ಹುಣಸೂರು : ಹುಣಸೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂರು ವರ್ಷದ ಮಗು ಹಾಗೂ ವೃದ್ದರೊಬ್ಬರು ಸಾವಿಗೀಡಾಗಿದ್ದಾರೆ.
ಮೈಸೂರಿನಿಂದ ಹುಣಸೂರಿಗೆ ಬರುತ್ತಿದ್ದ ಹುಣಸೂರು ಬಸ್ ಡಿಪೋಗೆ ಸೇರಿದ ಬಸ್ ಮನುಗನಹಳ್ಳಿ ಗೇಟ್ ಬಳಿ ದ್ವಿಚಕ್ರವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಓಡಿಸುತ್ತಿದ್ದ ಸೋಮಶೇಖರ್ ಎಡ ಭಾಗಕ್ಕೆ ಬಿದ್ದರೆ, ಹಿಂಬದಿ ಸವಾರ ಹಳ್ಳಿಕೆರೆ ಗ್ರಾಮದ ನಿವಾಸಿ ಶಿವಪ್ಪ (೬೪) ಬಸ್ ಚಕ್ರದ ಕೆಳಗಡೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಓಡಿಸುತ್ತಿದ್ದ ಸೋಮಶೇಖರ್ ಗಾಯಗೊಂಡಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗು ಸಾವು
ಹೆದ್ದಾರಿಯ ಮಧುಗಿರಿಕೊಪ್ಪಲು ಬಳಿ ದ್ವಿಚಕ್ರ ವಾಹನಕ್ಕೆ ಕೊಡಗಿನ ಕಡೆಗೆ ಹೂವು ತುಂಬಿಕೊಂಡು ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಎಚ್.ಡಿ.ಕೋಟೆ ತಾಲ್ಲೂಕಿನ ಮಹದೇಶ್ವರ ಕಾಲೋನಿ ನಿವಾಸಿ ಸೋಮೇಶ್ ಅವರ ಮಗು ವೇದಾಂತ್ (೩) ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾಗಿದೆ. ಸೋಮೇಶ್ ಅವರ ಪತ್ನಿ ಅಮೂಲ್ಯ, ಪುತ್ರಿ ಅನುಶ್ರೀ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡ-ಹೆಂಡತಿ ತಮ್ಮ ಇಬ್ಬರು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಕನಕಪುರ ತಾಲ್ಲೂಕಿನ ಯರೇಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು ಎಂದು ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ತಿಳಿಸಿದರು. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.





