ಹನೂರು: ಮೂವತ್ತು ವರ್ಷಗಳ ನಂತರ 12 ಡಿಎಸ್ಎಸ್ ಬಣಗಳು ಒಟ್ಟುಗೂಡಿ ಬೃಹತ್ ಐಕ್ಯತಾ ಸಮಾವೇಶವನ್ನು ಆಯೋಜಿಸಲಾಗಿದ್ದು, ಪ್ರತಿ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗದ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಮನವಿ ಮಾಡಿದರು.
ಪಟ್ಟಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನದ ಅಂಗವಾಗಿ ಬೆಂಗಳೂರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳಿಂದ ಅಸಹಿಷ್ಣತೆ ವಾತಾವರಣ ನಿರ್ಮಾಣವಾಗಿದ್ದು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ದಿಸೆಯಲ್ಲಿ ನಾವು ಒಗ್ಗಟ್ಟಾಗಬೇಕಾಗಿದೆ ಎಂದರು.
ಪ್ರಗತಿಪರ ಒಕ್ಕೂಟಗಳ ಜಿಲ್ಲಾಧ್ಯಕ್ಷ ಸಿ. ಎಂ. ಕೃಷ್ಣಮೂರ್ತಿ ಮಾತನಾಡಿ, ಎಸ್. ಸಿ.ಎಸ್.ಟಿ. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕಡಿವಾಣ ಹಾಕುವ ಷಡ್ಯಂತರ ನಡೆಯುತ್ತಿದೆ. ಪಿ. ಎಚ್. ಡಿ, ವೈದ್ಯಕೀಯ ಮೆಡಿಕಲ್ ಸೀಟ್ ಸೇರಿದಂತೆ ಇನ್ನಿತರೆ ಉನ್ನತ ವ್ಯಾಸಂಗಕ್ಕೆ ಮೀಸಲಾತಿಯನ್ನು ಕಡಿತಗೊಳಿಸುವ ಕೆಲಸ ನಡೆಯುತ್ತಿದೆ. ಮೀಸಲಾತಿಯನ್ನು ಒದಗಿಸಬೇಕಾಗುತ್ತದೆ ಎಂದು ವಿವಿಧ ಸಂಸ್ಥೆಗಳನ್ನು ಖಾಸಗಿಕರಣ ಮಾಡಲಾಗುತ್ತಿದೆ. ಅಂಬಾನಿ ಅದಾನಿಗೆ ಮಾರಾಟ ಮಾಡಲಾಗುತ್ತಿದೆ. ದೇಶದ ಮಾನವ ಅಭಿವೃದ್ಧಿ ಸೂಚ್ಯಂಕ ಅದೋಗತಿಗೆ ಇಳಿದಿದೆ. ಇವೆಲ್ಲವೂ ಒಳ್ಳೆಯ ಜನಕ್ಕೆ ತಿಳಿಯುತ್ತಿಲ್ಲ ಎಂದರು.
ಕೆ.ಎಂ.ನಾಗರಾಜು ಮಾತನಾಡಿ, ಮೀಸಲಾತಿಯಿಂದ ಅಧಿಕಾರ ಪಡೆದ ಎಂಎಲ್ಎ, ಎಂಪಿಗಳು ಧ್ವನಿಯತ್ತದ ಹಿನ್ನೆಲೆಯಲ್ಲಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಎನ್. ಇ. ಪಿ. ಶಿಕ್ಷಣವನ್ನು ಜಾರಿಗೆ ತಂದು ಹಿಂದೆ ಇದ್ದ ಮನಸ್ಮೃತಿಗೆ ದೂಡುತ್ತಿದ್ದಾರೆ. 2027 ಕ್ಕೆ ಹಿಂದುತ್ವ ತರಲು ಹೊರಟಿದ್ದಾರೆ. ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ. ಸಂವಿಧಾನವನ್ನು ಬೇರೆಯವರು ಓದುತ್ತಾರೆ ಆದರೆ ನಾವು ಓದುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯಳಂದೂರು ರಾಜಣ್ಣ, ಜಿಲ್ಲಾ ಸಂಘಟನೆಯ ಶಿವಣ್ಣ, ಜಿಲ್ಲಾ ಸಂಚಾಲಕ ವೀರ, ಜಿಲ್ಲಾ ಸಂಘಟಕ ಸಂಚಾಲಕ ಜಾನಿ, ಖಜಾಂಚಿ ಕೃಷ್ಣ, ಜಿಲ್ಲಾ ಮಹಿಳಾ ವಿಭಾಗದ ಸಂಚಾಲಕಿ ರಾಧಶೇಖರ್, ಭಾಗ್ಯ, ಹಿಂಡಯ್ಯ, ವಡೆಕೆ ಹಳ್ಳ ಮರಿಯಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.





