Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ದ್ವೇಷ ಭಾಷೆ ಎಂಬ ನುಣುಚು ಹಾದಿ

ದ್ವೇಷದ ಬಿರುಸಿನಲ್ಲಿ ಮರೆಯಾದ ಮೂಲ ಉದ್ದೇಶ

ಜಟಿಲವಾದ ಸಾಮಾಜಿಕ-ರಾಜಕೀಯ- ಆರ್ಥಿಕ – ಸಾಂಸ್ಕ ತಿಕ ಸಮಸ್ಯೆಗಳಿಗೆ ನೇರ ಮುಖಾಮುಖಿ ಆಗುವ ಬದಲು ಅದರಿಂದ ನುಣುಚಿಕೊಳ್ಳುವ ಸುಲಭ ಹಾದಿಯೇ ದ್ವೇಷ ಭಾಷೆ. ಡಿಜಿಟಲ್ ಜಗತ್ತಿನ ಕಪ್ಪು-ಬಿಳುಪು ಚಿತ್ರಣಕ್ಕೆ ಈ ದ್ವೇಷ ಭಾಷೆ ಬಹಳ ಸುಲಭವಾಗಿ ಹೊಂದಿಕೊಳ್ಳುತ್ತದೆ. ಹಾಗಾಗಿ ಡಿಜಿಟಲ್ ಜಗತ್ತು ಬೆಳೆದ ಹಾಗೆಲ್ಲ, ದ್ವೇಷ ಭಾಷೆ ಕೂಡ ಬೆಳೆದು ನಿಂತಿದೆ.

ಒಂದು ವಿಚಾರವನ್ನು ಎತ್ತಿದ ತಕ್ಷಣ, ಅದನ್ನು ಸಾರಾಸಗಟು ಸರಳೀಕರಿಸಿ, ವ್ಯಂಗ್ಯದ ಮೂಲಕ ದ್ವೇಷದ ಮಾತಿನ ಮೂಲಕ ತಳ್ಳಿಹಾಕಿಬಿಡುವುದು ಮತ್ತು ಆ ಮೂಲಕ, ನಿಜಕ್ಕೂ ಚರ್ಚೆ ಆಗಬೇಕಾಗಿದ್ದ ವಿಚಾರದ ಮಹತ್ತಿಕೆಯನ್ನೇ ತಳ್ಳಿಹಾಕಿಬಿಡುವುದು ಇಲ್ಲಿ ಸಾಮಾನ್ಯವಾಗಿ ಬಳಕೆ ಆಗುವ ತಂತ್ರ. ಹೀಗಾದಾಗ ಪರಸ್ಪರ ದ್ವೇಷದ ಬಿರುಸಿನಲ್ಲಿ ಮೂಲ ಉದ್ದೇಶ ಮರೆಯಾಗಿರುತ್ತದೆ. ಈ ದ್ವೇಷದ ಆಟಕ್ಕೆ ಮೂಲಭೂತವಾಗಿ ಅಗತ್ಯವಿರುವುದು ಎರಡು ಗುಂಪುಗಳು (ಎರಡೇ ಗುಂಪುಗಳು!). ಸದ್ಯಕ್ಕೆ ಭಾರತದಲ್ಲಿ ಈ ಗುಂಪು ಜೋಡಿಗಳು ಯಥೇಚ್ಛವಾಗಿ ರೂಪುಗೊಂಡಿವೆ. ಎಡ-ಬಲ; ಇರುವವರು -ಇಲ್ಲದವರು; ಆಳುವವರು-ವಿರೋಧಿಗಳು… ಹೀಗೆ. ವಾಸ್ತವಿಕ ಸಮಸ್ಯೆಗಳಿಂದ ನುಣುಚಿಕೊಳ್ಳುವ ಆಟ ಆಡಬೇಕಾದಲ್ಲೆಲ್ಲ ನುರಿತ ಆಟಗಾರರು ತಮಗೆ ಅಗತ್ಯವಿರುವ ಈ “ಕಪ್ಪು-ಬಿಳಿ”ಗುಂಪುಗಳನ್ನು ತಮ್ಮ ಆ ಕ್ಷಣದ ಅಗತ್ಯಕ್ಕೆ ತಕ್ಕಂತೆ ತಾವೇ ಮುಂದೆ ನಿಂತು ಸೃಷ್ಟಿಸಿಕೊಂಡುಬಿಡುತ್ತಾರೆ.

ಇದನ್ನು ಓದಿ: ರಾಷ್ಟ್ರೀಯ ಹೆದ್ದಾರಿ ಬದಿಯ ಅಂಗಡಿಗಳ ತೆರವಿಗೆ ಕ್ರಮ

ಒಮ್ಮೆ ಈ ಗುಂಪುಗಳು ಸೃಷ್ಟಿ ಆದ ಬಳಿಕ, ಮತ್ತೆ ನಡೆಯುವುದನ್ನು ಕ್ರೀಡಾ ಭಾಷೆಯಲ್ಲಿ ಹೇಳಬೇಕೆಂದರೆ “ಡ್ರಿಬ್ಲಿಂಗ್” ಎನ್ನಬಹುದು. ಡ್ರಿಬ್ಲಿಂಗ್ ಎಂದರೆ ಫುಟ್‌ಬಾಲ್, ಬಾಸ್ಕೆಟ್‌ಬಾಲ್ ನಂತಹ ಚೆಂಡಾಟಗಳಲ್ಲಿ ನಿಯಮ ಬದ್ಧವಾಗಿಯೇ ಸಮಯ ಕೊಲ್ಲುವ ಮೂಲಕ ಎದುರಾಳಿಯನ್ನು ಸತಾಯಿಸಿ, ಅವರು ತಪ್ಪು ಮಾಡುವಂತೆ ಪ್ರಚೋದಿಸುವ ತಂತ್ರ. ದ್ವೇಷಭಾಷೆಯಲ್ಲೂ ಬಳಕೆ ಆಗುವುದು ಇದೇ ತಂತ್ರ.

ರಾಜಕೀಯಸ್ಥರಿಗೆ ಚುನಾವಣೆಯಂತಹ ರಣರಂಗಗಳ ರನ್‌ಅಪ್ ಈಗೀಗ ಸಿದ್ಧಗೊಳ್ಳುವುದೇ ಸುಮಾರಿಗೆ ಚುನಾವಣಾ ದಿನಾಂಕಗಳು ಪ್ರಕಟ ಗೊಳ್ಳುವ ಅಂದಾಜು ಒಂದೂವರೆ ವರ್ಷ ಮೊದಲು. ಈಗಂತೂ ರಾಜಕೀಯ ಪಕ್ಷಗಳಲ್ಲಿ ಸಂಬಳಕ್ಕೆ ದುಡಿಯುವ ಸೋಷಿಯಲ್ ಮೀಡಿಯಾ ತಂಡಗಳಲ್ಲಿರುವ “ಕಂಟೆಂಟ್” ಪರಿಣತರ ಉದ್ಯೋಗವೇ ದ್ವೇಷ ಬಿತ್ತುವುದು. ಯಾವುದೇ ರಾಜ್ಯದಲ್ಲಿ ಶೀಘ್ರವೇ ಚುನಾವಣೆ ಇದೆ ಎಂಬ ಮುಂಗೋಳಿ ಕೂಗುವುದೇ ಈ ದ್ವೇಷ ಭಾಷೆಯಲ್ಲಿ.

ಸದ್ಯಕ್ಕೆ ಚುನಾವಣೆ ರನ್ ಅಪ್ ಅಂತಿಮ ಹಂತದಲ್ಲಿರುವ ಬಿಹಾರವನ್ನು ಗಮನಿಸಿ. ಹಾಗೆಯೇ, ೨೦೨೬ರಲ್ಲಿ ಚುನಾವಣೆ ನಡೆಯಲಿರುವ ಪ.ಬಂಗಾಳ, ತಮಿಳುನಾಡು, ಕೇರಳ ರಾಜ್ಯಗಳ ಮೇಲೆ ಕಣ್ಣಿರಿಸಿಕೊಳ್ಳಿ. ದ್ವೇಷದ ಆಟ ಸುಲಭವಾಗಿ ಅರ್ಥವಾಗುತ್ತದೆ. ತಮ್ಮ ಸಾಧನೆಗಳನ್ನು ಜನರ ಮುಂದಿಡುವ ಬಂಡವಾಳ ಇಲ್ಲದಾಗಲೆಲ್ಲ ಎದುರಿನವರ ಮೇಲೆ ದ್ವೇಷ ಕಾರುವ ತಂತ್ರಗಾರಿಕೆ ಪ್ರದರ್ಶಿಸಿಬಿಟ್ಟರೆ ಮುಗಿಯಿತು. ಎದುರಿನವರೂ ತಮ್ಮ ಉದ್ದೇಶ ಮರೆತು, ದ್ವೇಷಕ್ಕೆ ಪ್ರತಿದ್ವೇಷ ಬಿತ್ತುವ ಕೆಲಸದಲ್ಲಿ ನಿರತರಾಗಿಬಿಡುತ್ತಾರೆ. ದ್ವೇಷ ಬಿತ್ತುವುದಕ್ಕೆ ಈವತ್ತಿನ ಸಂಗತಿಯೇ ಬೇಕೆಂದಿಲ್ಲ. ನೂರಾರು ವರ್ಷಗಳ ಹಿಂದಿನ ಚರಿತ್ರೆಯ ಅಥವಾ ಪುರಾಣದ ಎಳೆಯೂ ಸಾಕಾಗುತ್ತದೆ.

ಒಂದು ಸಮಾಜವಾಗಿ ನಾವು ಚರ್ಚೆ ಮಾಡಲೇಬೇಕಾಗಿದ್ದ ಭ್ರಷ್ಟಾಚಾರ, ಪಕ್ಷಪಾತ, ನಿರುದ್ಯೋಗ, ಬಡವರು-ಸಿರಿವಂತರ ನಡುವೆ ಅಂತರ ಹೆಚ್ಚಿಸುತ್ತಿರುವ ತಪ್ಪು ಹಾದಿಯ ಉದಾರೀಕರಣ, ಬೆಲೆ ಏರಿಕೆ, ಲಿಂಗ-ಜಾತಿ ಅಸಮಾನತೆ, ಪರಿಸರ… ಇವು ಯಾವುವೂ ಕೂಡ ತಪ್ಪಿಯೂ ದ್ವೇಷ ಭಾಷೆಯ ಭಾಗ ಆಗುವುದಿಲ್ಲ. ಏಕೆಂದರೆ, ಅವುಗಳಿಂದ ನುಣುಚಿಕೊಳ್ಳುವ ಸುಲಭ ಹಾದಿಯೇ ದ್ವೇಷ ಭಾಷೆ.

ಇದನ್ನು ಓದಿ: ಭ್ರೂಣ ಹತ್ಯೆ ಕಳಂಕ; ಲಿಂಗಾನುಪಾತ ಆಶಾದಾಯಕ

ಗಮನಿಸಲೇಬೇಕಾದ ಇನ್ನೊಂದು ಸಂಗತಿ ಇದೆ. ಅದು – ಈ ದ್ವೇಷ ಭಾಷೆಯವರ ವೃತ್ತಿಪರತೆ. ದ್ವೇಷ ಭಾಷೆಯ ಮೂಲಕ ಸಾಮಾಜಿಕವಾಗಿ ವಿಷ ಹಂಚಿಕೆ ಮಾಡುವ ನಾಯಕತ್ವಗಳು (ಅದರಲ್ಲೂ ವಿಶೇಷವಾಗಿ ರಾಜಕೀಯಸ್ಥರು) ಈ ವಿಷದ ಭಾಗವಾಗಿರುವುದಿಲ್ಲ. ಅವರಲ್ಲಿ ಎರಡು ಗುಂಪುಗಳೂ ಇರುವುದಿಲ್ಲ. ಸಾಮಾಜಿಕವಾಗಿ ಅವರೆಲ್ಲರೂ ಬೆರೆತು, ಗಳಿಸಿದ್ದನ್ನು ಹಂಚಿ ತಿಂದು ಬಾಳಬಲ್ಲರು, ಬೆಳಗಬಲ್ಲರು. ಅವರು ಸಂಬಳಕ್ಕೆ ಸಾಕಿಕೊಂಡಿರುವ ದ್ವೇಷ ಹಂಚಿಕೆ ಕಂಟೆಂಟ್ ವೃತ್ತಿಪರರು ಕೂಡ ಸುಲಭವಾಗಿ ತಮ್ಮ ಗುಂಪು ಬದಲಿಸಿಕೊಂಡು, ಕಾಸಿಗೆ ತಕ್ಕ ವಿಷ ಕಜ್ಜಾಯ ಹಂಚಿ ಬದುಕಬಲ್ಲರು. ಹಾಗಾಗಿ, ಈ ದ್ವೇಷ ವಿಷದ ನೈಜ ಫಲಾನುಭವಿಗಳು ಎಂದರೆ, ತಮ್ಮ ನಡುವೆ ಬಿತ್ತಲಾಗಿರುವ ವಿಷದ ಕಾರಣಕ್ಕೆ ಒಡಕು ಮೂಡಿಸಿಕೊಂಡಿರುವ ಜನಸಾಮಾನ್ಯರು.

ಮನೆಗಳಲ್ಲಿ-ಮನಗಳಲ್ಲಿ ಗೋಡೆ ಕಟ್ಟಿಕೊಳ್ಳುವ ಮಟ್ಟಕ್ಕೂ ಈ ವಿಷ ಅವರ ನಡುವೆ ಪರಿಣಾಮಕಾರಿ ಆಗಿರುತ್ತದೆ. ಈ ಸಂಚಿಗೆ ಸಿಲುಕಿ, ಅಪರಾಧ ಮಾಡಿ ಕೋರ್ಟು-ಜೈಲು-ಠಾಣೆ ಸುತ್ತುತ್ತಿರುವವರ ಸಂಖ್ಯೆಯೂ ಕಡಿಮೆ ಇಲ್ಲ. ನಾವು ತಿಳಿದಿರಬೇಕಾದುದು: ದ್ವೇಷದ ಆಟದಲ್ಲಿ ಎರಡು ಗುಂಪುಗಳಿರುವುದು ನಿಜ. ಆದರೆ, ಆ ಎರಡು ಗುಂಪುಗಳು ನಾವು ಸಾಂಪ್ರದಾಯಿಕವಾಗಿ ಊಹಿಸಿಕೊಂಡು ಬಂದಿರುವ ಗುಂಪುಗಳಲ್ಲ. ಬದಲಾಗಿ “ಒಟ್ಟು ಸಮಾಜ V|S ಸಾಮಾಜಿಕ ನಾಯಕತ್ವದ ಚುಕ್ಕಾಣಿ ಹಿಡಿದಿರುವ ಸಮಾಜ ವಿರೋಧಿ ಶಕ್ತಿಗಳು”. ಈ ಸಮಾಜ ವಿರೋಧಿ ಸೂಡೋ ನಾಯಕತ್ವಕ್ಕೆ ಜಟಿಲವಾದ ಸಾಮಾಜಿಕ ಸಮಸ್ಯೆಗಳಿಗೆ ನೇರ ಮುಖಾಮುಖಿ ಆಗುವುದು ಬೇಕಿಲ್ಲ. ಅಲ್ಲಿ ಅವರ ಬೇಳೆ ಬೇಯುವುದಿಲ್ಲ.ಈ ದುಷ್ಟ ರಾಜಕೀಯ ಅರ್ಥ ಆದ ದಿನ, ದ್ವೇಷ ಭಾಷೆಗೆ ಸಮಾಜದಲ್ಲಿ ಜಾಗ ಇರುವುದಿಲ್ಲ

” ಒಂದು ಸಮಾಜವಾಗಿ ನಾವು ಚರ್ಚೆ ಮಾಡಲೇಬೇಕಾಗಿದ್ದ ಭ್ರಷ್ಟಾಚಾರ, ಪಕ್ಷಪಾತ,ನಿರುದ್ಯೋಗ, ಬಡವರು-ಸಿರಿವಂತರ ನಡುವೆ ಅಂತರ ಹೆಚ್ಚಿಸುತ್ತಿರುವ ತಪ್ಪು ಹಾದಿಯ ಉದಾರೀಕರಣ, ಬೆಲೆ ಏರಿಕೆ, ಲಿಂಗ-ಜಾತಿ ಅಸಮಾನತೆ, ಪರಿಸರ… ಇವು ಯಾವುವೂ ಕೂಡ ತಪ್ಪಿಯೂ ದ್ವೇಷ ಭಾಷೆಯ ಭಾಗ ಆಗುವುದಿಲ್ಲ.”

ರಾಜಾರಾಂ ತಲ್ಲೂರು

Tags:
error: Content is protected !!