Mysore
15
few clouds

Social Media

ಗುರುವಾರ, 22 ಜನವರಿ 2026
Light
Dark

ಚಾಮುಂಡಿ ಬೆಟ್ಟ ಯಾರದು?

Strict action at Chamundi Hill: Reels and videos will no longer be allowed

ಚಾಮುಂಡಿ ಬೆಟ್ಟ ಯಾರದು? ಕಾವೇರಿ ನದಿ ಯಾರದು? ಕಾವೇರಿ ಕೊಡಗಿನಲ್ಲಿ ಹುಟ್ಟುವುದರಿಂದ ಕೊಡವರು ‘ಕಾವೇರಿ ನಮ್ಮದು’ ಎನ್ನುತ್ತಾರೆ. ಮಂಡ್ಯದ ರೈತರು ಕಾವೇರಿ ನೀರನ್ನು ತಮ್ಮ ಕೃಷಿಗೆ ಬಳಸಿ ಸಮೃದ್ಧ ಬೆಳೆಯನ್ನು ತೆಗೆಯುವುದರಿಂದ ಕಾವೇರಿ ನಮ್ಮದು ಎನ್ನುತ್ತಾರೆ.

ಮೈಸೂರು, ಬೆಂಗಳೂರು ಮತ್ತು ಕಾವೇರಿ ನೀರನ್ನು ಕುಡಿಯುವ ಎಲ್ಲರೂ ಕಾವೇರಿ ನಮ್ಮದು ಎನ್ನುತ್ತಾರೆ. ತಮಿಳುನಾಡಿನಲ್ಲಿಯೂ ಕಾವೇರಿ ಉದ್ದವಾಗಿ ಹರಿದು ರೈತರ ಬದುಕನ್ನು ಸಮೃದ್ಧಗೊಳಿಸಿದೆ. ತಮಿಳುನಾಡು ಕಾವೇರಿ ನಮ್ಮದು ಎನ್ನುತ್ತದೆ. ಇದು ಯಾವುದನ್ನೂ ನಿರಾಕರಿಸಲು ಬರುವುದಿಲ್ಲ.

ಅದಕ್ಕಾಗಿಯೇ ಕಾವೇರಿ ನೀರಿನ ಹಂಚಿಕೆ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಆಗಿದೆ. ಅಷ್ಟೇಕೆ ಎಲ್ಲ ನದಿಗಳೂ ಹೀಗೆಯೇ. ನದಿಗಳು ಹುಟ್ಟುವ ಜಾಗದಿಂದ ಹಿಡಿದು ಸಮುದ್ರ ಸೇರುವವರೆಗಿನ ಎಲ್ಲ ಜಾಗ ಗಳಲ್ಲಿಯೂ ಜನ ಆ ನದಿ ತಮ್ಮದೆಂದೇ ಹೇಳುತ್ತಾರೆ; ಗೌರವಿಸುತ್ತಾರೆ; ಪೂಜಿಸುತ್ತಾರೆ.

ಗುಡ್ಡ ಬೆಟ್ಟ ನದಿ ಕಾಡು ಕಣಿವೆ ಆಕಾಶ ಮೋಡಗಳು ಸೂರ್ಯ ಚಂದ್ರ ಚುಕ್ಕೆಗಳು ಎಲ್ಲರಿಗೂ ಸೇರಿವೆ. ಅವುಗಳ ಮೇಲೆ ಎಲ್ಲರಿಗೂ ಹಕ್ಕಿದೆ. ಜಾತಿ, ಧರ್ಮ, ಮತ ಪಂಥಗಳು, ಗಡಿರೇಖೆಗಳು ಅಡ್ಡಬರುವುದಿಲ್ಲ. ಈ ಬೆಟ್ಟ ಯಾರದು ಎಂದು ಕೇಳುವ ಪ್ರಶ್ನೆಯೇ ಅಸಂಬದ್ಧ. ಇಂಥ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ, ಇದು ಎಲ್ಲಿಗೆ ಮುಟ್ಟಬಹುದು ಎಂಬುದನ್ನು ಗಮನಿಸುವುದೂ ಅಗತ್ಯ. ತಾಜ್‌ಮಹಲ್ ಯಾರದು? ಶ್ರೀರಂಗಪಟ್ಟಣ ಯಾರದು? ಗಂಗಾ ನದಿ ಯಾರದು? ಗಂಗಾ ನದಿಯಲ್ಲಿ ‘ಪವಿತ್ರ’ ಸ್ನಾನ (ಮನುಷ್ಯರು ತಾವು ಮಾಡುವ ಸ್ನಾನ ಪವಿತ್ರವೆಂದು ಭಾವಿಸಿದರೂ, ಅದು ಒಂದು ನದಿಯ ನೀರನ್ನು ಮಲಿನಗೊಳಿಸುವ ಕ್ರಿಯೆಯೇ ಆಗಿರುತ್ತದೆ) ಮಾಡುವ ಹಕ್ಕು ಕೇವಲ ಒಂದು ಧರ್ಮದವರಿಗೆ ಮಾತ್ರ ಸೀಮಿತವೇ? ಈ ನದಿಯಲ್ಲಿ ಸ್ನಾನ ಮಾಡಲು ಬಯಸುವ ಎಲ್ಲರಿಗೂ ಆ ಹಕ್ಕು ಇದೆಯಲ್ಲವೇ?

ಇನ್ನು ಪೂಜೆಯ ಪ್ರಶ್ನೆ. ಕೆಲವರು ಮೂರ್ತಿ ಪೂಜೆ ಮಾಡುತ್ತಾರೆ.; ಆಕಾರವನ್ನು ಪೂಜೆ ಮಾಡುತ್ತಾರೆ. ಕೆಲವರು ನಿರಾಕಾರವನ್ನು ಪೂಜಿಸುತ್ತಾರೆ; ಬಯಲನ್ನು ಪೂಜಿಸುತ್ತಾರೆ. ಕೆಲವರು ಕೇವಲ ಗ್ರಂಥಗಳನ್ನು ಪೂಜಿಸುತ್ತಾರೆ. ಕೆಲವರು ಗುರುವನ್ನು ಮಾತ್ರ ಪೂಜಿಸುತ್ತಾರೆ. ಹಾಗೆಯೇ ಮರ, ಗಿಡ, ಕಲ್ಲು, ನೀರು, ಸೂರ್ಯ ಚಂದ್ರ, ನಕ್ಷತ್ರಗಳನ್ನು ಪೂಜಿಸುವವರೂ ಇದ್ದಾರೆ. ಮರ, ಕಸಬರಿಕೆ, ಒನಕೆಗಳನ್ನೂ ಪೂಜಿಸುವವರಿದ್ದಾರೆ.

ಅವರವರ ನಂಬಿಕೆ ಅವರಿಗೆ. ಹಾಗೆಂದು ಮೂರ್ತಿ ಪೂಜಿಸುವವರು ನಿರಾಕಾರವನ್ನು ಪೂಜಿಸಬಾರ ದೆಂದೇನೂ ಇಲ್ಲ; ಗ್ರಂಥಗಳನ್ನು, ಗುರುಗಳನ್ನು ಪೂಜಿಸಬಾರದು ಎಂದೇನೂ ಇಲ್ಲ. ಅವರವರ ನಂಬಿಕೆ ಅವರ ವರ ಭಕ್ತಿ ಭಾವಗಳು. ಯಾರು ಏನ್ನನ್ನೂ ಪೂಜಿಸಬಹುದು, ನಿರಾಕರಿಸಬಹುದು. ನಿರಾಕರಿಸಲೂ ಅವಕಾಶ ಇದೆ. ಇದು ಪ್ರಜಾಪ್ರಭುತ್ವದ ಹಿರಿಮೆ. ಇನ್ನೂ ಕೆಲವು ಸಂಗತಿಗಳನ್ನು ನೋಡಬಹುದು.

ಚಾಮುಂಡೇಶ್ವರಿ ಯಾರು? ಉತ್ತನಹಳ್ಳಿ ಮಾರಿ ಯಾರು? ನಂಜನಗೂಡಿನ ನಂಜುಂಡ ಯಾರು? ಇವರ ನ್ನೆಲ್ಲ ಈ ನೆಲಕ್ಕೆ ಎಳೆದುತಂದು ತಮ್ಮೊಡನೆ ನಿತ್ಯ ಬದುಕುತ್ತಿರುವಂತೆ ರೂಪಿಸಿಕೊಂಡವರು ನಮ್ಮ ಜಾನಪದರು. ವಿಶೇಷವಾಗಿ, ಇವತ್ತು ‘ಕೆಳವರ್ಗದವ ರೆಂದು’ ಪರಿಗಣಿಸಿ, ಕಡೆಗಣ್ಣಿನಿಂದ ನೋಡಿ ಯಾರನ್ನು ಅವಮಾನಿಸಲಾಗಿದೆಯೋ ಅಂಥವರ ಸಖರು ಈ ಚಾಮುಂಡಿ, ಮಾರಿ, ನಂಜುಂಡರು. ಜೊತೆಗೆ ಈ ಸಮುದಾಯಗಳ ದೇವ ದೇವತೆಗಳೂ ಹೌದು. ಶತಶತಮಾನಗಳಿಂದ ಪೂಜಿಸುತ್ತ, ಹಾಡುತ್ತ, ತಮ್ಮ ಉಸಿರಿನೊಂದಿಗೆ ಈ ದೈವಗಳನ್ನು ಕಾಪಾಡಿಕೊಂಡು ಬಂದಿರುವವರು ಈ ಸಮುದಾಯಗಳ ಜನರೇ. ಎಲ್ಲದರ ಮೇಲೂ ಹಕ್ಕನ್ನು ಸ್ಥಾಪಿಸಲು ಮುಂದಾದ ಜನ ತಮ್ಮ ಅಽಕಾರ, ವಿದ್ಯೆ, ಸಂಪತ್ತು, ಭೂಮಿಯ ಒಡೆತನ, ಆಡಳಿತ ಇತ್ಯಾದಿಗಳನ್ನು ಬಳಸಿ ಊರು ಕೇರಿಗಳನ್ನು ನುಂಗಿದ್ದಲ್ಲದೆ, ದೇವಾನುದೇವತೆಗಳನ್ನು ತಮ್ಮವೆಂದು ಸಾರಿದರು.

ಈ ತಳ ಸಮುದಾಯಗಳನ್ನು ತಮ್ಮ ಧಾರ್ಮಿಕ ಚೌಕಟ್ಟಿನಿಂದ ಹೊರಗಿಟ್ಟು, ದೇವರುಗಳ ಮೇಲಿನ ಅವರ ಹಕ್ಕುಗಳನ್ನು ಕಿತ್ತುಕೊಂಡು ಮೆರೆದವರೇ ಇವತ್ತು ಅಸಂಬದ್ಧ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ; ರಾಜಕೀಯ ದೊಂಬರಾಟವನ್ನು ಆಡುತ್ತಿದ್ದಾರೆ. ಇನ್ನು ಕನ್ನಡ ಯಾರ ಭಾಷೆ? ಕರ್ನಾಟಕದಲ್ಲಿ ವಾಸಿಸುವ, ಕನ್ನಡ ಭಾಷೆಯನ್ನು ಬಳಸುವ ಎಲ್ಲರ ಭಾಷೆಯೊ? ಅಥವಾ ಕೇವಲ ಕೆಲವರ, ಕೆಲವು ಧರ್ಮಗಳಿಗೆ ಸೇರಿದವರ ಭಾಷೆಯೋ? ಕರ್ನಾಟಕದ ಮತ್ತು ಕನ್ನಡ ಭಾಷೆಯ ಚರಿತ್ರೆಯನ್ನು ಗಮನಿಸಿ. ತಮಿಳು ಮಾತೃ ಭಾಷೆಯ ಮಾಸ್ತಿ, ರಾಜರತ್ನಂ, ಪುತಿನ ಮೊದಲಾದ ಸಾಹಿತಿಗಳು ಕನ್ನಡದ ಘನತೆಯನ್ನು ಎತ್ತರಿಸಿದವರು; ಕನ್ನಡ ಭಾಷೆಗೆ ಕಸುವನ್ನು ತುಂಬಿದವರು. ಹೀಗೆ ಕಸುವನ್ನು ತುಂಬಿದ ಇತರ ಮಾತೃ ಭಾಷೆಯ ಅನೇಕರು ಕನ್ನಡದಲ್ಲಿದ್ದಾರೆ. ತುಳು, ಕೊಂಕಣಿ, ಬ್ಯಾರಿ, ಉರ್ದು, ತೆಲುಗು ಹೀಗೆ ಅನೇಕ ಮಾತೃಭಾಷೆಯ ಸಮುದಾಯಗಳು ಕರ್ನಾಟಕದಲ್ಲಿ ಬದುಕುತ್ತ, ಕನ್ನಡ ಭಾಷೆಯನ್ನು ತಮ್ಮ ನಿತ್ಯದ ಭಾಷೆಯಾಗಿ ಮಾಡಿಕೊಂಡು, ಅದನ್ನುತಮ್ಮ ಅಭಿವ್ಯಕ್ತಿಗೆ ಬಳಸಿ ಕನ್ನಡದ ಸತ್ವವನ್ನು ಹೆಚ್ಚಿಸಿ, ಅದರ ಘನತೆಗೆ ಕಾರಣರಾದವರ ಪಟ್ಟಿಯನ್ನು ಕೊಡುತ್ತ ಹೋಗಬಹುದು. ಅದು ತುಂಬ ದೊಡ್ಡದೇ ಇದೆ.

ಇವರನ್ನೆಲ್ಲ ಕನ್ನಡದಿಂದ ಹೊರಗಿಡಲು ಹೇಗೆ ಸಾಧ್ಯ. ಭಾನು ಮುಷ್ತಾಕ್, ಫಕೀರ್ ಮಹಮ್ಮದ್ ಕಟ್ಪಾಡಿ, ಬೊಳುವಾರು, ಸಾರಾ ಅಬೂಬ್‌ಕರ್, ನಿಸಾರ್ ಅಹಮದ್, ಎಂ. ಅಕಬರ ಅಲಿ ಮೊದಲಾದವರನ್ನು ಅವರ ಧರ್ಮದ ಕಾರಣವನ್ನು ಮುಂದಿಟ್ಟುಕೊಂಡು ಕನ್ನಡದ ಲೇಖಕರಲ್ಲ ಎಂದು ಹೇಳುವುದು ಮೂರ್ಖತನವಲ್ಲದೇ ಬೇರೇನಾಗಲು ಸಾಧ್ಯ? ದಸರಾ ನಾಡಹಬ್ಬ ಎಂಬುದನ್ನು ಹೊಸದಾಗಿ ಸಾರಬೇಕಾಗಿಲ್ಲ. ಈ ನಾಡಿನವರು ಆಚರಿಸಿಕೊಂಡು ಬಂದ ಹಬ್ಬ. ಈಗಂತೂ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದರಿಂದ ಇದು ಕೇವಲ ರಾಜರ ಅಥವಾ ಒಂದು ಧರ್ಮೀಯರ ಹಬ್ಬವಲ್ಲ. ಈ ನಾಡವರ ಹಬ್ಬ. ಮತ ಧರ್ಮ ಜಾತಿ  ಪಂಥಗಳನ್ನು ಮೀರಿದ ಹಬ್ಬ. ದೇಶೀಯರು, ವಿದೇಶೀಯರು, ವಿವಿಧ ಬಣ್ಣದವರು ಎಲ್ಲರೂ ಭಾಗವಹಿಸಲು ಮುಕ್ತ ಅವಕಾಶ ಇರುವ ಹಬ್ಬ. ಈ ದಸರಾ ಉದ್ಘಾಟನೆಗೆ ಸಹಜವಾಗಿಯೇ ಜನರ ಸರ್ಕಾರ ನಾಡು ನುಡಿಗೆ ಜನತೆಗೆ ದೊಡ್ಡ ಕೊಡುಗೆಯನ್ನು ಕೊಟ್ಟವರಿಗೆ, ಕೊಡುವವರಿಗೆ ಅವಕಾಶವನ್ನು ಕಲ್ಪಿಸಿದೆ.

ಇದು ಒಂದು ಕೃತಜ್ಞತೆ ಸಲ್ಲಿಸುವ ಕೆಲಸ. ಉಪಕಾರವನ್ನು ನೆನೆಯುವ ಕೆಲಸ. ಇದೊಂದು ಪರಿಪಾಠವಾಗಿ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕನ್ನಡದ ಘನತೆಯನ್ನು ಹೆಚ್ಚಿಸಿ ಇದೀಗ ಅಂತರ ರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿರುವ ಬಾನು ಮುಷ್ತಾಕ್ ಅವರಿಗೆ ಈ ಬಾರಿಯ ದಸರಾ ಉದ್ಘಾಟನೆಯ ಗೌರವ ದೊರೆತಿರುವುದು ಕರ್ನಾಟಕ ಸರ್ಕಾರದ ವಿವೇಕಯುತ ನಡೆಯನ್ನು ತೋರಿಸುತ್ತದೆ. ಈ ನಡೆಯನ್ನು ವಿರೋಧಿಸುವುದಕ್ಕೆ ಕಾರಣವಂತೂ ಇಲ್ಲವೇ ಇಲ್ಲ. ಕ್ಷುಲ್ಲಕ ಎನ್ನಬಹುದಾದ ಕಾರಣಗಳನ್ನು ತೋರಿಸಿದಂತೆ ಮಾಡಿ ದೊಡ್ಡ ಗಂಟಲಲ್ಲಿ ವಿರೋಧ ತೋರಿಸುವುದರ ಹಿಂದೆ ಯಾವ ತರ್ಕವಿದೆ? ಯಾವ ವಿವೇಚನೆ ಇದೆ? ಇದು ನಮ್ಮ ಜನರಿಗೆ ತಿಳಿಯದಂಥ ನಿಗೂಢವಲ್ಲ. ಅವರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸರ್ಕಾರ ಕೂಡ ತಲೆಕೆಡಿಸಿಕೊಳ್ಳಲಾರದು.

” ಈ ದಸರಾ ಉದ್ಘಾಟನೆಗೆ ಸಹಜವಾಗಿಯೇ ಜನರ ಸರ್ಕಾರ ನಾಡು ನುಡಿಗೆ ಜನತೆಗೆ ದೊಡ್ಡ ಕೊಡುಗೆಯನ್ನು ಕೊಟ್ಟವರಿಗೆ, ಕೊಡುವವರಿಗೆ ಅವಕಾಶವನ್ನು ಕಲ್ಪಿಸಿದೆ. ಇದು ಒಂದು ಕೃತಜ್ಞತೆ ಸಲ್ಲಿಸುವ ಕೆಲಸ. ಉಪಕಾರವನ್ನು ನೆನೆಯುವ ಕೆಲಸ. ಇದೊಂದು ಪರಿಪಾಠವಾಗಿ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿದೆ”

-ಜಿ.ಪಿ.ಬಸವರಾಜು

 

Tags:
error: Content is protected !!