ಮುಂಬೈ: ಪ್ರಾಯೋಗಿಕ ಹಂತದ ಡಿಜಿಟಲ್ ಕರೆನ್ಸಿ ಡಿಜಿಟಲ್ ರೂಪಾಯಿಯನ್ನು (ಸಗಟು ವಿಭಾಗ) ಮಂಗಳವಾರ ಬಿಡುಗಡೆ ಮಾಡುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಸರ್ಕಾರಿ ಸೆಕ್ಯುರಿಟೀಸ್ ವಹಿವಾಟಿಗಾಗಿ ಈ ರೂಪಾಯಿ ಬಳಕೆಯಾಗಲಿದೆ. ಸರ್ಕಾರಿ ಸೆಕ್ಯುರಿಟೀಸ್ನ ಸೆಕೆಂಡರಿ ಮಾರುಕಟ್ಟೆ ವ್ಯವಹಾರಗಳಿಗಾಗಿ ಪ್ರಾಯೋಗಿಕ ಡಿಜಿಟಲ್ ರೂಪಾಯಿ ಬಳಕೆಯಾಗಲಿದೆ ಎಂದು ಆರ್ಬಿಐ ಪ್ರಕಟಣೆ ತಿಳಿಸಿದೆ.
ಪ್ರಾಯೋಗಿಕ ಡಿಜಿಟಲ್ ರೂಪಾಯಿ ಬಿಡುಗಡೆಗಾಗಿ 9 ಬ್ಯಾಂಕ್ಗಳನ್ನು ಆರ್ಬಿಐ ಗುರುತಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಹಾಗೂ ಎಚ್ಎಸ್ಬಿಸಿ ಬ್ಯಾಂಕ್ಗಳನ್ನು ಪ್ರಾಯೋಗಿಕ ಡಿಜಿಟಲ್ ರೂಪಾಯಿ ವಹಿವಾಟಿಗಾಗಿ ಗುರುತಿಸಲಾಗಿದೆ.
ಮುಂದಿನ ಒಂದು ತಿಂಗಳ ಒಳಗಾಗಿ ಚಿಲ್ಲರೆ ವಿಭಾಗದ ಪ್ರಾಯೋಗಿಕ ಡಿಜಿಟಲ್ ರೂಪಾಯಿಯನ್ನು ಬಿಡುಗಡೆ ಮಾಡುವುದಾಗಿ ಆರ್ಬಿಐ ತಿಳಿಸಿದೆ. ಆಯ್ದ ಪ್ರದೇಶಗಳಲ್ಲಿ ಸೀಮಿತ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಚಿಲ್ಲರೆ ವಿಭಾಗದ ಪ್ರಾಯೋಗಿಕ ಡಿಜಿಟಲ್ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ.
ಹಣಕಾಸು ಅಕ್ರಮ ಮತ್ತು ಹಣದ ದುರ್ಬಳಕೆಯನ್ನು ತಡೆಗಟ್ಟಲು ಡಿಜಿಟಲ್ ರೂಪಾಯಿಯನ್ನು ಪ್ರಾಯೋಗಿಕವಾಗಿ ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಆರ್ಬಿಐ ಇತ್ತೀಚೆಗೆ ಹೇಳಿತ್ತು. ಕೆಲವು ಸಮಯದಿಂದ ಡಿಜಿಟಲ್ ಕರೆನ್ಸಿಯ ಸಾಧಕ-ಬಾಧಕಗಳನ್ನು ಅನ್ವೇಷಿಸಲಾಗುತ್ತಿದೆ ಮತ್ತು ಪ್ರಸ್ತುತ ಹಂತ ಹಂತದ ಅನುಷ್ಠಾನದ ಕಾರ್ಯತಂತ್ರದ ಕಡೆಗೆ ಗಮನಹರಿಸಲಾಗುತ್ತಿದೆ. ಹಣಕಾಸಿನ ವ್ಯವಸ್ಥೆಗೆ ಯಾವುದೇ ಅಡ್ಡಿಯಾಗದ ರೀತಿಯಲ್ಲಿ ಡಿಜಿಟಲ್ ರೂಪಾಯಿ ಬಳಕೆ ಮಾಡಲಾಗುವುದು ಮತ್ತು ಇದಕ್ಕೆ ಸಂಬಂಧಿದ ಕಾರ್ಯವ್ಯಾಪ್ತಿಯನ್ನು ಶೀಘ್ರದಲ್ಲೇ ನಿರ್ಧಾರಿಸಲಾಗುವುದು. ಇದೀಗ ಇದನ್ನು ಅನುಷ್ಠಾನಗೊಳಿಸುವ ಕಾರ್ಯತಂತ್ರಗಳ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಆರ್ಬಿಐ ಹೇಳಿತ್ತು.