Mysore
30
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

ಹಿರಿಯರ ಅನುಭವದ ನೆರಳಲ್ಲಿ ಕಿರಿಯರು ಬೆಳೆಯಬೇಕು

ಸಿ. ಎಂ. ಸುಗಂಧರಾಜು

ಮನೆಯಲ್ಲಿರುವ ಹಿರಿಯರಿಗೆ ವಯಸ್ಸಾಗಿದೆ. ಅವರಿಂದ ಇನ್ಯಾವುದೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿ ಅವರನ್ನು ಕಡೆಗಣಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ‘ಹುಣಸೇಮರ ಮುಪ್ಪಾದರೂ ಹುಳಿ ಮುಪ್ಪಾಗುವುದಿಲ್ಲ’ ಎಂಬ ಗಾದೆ ಮಾತಿನಂತೆ, ವಯಸ್ಸಾಗಿ ಶಕ್ತಿ ಕುಂದಿದರೂ ಅವರಲ್ಲಿನ ಅನುಭವ ದೊಡ್ಡದು.

ಗ್ರಾಮೀಣ ಭಾಗಗಳಲ್ಲಿ ಇಂದಿಗೂ ೭೦ ವರ್ಷ ದಾಟಿದ ಹಿರಿಯರು ಕೃಷಿಯಲ್ಲಿ ಸಕ್ರಿಯವಾಗಿರುವು ದನ್ನು ಕಾಣಬಹುದು. ತಮ್ಮ ಬದುಕನ್ನೇ ಸವಾಲಾಗಿ ಸ್ವೀಕರಿಸಿರುವ ಹಿರಿಯರು ಬದುಕಿನುದ್ದಕ್ಕೂ ಹೋರಾಟಗಳನ್ನು ಮಾಡಿಕೊಂಡು ಜೀವನ ಸಾಗಿಸಿದ್ದಾರೆ. ವಯಸ್ಕರಾದಗಿನಿಂದಲೂ ಕೂತು ತಿನ್ನದೆ ದುಡಿದು ತಿಂದ ಅವರು ತಮ್ಮ ಇಳಿವಯಸ್ಸಿ ನಲ್ಲಿಯೂ ದುಡಿದೇ ತಿನ್ನುತ್ತಿದ್ದಾರೆ. ಅವರ ಬದುಕು ಈಗ ಎಲ್ಲರಿಗೂ ಸ್ಛೂರ್ತಿಯಾಗುವಂತಹದ್ದು.

ನಮ್ಮ ಹಿರಿಯರು ಒಳ್ಳೆಯ ಮಾತುಗಾರರು, ಹಾಡುಗಾರರು, ಹೋರಾಟಗಾರರು. ಮುಂದಿನ ಪೀಳಿಗೆ ಸರಿದಾರಿಯಲ್ಲಿ ನಡೆಯಲು ನಮ್ಮೆಲ್ಲರಿಗೂ ಸ್ಛೂರ್ತಿಯಾದವರು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಯುವ ಸಮುದಾಯವನ್ನು ದಿಕ್ಕುತಪ್ಪಿಸಿದ್ದು, ಬಹುತೇಕ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಹಿರಿಯರೊಂದಿಗೆ ಸಮಯ ಕಳೆಯಬೇಕು, ಅವರ ಅನುಭವದ ಮಾತನ್ನು ಕೇಳಬೇಕು ಎಂಬುದನ್ನೇ ಮರೆತಿದ್ದಾರೆ.

ಹಿರಿಯರು ಇಂದಿಗೂ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ನೇಗಿಲು ಕಟ್ಟಿ ಉಳುಮೆ ಮಾಡುತ್ತಾರೆ. ಕೆಲವರು ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪಟ್ಟಣ ಸೇರಿರುವ ಹಿರಿಯರು, ಸೆಕ್ಯೂರಿಟಿಯಾಗಿಯೋ ಅಥವಾ ಸಣ್ಣಪುಟ್ಟ ವ್ಯಾಪಾರದ ಮಳಿಗೆಗಳಲ್ಲಿ ಕೆಲಸ ಮಾಡುತ್ತಾ ದುಡಿದು ತಿನ್ನುತ್ತಿದ್ದಾರೆ. ಆದರೆ ಯುವ ಪೀಳಿಗೆ ವಯಸ್ಸು ೪೦ ದಾಟುತ್ತಿದ್ದಂತೆ ಕೆಲಸ ಮಾಡಲಾಗದ ಸ್ಥಿತಿ ತಲುಪಿಬಿಡುತ್ತಾರೆ. ಹಿರಿಯರ ಮಾರ್ಗದರ್ಶನವಿಲ್ಲದೆ ದಿಕ್ಕು ತಪ್ಪುತ್ತಿದ್ದಾರೆ.

ಅಜ್ಜ-ಅಜ್ಜಿಯರ ಹಾರೈಕೆಯ ಮಾತುಗಳನ್ನು ಆಲಿಸಬೇಕಾದ ಯುವಜನತೆ ಇಂದು ಯೂ ಟ್ಯೂಬ್ ಮತ್ತು ಫೇಸ್ಬುಕ್‌ಗಳಲ್ಲಿ ಮೋಟಿವೇಷನಲ್ ಭಾಷಣಗಳನ್ನು ಕೇಳುತ್ತಾ ಕಾಲ ಕಳೆಯುವಂತಾಗಿದೆ. ಪರಿಣಾಮ ಸಂಬಂಧಗಳ ಮೌಲ್ಯವೇ ಅರಿವಿಲ್ಲದಂತಾಗಿ, ಹಿರಿಯರನ್ನು ಆಶ್ರಮಗಳಿಗೆ ಸೇರಿಸುತ್ತಿದ್ದಾರೆ.

ಮನುಷ್ಯ ಅಭಿವೃದ್ಧಿ ಹೊಂದಿದಷ್ಟು ಸಂಬಂಧಗಳಿಂದ ದೂರವಾಗುತ್ತಾನೆ ಎಂಬುದಕ್ಕೆ ಪ್ರಸ್ತುತ ಪೀಳಿಗೆಯೇ ಸಾಕ್ಷಿ. ಶಿಕ್ಷಣ, ಉದ್ಯೋಗ ಇನ್ನಿತರ ಕಾರಣಗಳಿಂದಾಗಿ ನಗರ ಸೇರಿರುವ ಯುವಸಮು ದಾಯ ಹಿರಿಯರ ಅನುಭವದ ಮಾತನ್ನು ಕೇಳದೆ, ಒತ್ತಡದ ಬದುಕಿನಲ್ಲಿಯೇ ದಿನದೂಡುತ್ತಿದ್ದಾರೆ. ಮೊಮ್ಮಕ್ಕಳ ಬೆಳವಣಿಗೆಗೆ ಅಜ್ಜ-ಅಜ್ಜಿಯ ಪ್ರೀತಿ ಬೇಕು ಎಂಬ ಅರಿವೂ ಇಲ್ಲದೆ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ವಿಫಲರಾಗುತ್ತಿದ್ದಾರೆ.

ಅಪರೂಪಕ್ಕೆ ಹಳ್ಳಿಗಳಿಗೆ ಬರುತ್ತಿದ್ದವರೂ ಈಗ ವಿಡಿಯೋ ಕರೆಗಳ ಮೂಲಕ ದೂರದಿಂದಲೇ ಹಿರಿ ಯರ ಆರೋಗ್ಯ ವಿಚಾರಿಸಿ ಬಿಡುತ್ತಾರೆ. ಹೀಗಾಗಿ ಮೊಮ್ಮಕ್ಕಳು, ಹಿರಿಯರ ನಡುವಿನ ಸಂಬಂಧದ ಕೊಂಡಿ ಸಡಿಲಗೊಳ್ಳುತ್ತಿದೆ. ಮನೆಯಲ್ಲೊಬ್ಬರು ಹಿರಿಯರಿರಬೇಕು ಎಂಬ ಮಾತು ದೂರಾಗಿ ಅಜ್ಜ ಅಜ್ಜಿಯರು ಇಂದು ಮೂಲೆಗುಂಪಾಗಿದ್ದಾರೆ. ಅವರ ಅನುಭವದ ಮಾತು ಕೇಳುವವರಿಲ್ಲ ದಂತಾಗಿದೆ. ವಿಜ್ಞಾನ, ತಂತ್ರಜ್ಞಾನ ಮುಂದು ವರಿದಷ್ಟು ಹಿರಿಯರ ಅನುಭವ ಮತ್ತು ಮಾರ್ಗದರ್ಶನದ ಅವಶ್ಯಕತೆ ಯಾರಿಗೂ ಇಲ್ಲದಂತಾಗಿದೆ. ಮಕ್ಕಳು ಪ್ರಜ್ಞಾವಂತರಾಗಿ ಬೆಳೆಯಬೇಕು ಎಂದರೆ ಅವರಿಗೆ ಹಿರಿಯರ ಮಾರ್ಗದರ್ಶನ ಅತ್ಯವಶ್ಯ. ಮಕ್ಕಳು ಹಿರಿಯರೊಂದಿಗೆ ಸಮಯ ಕಳೆಯಬೇಕು. ಆಗಲೇ ಅವರ ಅನುಭವದ ಪಾಠಗಳನ್ನು ಕೇಳುತ್ತಾ ಸದ್ಗುಣಗಳನ್ನು ಬೆಳೆಸಿ ಕೊಂಡು ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ.

 

Tags: