲ್ಲಿ ಇದೊಂದು ಬಹುಚರ್ಚಿತ ಕೃತಿ ಪ್ರವಚನವನ್ನು ಕೇಳುತ್ತಾ ಅವರು ಮಾಡಿಕೊಂಡಿದ್ದ ಟಿಪ್ಪಣಿಗಳು ಅವರ ಗುರುಗಳ ಆಶಯದಂತೆ ಮುಂದೆ ಕನ್ನಡದಲ್ಲಿ ಗ್ರಂಥಸ್ಥ ರೂಪ ಪಡೆದದ್ದು ಒಂದು ಚಾರಿತ್ರಿಕ ವಾದ ದಾಖಲಾರ್ಹವಾದ ಸಂಗತಿ ಸಿದ್ದೇಶ್ವರ ಅವರಿಗೆಅಲ್ಲಮ ಸದಾ ಮೈಮನಗಳು ತುಂಬಿಕೊಂಡಿದ್ದ ಒಂದು ವಿಶೇಷ ಅವನ ಸಮಗ್ರ ವಚನಗಲಿಗೆ ಇರುವ ಬರೆದಿರುವ ವ್ಯಾಖ್ಯಾನವನ್ನು ನೋಡಿದರೆ ಸಾಮಾನ್ಯ ಓದುಗರಿಗಷ್ಟೇ ಅಲ್ಲ ಪ್ರಬುದ್ಧರಿಗೂ ದಿಗ್ಭ್ರಮೆಯಾಗುತ್ತದೆ. ಇದು ಸಿದ್ದೇಶ್ವರರು ಅನುಷ್ಟಾನ ಮಾಡಿಕೊಂಡು ಬಂದ ವಿಶ್ವ ಪೂಜೆ ಎಂದೇ ಭಾವಿಸಬೇಕಾಗುತ್ತದೆ. ಇತ್ತೀಚೆಗೆ ಅವುಗಳ ಇಂಗ್ಲಿಷ್ ಭಾಷಾ ವಿದ್ವಾಂಸರು ತತ್ವ ಜ್ಞಾನವನ್ನು ವಿಶೇಷವಾಗಿ ಅಧ್ಯಯನ ಮಾಡಿದವರು ಭಾಷಾಂತರ ಅಂತಿಮ ರೂಪದ ಒಪ್ಪಿಗೆಗಾಗಿ ಕಾಯುತ್ತಿದ್ದು ಶ್ರೀ ಸಿದ್ದೇಶ್ವರರ ತೀರ್ಮಾನವೇ ಅವರ ‘ಭಕ್ತಿಯೋಗ’, ‘ಭಗಚ್ಚಿಂತನ’ ನಾನಾರು ? ಮುಂತಾದ ಅನೇಕ ಕೃತಿಗಳು ಮುಮುಕ್ಷಗಳ ನಿತ್ಯ ಕೈಪಿಡಿಯುತಿದೆ. ಧರ್ಮ ದೇವರು, ಧಾರ್ಮಿಕ ಪ್ರವಚನಗಳಲ್ಲಿ ಲಾಭದಾಯಕ ಉದ್ಯಮದ ಸ್ವರೂಪವನ್ನು ಪಡೆಯುತ್ತಿರುವ ಕಾಲಮಾನದಲ್ಲಿ ಆಕರ್ಷಕ ಮಾತುಗಾರಿಕೆಯನ್ನು ರೂಢಿಸಿಕೊಂಡು ಮುಗ್ಧ ಜನತೆಯಲ್ಲಿ ಮತ್ತಷ್ಟು ಮೌಢ್ಯವನು ತುಂಬುವ ಹುನ್ನಾರ ಮಾಡುತ್ತಿರುವ ದಿನಗಳೇ ಶ್ರೀ ಸಿದ್ದೇಶ್ವರರಂತಹವರು ಇದ್ದರು ಎನ್ನುವುದೇ ಅವರ ಸಂತತ್ವಕ್ಕೆ ಸಾಕ್ಷಿಯಾಗಿದೆ. ಉತ್ತರ ಕರ್ನಾಟಕದ ಜನ ಕೆಲವು ವರ್ಷಗಳ ಹಿಂದೆ ನೆರೆಹಾವಳಿಗೆ ತುತ್ತಾದಾಗ ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಅಲ್ಲಿಗೆ ಹೋಗಿ ನೊಂದವರಿಗೆ ಸಹಾಯ ಹಸ್ತ ಚಾಚಿದ ಸಂದರ್ಭದಲ್ಲಿ ಎಲ್ಲರಿಗೂ ಕೃತಜ್ಣತೆಗಳನ್ನು ಸಲ್ಲಿಸಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ‘‘ಎಲ್ಲಿಯ ದಕ್ಷಿಣ ಕರ್ನಾಟಕ ಎಲ್ಲಿಯ ಉತ್ತರ ಕರ್ನಾಟಕ ಇದು ಕೇವಲ ರಾಜಕೀಯದವರು ಭೌಗೋಳಿಕ ಕವಚ ಹಾಕಿದ ಕೃತಕ ಗೆರೆಗಳು ಈಗ ತಾವೆಲ್ಲ ಈ ಕೃತಕ ಭಾವಗಳನ್ನು ನೊಂದವರ ಕಣ್ಣೀರು ಒರೆಸಲು ಬಂದಿದ್ದೀರಿ ಇಲ್ಲಿ ಉತ್ತರವೂ ಇಲ್ಲ, ದಕ್ಷಿಣವೂ ಇಲ್ಲ ಎಲ್ಲ ಒಂದರೊಳಗೊಂದು ವಿಲೀನವಾಗಿ ‘ಕೂಡಲ ಸಂಗಮ’ದಂತಾಗಿದೆ; ಭಾವಗಳು ಬೆರೆತಾಗ ಮನುಷ್ಯನ ಕೃತಕಗೆರೆಗಳೆಲ್ಲ ಕ್ಷಣಾರ್ಧದಲ್ಲಿ ಒಂದಾಗುತ್ತದೆ. ಜಗತ್ತು ಸಹ ಒಂದು ದಿನ ಹಿಗೆೆಯೇ ಎಲ್ಲ ಕೃತಕ ಗೆರೆಗಳನ್ನು ಅಳಿಸಿ ಹಾಕುವ ದಿನ ಬೇಗನೆ ಬರಲಿ ಎಂದು ಆ ಶಿಸುತ್ತೇನೆ’’ ಎಂದಿದ್ದರು. ಪ್ರಾಯಃ ಅವರ ಈ ಮಾತು ಎಂದು ಜಗತ್ತಿನ ಕಣ್ಣು ತೆರೆಸಿತೋ ನೋಡಬೇಕು.
ಅವರ ಅಂತಿಮ ಅಭಿಮಾನದ ಪತ್ರ ಮತ್ತೆ ಮತ್ತೆ ಮನನ ಮಾಡುವಂತಹದ್ದು. ನಿಸರ್ಗವು ಮೈಮನಸ್ಸುಗಳಿಗೆ ತಂಪನ್ನಿಸುತ್ತವೆ. ತಾತ್ವಿಕ ಚಿಂತನೆಗಳು ತಿಳಿ ಬೆಳಗಹರಡಿವೆ.ಜಾಗತಿಕ ತತ್ವ ಜ್ನಾನಿಗಳು ಮತ್ತು ವಿಜ್ಞಾನಿ ಶೋಧನೆಗಳು ದೃಷ್ಟಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ. ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದ್ದಕ್ಕೂ ಉಪಕೃತ’’. ಇಂತಹ ಶತಮಾನದ ಸಂತ ಈಗ ಕೇವಲ ನೆನಪು ಮಾತ್ರ.
ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನಗಳಲ್ಲಿ ಇಂತಹ ಸಾವಿರಾರು ಬೀಜರೂಪ ಮಾತುಗಳು ಇಡಿಕಿರಿದಿರುತ್ತವೆ. ಬಹುಭಾಷಾ ವಿದ್ವಾಂಸರಾದ ಶ್ರೀಗಳ ಮಾತುಗಳಲ್ಲಿ ಜೋಗ ಜಲಪಾತ ಧುಮ್ಮಿಕ್ಕುವ ರಭಸವಾಗಲಿ ಉಕ್ಕೇರಿದ ನದಿಯ ಭೋರ್ಗರೆತವಾಗಲಿ ಕಂಡು ಬರುತ್ತಿರಲಿಲ್ಲ ಪರಿಶುದ್ದ ಪಾರದರ್ಶಕ ನಿರ್ಮಲ ಸಮತಟ್ಟು ಬಯಲಿನಲ್ಲಿ ಕೇಳಿಯೂ ಕೇಳಿಸದಿದ್ದಂತೆ ಹರಿಯುವ ಸ್ವರೂಪದ್ದಾಗಿತ್ತು. ಆ ಕಾರಣಕ್ಕಾಗಿಯೇ ಕರ್ನಾಟಕ, ಮಹಾರಾಷ್ಟ್ರಗಳ ಯಾವುದೇ ಪ್ರದೇಶದಲ್ಲಿ ಅವರ ಪ್ರವಚನಕ್ಕೆ ಕಿಕ್ಕಿರಿದು ಜನ ಸೇರುತ್ತಿದ್ದರು.





