ದೆಹಲಿ ಕಣ್ಣೋಟ
ಬಿಹಾರದ ವಿಧಾನಸಭೆಗೆ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ತಮ್ಮದೇ ಆದ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಕೇಂದ್ರ ಚುನಾವಣಾ ಆಯೋಗವು ಜೂನ್ ೨೫ರಿಂದಲೇ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ರಾಷ್ಟ್ರೀಯ ಜನತಾದಳ, ಕಾಂಗ್ರೆಸ್, ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ‘ಇಂಡಿಯಾ’ ಒಕ್ಕೂಟವು ಬಿಹಾರ ಚುನಾವಣೆಯ ಪಾರದರ್ಶಕತೆ ಬಗೆಗೆ ಹಲವು ಶಂಕೆ ವ್ಯಕ್ತಪಡಿಸಿರುವುದು ಈಗ ರಾಜಕೀಯ ವಲಯದಲ್ಲಿ ಟೀಕೆ ಟಿಪ್ಪಣಿಗೆ ಎಡೆಮಾಡಿಕೊಟ್ಟಿದೆ.
ಚುನಾವಣಾ ಆಯೋಗದ ಈ ಕ್ರಮದ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಕೈವಾಡವಿರುವುದಾಗಿ ‘ಇಂಡಿಯಾ’ ಒಕ್ಕೂಟ ಆರೋಪ ಮಾಡಿದೆ. ಕೆಲವು ತಿಂಗಳ ಹಿಂದೆ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಆರೋಪ ಮಾಡಿರುವ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಮತದಾರರ ಪಟ್ಟಿಯ ಪುನರ್ ಪರಿಷ್ಕರಣೆಯನ್ನು ಕೈಗೊಳ್ಳಲಾಗಿದೆ. ಮಹಾರಾಷ್ಟ್ರ ವಿಧಾನ ಸಭೆಯ ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಮತದಾನದ ವೇಳೆ ಅಕ್ರಮಗಳು ನಡೆದಿದ್ದರೆ ನಂಬಲರ್ಹವಾದ ಮಾಹಿತಿಯನ್ನು ನೀಡಬೇಕು. ರಾಹುಲ್ ಗಾಂಽ ಅವರೇ ಖುದ್ದು ಆಯೋಗದ ಕಾರ್ಯಾಲಯಕ್ಕೆ ಬಂದು ಚರ್ಚೆ ನಡೆಸಲು ಮುಂದಾಗಬೇಕೆಂದು ಚುನಾವಣಾ ಆಯೋಗ ಮುಕ್ತ ಆಮಂತ್ರಣ ನೀಡಿದೆ. ಆದರೆ ರಾಹುಲ್ ಗಾಂಧಿ ಇನ್ನೂ ಈ ಬಗೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಯೋಗ ಅವರ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದೆ.
ಮತದಾರರ ಪಟ್ಟಿಗೆ ಹೊಸದಾಗಿ ಮತದಾರರನ್ನು ಸೇರ್ಪಡೆ ಮಾಡುವುದು ದಿನನಿತ್ಯ ನಡೆಯುವ ಪ್ರಕ್ರಿಯೆ. ಆದರೆ ಚುನಾವಣೆಗಳು ಹತ್ತಿರ ಬಂದಾಗ ಸಹಜವಾಗಿಯೇ ಕೇಂದ್ರ ಚುನಾವಣಾ ಆಯೋಗ ಚುರುಕಾಗುತ್ತದೆ. ವಿದ್ಯುನ್ಮಾನ ಮತದಾನ ಯಂತ್ರದ ಮೂಲಕ ಚುನಾವಣಾ ಅಕ್ರಮಗಳನ್ನು ನಡೆಸಲಾಗುತ್ತಿದೆ. ಆದ್ದರಿಂದ ಹಿಂದಿನಂತೆ ಮತಪತ್ರಗಳನ್ನು ಬಳಸಬೇಕು ಎಂದು ಕಾಂಗ್ರೆಸ್, ಬಿಎಸ್‌ಪಿ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಆಗಿಂದಾಗ್ಗೆ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತಾ ಬಂದಿವೆ. ಆದರೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷವಿಲ್ಲ. ಅಲ್ಲಲ್ಲಿ ದೂರುಗಳು ಬಂದಾಗ ಅವುಗಳನ್ನು ಪರಿಶೀಲಿಸಿ ಸರಿಪಡಿಸಲಾಗಿದೆ ಎಂದು ಚುನಾವಣಾ ಆಯೋಗ ಸಮಜಾಯಿಷಿ ನೀಡಿದೆ. ಆದರೆ ಮತದಾರರ ಪಟ್ಟಿಯ ಪರಿಷ್ಕರಣೆಯ ವಿಶೇಷ ಆಂದೋಲನ ಸಂಬಂಧ ಪ್ರತಿಪಕ್ಷಗಳು ವ್ಯಕ್ತಪಡಿಸಿರುವ ಆಕ್ಷೇಪಗಳನ್ನು ಆಯೋಗ ತಳ್ಳಿಹಾಕುತ್ತಿದೆ.
ಪ್ರಜಾಪ್ರತಿನಿಧಿ ಕಾಯ್ದೆ ೧೯೫೦ರ ಸೆಕ್ಷನ್ ೨೧ (೩)ರ ಅನ್ವಯ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಯಾವಾಗ ಬೇಕಾದರೂ ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕಿದೆ. ಈಗಿರುವ ಮತದಾರರ ಪಟ್ಟಿಯಲ್ಲಿ ಮೃತಪಟ್ಟವರ ವಿವರಗಳು ಲಭ್ಯವಾಗಿಲ್ಲ. ಅನೇಕರು ತಮ್ಮ ಸ್ಥಳಗಳಲ್ಲಿ ವಾಸವಾಗಿಲ್ಲ. ಅಂತಹವರ ಹೆಸರುಗಳು ಪಟ್ಟಿಯಲ್ಲಿವೆ. ಹೊಸ ಸೇರ್ಪಡೆಯು ನಿಖರವಾಗಿ ಆಗುತ್ತಿಲ್ಲ ಎನ್ನುವ ವಾದ ಆಯೋಗದ್ದು. ಇಂತಹ ವಿಶೇಷ ಮತದಾರರ ಪರಿಷ್ಕರಣೆಯನ್ನು ೨೦೦೩ರಲ್ಲಿಯೂ ನಡೆಸಲಾಗಿತ್ತು. ಇದರಲ್ಲಿ ವಿಶೇಷ ಏನೂ ಇಲ್ಲ ಎನ್ನುವುದು ಆಯೋಗದ ವಿವರಣೆ.
ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶದಿಂದ ಕರೆದಿದ್ದ ಸಭೆಗಳಿಗೆ ಪ್ರತಿಪಕ್ಷಗಳಲ್ಲಿ ಕೆಲವು ಪ್ರತಿನಿಽಗಳು ಮಾತ್ರ ಭಾಗವಹಿಸಿದ್ದಾರೆ. ಹಾಗೆಯೇ ಏನೇ ದೂರುಗಳಿದ್ದರೂ ಲಿಖಿತರೂಪದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬೇಕೆಂದು ಕೋರಿದರೂ ನಿರ್ಲಕ್ಷ್ಯ ಮಾಡುವ ಮನೋಭಾವನೆ ಮುಂದುವರಿದಿದೆ ಎನ್ನುವುದು ಆಯೋಗದ ಟೀಕೆ. ಆದರೆ ಹೊಟ್ಟೆಪಾಡಿಗಾಗಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿರುವ ಬಡವರು ಮತ್ತು ಇತರೆ ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕುವ ಸಂಚು ಈ ಪರಿಷ್ಕರಣೆಯ ಹಿಂದಿದೆ. ಈ ವರ್ಗವು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳದ ಬೆಂಬಲಿಗರಾಗಿರುವುದರಿಂದ ಕೇಂದ್ರ ಸರ್ಕಾರದ ಸೂಚನೆಯಂತೆ ಚುನಾವಣಾ ಆಯೋಗ ಈ ಕ್ರಮಕ್ಕೆ ಮುಂದಾಗಿದೆ ಎನ್ನುವುದು ಈಗ ಬಾರಿ ವಿವಾದಕ್ಕೆ ಎಡೆಮಾಡಿದೆ.
ಮತದಾರರ ಪಟ್ಟಿಯ ಈ ವಿಶೇಷ ಪರಿಷ್ಕರಣೆಯಲ್ಲಿ ಈಗಿರುವ ಪಟ್ಟಿಯಲ್ಲಿ ಮತದಾರರ ಹೆಸರು ಉಳಿಯಬೇಕಾದರೆ ಪ್ರತಿಯೊಬ್ಬರೂ ತಮ್ಮ ಜನ್ಮ ದಿನಾಂಕ ಹಾಗೂ ತಾವು ವಾಸಿಸುವ ಸ್ಥಳದ ಬಗೆಗೆ ಅಽಕೃತ ಮಾಹಿತಿಯನ್ನು ಒದಗಿಸಬೇಕು. ಅನಕ್ಷರಸ್ಥರು ಮತ್ತು ಬಡವರ ಬಳಿ ಇಂತಹ ಮಾಹಿತಿ ಸಾಮಾನ್ಯವಾಗಿ ಲಭ್ಯವಿರುವುದಿಲ್ಲ. ಈ ಆಧಾರದ ಮೇಲೆ ಬಡವರನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕುವ ಮೂಲಕ ಬಿಜೆಪಿಗೆ ಸಹಾಯ ಮಾಡುವ ಉದ್ದೇಶವನ್ನು ಚುನಾವಣಾ ಆಯೋಗ ಹೊಂದಿದೆ ಎನ್ನುವುದು ಸಿಪಿಎಂನ ಪಾಲಿಟ್ ಬ್ಯೂರೋದ ಸದಸ್ಯ ನೀಲೋತ್ಪಾಲ್ ಬಸು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಈಗ ಕೈಗೊಂಡಿರುವ ಮತದಾರರ ಈ ಪರಿಷ್ಕರಣೆಯಲ್ಲಿ ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿ ಮತದಾರರ ಪಟ್ಟಿ ತಯಾರಿಕೆ ಕಾರ್ಯವನ್ನು ೨೫ ದಿನಗಳೊಳಗೆ ಮುಗಿಸುವುದಾಗಿ ಆಯೋಗ ಹೇಳುತ್ತಿದೆ. ವಲಸೆ ಹೋಗಿರುವ ಕಾರ್ಮಿಕರು ಈ ಕಾರ್ಯಕ್ಕಾಗಿ ತಮ್ಮ ಸ್ವಂತ ಸ್ಥಳಗಳಿಗೆ ವಾಪಸ್ ಬರಬೇಕಿದೆ. ವಲಸೆ ಹೋಗಿರುವ ಕಾರ್ಮಿಕರಿಗೆ ಈ ವಿಷಯ ವಾದರೂ ಹೇಗೆ ಗೊತ್ತಾಗಲಿದೆ. ಒಂದು ವೇಳೆ ಅವರು ಬರುವ ಹೊತ್ತಿಗೆ ಕೆಲವು ಪ್ರದೇಶಗಳಲ್ಲಿ ಪರಿಷ್ಕರಣೆ ಕಾರ್ಯ ಮುಗಿದುಹೋಗುವುದರಿಂದ ಈ ತುರ್ತು ಕ್ರಮ ಬಡವರನ್ನು ತೊಂದರೆಗೊಳಪಡಿಸಿದಂತಾಗಿದೆ ಎನ್ನುವವಾದ ಆರ್‌ಜೆಡಿ ಮತ್ತು ಸಿಪಿಎಂ ನಾಯಕರದ್ದು. ಇದಕ್ಕೆ ಚುನಾವಣಾ ಆಯೋಗದಿಂದ ಯಾವುದೇ ಸ್ಪಷ್ಟವಾದ ಉತ್ತರವಿಲ್ಲ ಎಂಬುದು ‘ಇಂಡಿಯಾ’ ಮೈತ್ರಿಕೂಟದ ಆರೋಪವಾಗಿದೆ.
ಬಿಹಾರ ಮತಪಟ್ಟಿ ಪರಿಷ್ಕರಣೆ ಮುಗಿದ ಮೇಲೆ ಮುಂದಿನ ವರ್ಷ ಚುನಾವಣೆ ನಡೆಯಲಿರುವ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಚುನಾವಣಾ ಆಯೋಗ ಕೈಗೆತ್ತಿಕೊಳ್ಳಲಿದೆ. ಚುನಾವಣೆಯು ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಯುವಲ್ಲಿ ಮತದಾರರ ಪಟ್ಟಿ ಮುಖ್ಯವಾದುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಚುನಾವಣಾ ಆಯೋಗವು ಕೇಳುವ ಎಲ್ಲ ದಾಖಲೆಗಳೂ ಸಾಮಾನ್ಯವಾಗಿ ಬಡವರ ಬಳಿ ಇರುವುದು ಅಪರೂಪ. ಈ ನೆಪದಲ್ಲಿ ಅಂತಹವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವುದು ಸರಿಯಲ್ಲ. ಇಂತಹ ಮತದಾರರನ್ನು ಚುನಾವಣಾ ಪ್ರಕ್ರಿಯೆಯಿಂದ ದೂರ ಇಡುವ ಷಡ್ಯಂತ್ರವಾಗಬಾರದು ಎನ್ನುವುದು ಪ್ರತಿಪಕ್ಷಗಳ ಮನವಿ. ಏತನ್ಮಧ್ಯೆ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾತುಕತೆಗೆ ಮುಂದಾಗಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹೇಳಿದಂತೆ ಎಲ್ಲವೂ ಸರಾಗವಾಗಿ ನಡೆಯಲಿದೆ. ಈ ಇಬ್ಬರು ನಾಯಕರನ್ನು ಎದುರು ಹಾಕಿ ಕೊಳ್ಳುವ ಧೈರ್ಯ ಎನ್‌ಡಿಎದ ಯಾವ ಪಕ್ಷದಲ್ಲಿಯೂ ಇಲ್ಲ. ಎಲ್‌ಜೆಪಿಯ ನಾಯಕ ಚಿರಾಗ್ ಪಾಸ್ವಾನ್ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಸಾರ್ವತ್ರಿಕ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿರುವುದರಿಂದ ಬಿಜೆಪಿ ನಾಯಕರು ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎನ್ನುವುದು ಈಗ ಬಿಹಾರದ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಇನ್ನು ‘ಇಂಡಿಯಾ’ ಮೈತ್ರಿಕೂಟ ಈಗ ಒಡೆದ ಮನೆಯಾಗಿದೆ. ಆಮ್ ಆದ್ಮಿ ಪಕ್ಷ ಈಗಾಗಲೇ ಈ ಒಕ್ಕೂಟದಿಂದ ಹೊರನಡೆದಿದೆ. ತೃಣ ಮೂಲ ಕಾಂಗ್ರೆಸ್ ಒಕ್ಕೂಟದ ಕಾರ್ಯದಲ್ಲಿ ಸಕ್ರಿಯವಾಗಿಲ್ಲ. ಮಮತಾ ಬ್ಯಾನರ್ಜಿ ಅವರ ನಡೆ-ನುಡಿಯನ್ನು ಅರಗಿಸಿಕೊಳ್ಳುವ ಶಕ್ತಿ ಒಕ್ಕೂಟದ ನಾಯಕತ್ವವಹಿಸಿರುವ ಕಾಂಗ್ರೆಸ್ಸಿಗೆ ಇಲ್ಲವಾಗಿದೆ. ಚುನಾವಣಾ ಮೈತ್ರಿಯು ಕೇವಲ ಕಳೆದ ಲೋಕಸಭೆಗೆ ಮಾತ್ರ ಸೀಮಿತಗೊಂಡಿತ್ತು ಎನ್ನುವ ಮೈತ್ರಿಕೂಟದ ಪಕ್ಷಗಳು ಈಗ ಬಿಹಾರದ ಚುನಾವಣೆಯಲ್ಲಿ ತಮ್ಮ ಹಿಂದಿನ ನಿರ್ಧಾರವನ್ನು ಬದಲಿಸಿಕೊಳ್ಳಲು ಒಲವು ತೋರಿವೆ. ಹಾಗಾಗಿ ಕಾಂಗ್ರೆಸ್-ಆರ್‌ಜೆಡಿಯ ಜೊತೆ ಕ್ಷೇತ್ರ ಮತ್ತು ಅಭ್ಯರ್ಥಿಗಳ ಆಯ್ಕೆಯ ಹೊಂದಾಣಿಕೆ ಮಾತುಕತೆ ಈಗಷ್ಟೇ ಶುರುವಾಗಬೇಕಿದೆ.
ಈ ನಡುವೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತದ ಬಗೆಗೆ ಶೇ. ೩೪.೮ ಜನರು ಮಾತ್ರ ಸಂತೃಪ್ತಿ ವ್ಯಕ್ತಪಡಿಸಿರುವುದಾಗಿ ಕಳೆದ ತಿಂಗಳು ಸಿ-ವೋಟರ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆರ್.ಜೆ.ಡಿ.ಯ ನಾಯಕ ತೇಜಸ್ವಿ ಯಾದವ್ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ಚಸ್ಸು ಇತ್ತೀಚೆಗೆ ಕುಸಿಯುತ್ತಿರುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ನಿತೀಶ್ ಅವರ ಜನಪ್ರಿಯತೆ ಈಗ ಶೇ. ೧೭.೪ಕ್ಕೆ ಕುಸಿದಿರುವುದು ಪ್ರಧಾನಿ ಮೋದಿ ಅವರಿಗೆ ಆತಂಕವನ್ನು ಉಂಟುಮಾಡಿರುವುದಾಗಿ ಹೇಳಲಾಗುತ್ತಿದೆ. ಈ ಆತಂಕಕ್ಕೆ ಈಗ ಬಿಹಾರದಲ್ಲಿ ಬಿಜೆಪಿ ವರ್ಚಸ್ವಿ ನಾಯಕನ ಕೊರತೆಯನ್ನು ಎದುರಿಸುತ್ತಿರುವುದು ಮುಖ್ಯ ಕಾರಣವಾಗಿದೆ ಎನ್ನಲಾಗಿದೆ.
ಈ ಸಮೀಕ್ಷೆಯ ಹಿನ್ನೆಲೆಯಲ್ಲಿ ಮತ್ತು ಬಿಹಾರದ ರಾಜಕಾರಣದಲ್ಲಿ ತೇಜಸ್ವಿ ಯಾದವ್ ಸಕ್ರಿಯವಾಗಿರುವ ಕಾರಣ, ‘ಇಂಡಿಯಾ’ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರೇ ಆಗುತ್ತಾರೆ ಎಂದು ಕಾಂಗ್ರೆಸ್ಸಿನ ಕನ್ಹಯ್ಯ ಕುಮಾರ್ ಈಗಾಗಲೇ ಘೋಷಿಸಿದ್ದಾರೆ. ಕಾಂಗ್ರೆಸ್ ತನ್ನ ವರಿಷ್ಠರ ಒಪ್ಪಿಗೆ ಇಲ್ಲದೆ ಇಂತಹ ಘೋಷಣೆಯನ್ನು ಒಪ್ಪುವುದಿಲ್ಲ. ಆದರೆ ವಾಸ್ತವ ಪರಿಸ್ಥಿತಿಯನ್ನು ಕಾಂಗ್ರೆಸ್ ಪಕ್ಷವು ಅರ್ಥಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ ಪಕ್ಷವು ಬಿಹಾರ, ಉತ್ತರ ಪ್ರದೇಶಗಳಲ್ಲಿ ತನ್ನ ನೆಲೆ ಕಳೆದುಕೊಂಡು ಹಲವು ದಶಕಗಳೇ ಕಳೆದಿವೆ.
ಈಗಾಗಲೇ ಜಾತಿ ಜನಗಣತಿ ನಡೆಸಿರುವ ಬಿಹಾರದಲ್ಲಿ ಜಾತಿ ಪ್ರಾಬಲ್ಯ ಮುಖ್ಯವಾಗಿದ್ದು, ಇದುವರೆಗೆ ಕಾಂಗ್ರೆಸ್ ಹೊಸದಾಗಿ ಪ್ರಬಲ ಜಾತಿಗಳ ಮತ್ತು ಹಿಂದುಳಿದ ಜಾತಿಯಾದರೂ ಯಾದವ ಸಮುದಾಯದಿಂದ ಯಾವುದೇ ಒಬ್ಬ ಪ್ರಭಾವಿ ನಾಯಕನನ್ನು ತನ್ನತ್ತ ಸೆಳೆದಿಲ್ಲ ಮತ್ತು ಈಗ ಇರುವ ನಾಯಕರನ್ನು ಬೆಳೆಸಿಲ್ಲ. ಈ ವಾಸ್ತವವನ್ನು ಕಾಂಗ್ರೆಸ್ ಇನ್ನಾದರೂ ಅರ್ಥಮಾಡಿಕೊಳ್ಳಬೇಕಿದೆ ಎಂದು ಮೈತ್ರಿಕೂಟದ ಹಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಇಂಡಿಯಾ ಮೈತ್ರಿಕೂಟ’ದ ಚಿತ್ರಣ ಇದಾದರೆ ಬಿಜೆಪಿಯಲ್ಲಿ ಪ್ರಬಲ ನಾಯಕತ್ವದ ಕೊರತೆ ಈಗ ಎದ್ದು ಕಾಣುತ್ತಿದೆ. ಹಾಗಾಗಿ ಬಿಹಾರ ಚುನಾವಣೆ ಕಣಕ್ಕೆ ಪ್ರಧಾನಿ ಮೋದಿ ಅವರೇ ಖುದ್ದಾಗಿ ಅಖಾಡಕ್ಕಿಳಿದಿದ್ದಾರೆ. ಈಗಷ್ಟೇ ಚುನಾವಣೆ ಚಟುವಟಿಕೆಗಳು ಎಲ್ಲ ಪಕ್ಷಗಳಲ್ಲಿ ಚುರುಕಾಗಿವೆ. ಪಕ್ಷಗಳ ಬಲಾಬಲವನ್ನು ತಿಳಿಯಲು ಇನ್ನಷ್ಟು ದಿನಗಳು ಬೇಕಾಗಿವೆ.
“ಬಿಹಾರದಲ್ಲಿ ಮತ ಪಟ್ಟಿ ಪರಿಷ್ಕರಣೆ ಮುಗಿದ ಮೇಲೆ ಮುಂದಿನ ವರ್ಷ ಚುನಾವಣೆ ನಡೆಯಲಿರುವ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಚುನಾವಣಾ ಆಯೋಗ ಕೈಗೆತ್ತಿಕೊಳ್ಳಲಿದೆ. ಚುನಾವಣೆಯು ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಯುವ ಕ್ರಿಯೆಯಲ್ಲಿ ಮತದಾರರ ಪಟ್ಟಿ ಮುಖ್ಯವಾದುದು ಎನ್ನುವುದರಲ್ಲಿ ಎರಡು ಮಾತಿಲ್ಲ”
– ಶಿವಾಜಿ ಗಣೇಶನ್