ನಾ.ದಿವಾಕರ
ಮತಾಂಧತೆಗೆ ಬಲಿಯಾದ ಗಾಂಧಿ ವರ್ತಮಾನದಲ್ಲಿ ಸೌಹಾರ್ದತೆಯ ಪ್ರತಿಮೆಯಾಗಿ ಕಾಣಬೇಕಿದೆ
೨೧ನೇ ಶತಮಾನದ ಡಿಜಿಟಲ್ ಜಗತ್ತು ಜಾಗತಿಕ ಬೌದ್ಧಿಕ ಸಂಕಥನಗಳಲ್ಲಿ ಸತ್ಯೋತ್ತರ ಯುಗ ಎಂದೇ ಗುರುತಿಸಲ್ಪಟ್ಟಿದೆ. ಅಂದರೆ ಸತ್ಯದ ಯುಗವನ್ನು ದಾಟಿದ್ದೇವೆ ಎಂದೇನೂ ಅರ್ಥೈಸಬೇಕಿಲ್ಲ. ೨೦ನೇ ಶತಮಾನವನ್ನು ದಾಟುವವರೆಗೂ ಜಗತ್ತಿನ, ವಿಶೇಷವಾಗಿ ಭಾರತದ ಸಾಮಾಜಿಕ ಚರ್ಚೆಗಳಲ್ಲಿ, ಬೌದ್ಧಿಕ ಸಂವಾದ ಮತ್ತು ಸಂಕಥನಗಳಲ್ಲಿ ಸ್ವಲ್ಪಮಟ್ಟಿಗಾದರೂ ಕಾಣಬಹುದಾಗಿದ್ದ ಸತ್ಯದ ಸುಳಿಗಳು ಕಳೆದ ಎರಡು ದಶಕಗಳಲ್ಲಿ ಮರೆಯಾಗಿ ಹೋಗಿವೆ. ಈಗ ಭಾರತ ಸುಳ್ಳುಗಳ ನಡುವೆ ಬದುಕುತ್ತಿದೆ. ಪೌರಾಣಿಕ ಮಿಥ್ಯೆಗಳನ್ನು ಸತ್ಯ ಎನಿಸಲಾಗುತ್ತಿದೆ. ಕಣ್ಣೆದುರಿನ ವಾಸ್ತವಗಳನ್ನು ಸುಳ್ಳು ಎನ್ನಲಾಗುತ್ತಿದೆ. ಡಿಜಿಟಲ್ ಯುಗದ ಆಧುನಿಕ ಆವಿಷ್ಕಾರಗಳ ಪ್ರಮುಖ ಫಲಾನುಭವಿಯಾಗಿ ಭಾರತದ ‘ವಾಟ್ಸಾಪ್ ವಿಶ್ವವಿದ್ಯಾಲಯ’ ಈ ಮಿಥ್ಯಾಲೋಕದ ಯಜಮಾನಿಕೆ ವಹಿಸಿಕೊಂಡಿರುವುದು, ಭಾರತದ ಯುವ ಸಮೂಹವನ್ನು ಭ್ರಮಾಧೀನಗೊಳಿಸುತ್ತಿದೆ.
ಕಳೆದ ೭೬ ವರ್ಷಗಳಲ್ಲಿ ಭಾರತ ಗಾಂಧಿ ಹತ್ಯೆಗೀಡಾದ ಈ ದಿನವನ್ನು ನೆನಪಿಸಿಕೊಳ್ಳುತ್ತಲೇ ಬಂದಿದೆ. ಆಚರಣಾತ್ಮಕವಾಗಿ ಶ್ರದ್ಧಾಭಕ್ತಿಗಳಿಂದ ಮಹಾತ್ಮನಿಗೆ ಗೌರವಯುತ ಶ್ರದ್ಧಾಂಜಲಿ ಅರ್ಪಿಸುತ್ತಾ ಬಂದಿರುವ ಭಾರತದ ಅಧಿಕಾರ ರಾಜಕಾರಣ ಮತ್ತು ಅದನ್ನು ನಿರ್ದೇಶಿಸುವ ಸಾಮಾಜಿಕ-ಸಾಂಸ್ಕೃತಿಕ ಪರಿಸರಗಳು ಗಾಂಧಿ ಪ್ರಣೀತ ಮೌಲ್ಯಗಳನ್ನು, ತಾತ್ವಿಕ ನೆಲೆಗಳನ್ನು ನಿರಾಕರಿಸುತ್ತಾ, ಅಲ್ಲಗಳೆಯುತ್ತಾ, ಕಡೆಗಣಿಸುತ್ತಾ ಸತ್ಯೋತ್ತರ ಯುಗವನ್ನು ತಲುಪಿದೆ. ಗಾಂಧಿ ಯಾರಿಂದ ಹತ್ಯೆಗೀಡಾದರು ಎಂಬ ಪ್ರಶ್ನೆಗೆ ವ್ಯಕ್ತಿಗತ ನೆಲೆಯಲ್ಲಿ ಉತ್ತರ ಶೋಧಿಸಿದಾಗ ಹಂತಕ ಗೋಡ್ಸೆ ಕಾಣುತ್ತಾನೆ. ಆದರೆ ಈ ಸತ್ಯದ ಪ್ರವಾದಿಯ ಹತ್ಯೆಯಾಗಿದ್ದು ಒಂದು ಸುಪ್ತ ವ್ಯವಸ್ಥೆಯ ಗುಪ್ತಗಾಮಿನಿಯಿಂದ ಎಂಬ ವಾಸ್ತವವನ್ನು ಒಪ್ಪಲೇಬೇಕಿದೆ. ಏಕೆಂದರೆ ಆ ಗುಪ್ತಗಾಮಿನಿ ಭಾರತೀಯ ಸಮಾಜದಲ್ಲಿ, ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ಅಂತರ್ಗಾಮಿಯ ಹಾಗೆ ಚಲನಶೀಲತೆಯನ್ನು ಉಳಿಸಿಕೊಂಡೇ ಬಂದಿದೆ.
ಹಾಗಾಗಿಯೇ ವರ್ತಮಾನದ ಭಾರತದಲ್ಲಿ ಹಿಂಸೆ, ದ್ವೇಷ, ಕ್ರೌರ್ಯ ಹಾಗೂ ಪರಮತ ಅಸಹಿಷ್ಣುತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಅವಗುಣಗಳನ್ನು ವೈಭವೀಕರಿಸುವ ಒಂದು ರಾಜಕೀಯ ಶಕ್ತಿ ಸಮಾಜದ ತಳಪಾಯವನ್ನೂ ತಲುಪುತ್ತಿರುವಂತೆಯೇ, ಸಾಂಸ್ಕ ತಿಕವಾಗಿ ಗಾಂಧಿ ಹತ್ಯೆಯನ್ನೂ ಸಮರ್ಥಿಸುವ ಮೂಲಕ ಹಿಂಸೆಯನ್ನು ಸಾಮಾನ್ಯೀಕರಿಸುವ ಪ್ರವೃತ್ತಿ ಸಮಾಜದ ಎಲ್ಲ ಸ್ತರಗಳಲ್ಲೂ ಆವರಿಸುತ್ತಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸೌಹಾರ್ದತೆ ಮತ್ತು ಅಹಿಂಸೆಯ ಎರಡು ಧೃವಗಳಾಗಿ ಕಾಣುವ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಸಾಮಾಜಿಕ ಪಿರಮಿಡ್ಡಿನ ತಳಸ್ತರದ ಜನಸಮುದಾಯಗಳನ್ನು ತಲುಪುವ ಮುನ್ನವೇ ಡಿಜಿಟಲ್ ಯುಗದ ಸಂವಹನ ಮಾಧ್ಯಮಗಳು ‘ವಾಟ್ಸಾಪ್ ವಿಶ್ವವಿದ್ಯಾಲಯದ’ ಮೂಲಕ ಅಲ್ಲಿಗೆ ತಲುಪಿರುತ್ತವೆ. ಇಲ್ಲಿ ಉತ್ಪತ್ತಿಯಾಗುವ ಸುಳ್ಳುಗಳು ಭಾರತದ ಸತ್ಯೋತ್ತರ ಯುಗದ ಅಧಿಕಾರ ರಾಜಕಾರಣಕ್ಕೆ ಮತ್ತು ಸಾಂಸ್ಕೃತಿಕ ರಾಜಕೀಯಕ್ಕೆ ಬುನಾದಿಯಾಗಿ ಪರಿಣಮಿಸಿವೆ. ನವ ಉದಾರವಾದಿ ಬಂಡವಾಳಶಾಹಿಯ ಕಾರ್ಪೊರೇಟ್ ಮಾರುಕಟ್ಟೆ ಆರ್ಥಿಕತೆಯಲ್ಲಿ, ಗಾಂಧಿ ಪ್ರಣೀತ ಗ್ರಾಮೀಣ ಆರ್ಥಿಕತೆಯು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ, ಈ ಅರ್ಥವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಹಿಂಸೆ ಮತ್ತು ಕ್ರೌರ್ಯ ದೇಶದ ನಿರ್ಗತಿಕ ಜನತೆಯನ್ನು ಮತ್ತಷ್ಟು ಸಂಕಷ್ಟಗಳಿಗೆ ದೂಡುತ್ತಿದೆ. ಆತ್ಮಹತ್ಯೆಗೆ ಶರಣಾಗುತ್ತಿರುವ ಲಕ್ಷಾಂತರ ರೈತರು, ಮೈಕ್ರೋ ಫೈನಾನ್ಸ್ ಪೀಡಿತರು ಈ ಹಿಂಸೆಯ ಒಂದು ಆಯಾಮವನ್ನು ಬಿಂಬಿಸುತ್ತಾರೆ.
ಅಂತರ್ಗತವಾಗಬೇಕಾದ ಗಾಂಧಿ: ಇತ್ತೀಚಿನ ಕೆಲವು ಸಾಮಾಜಿಕ ಬೆಳವಣಿಗೆಗಳನ್ನು ಗಮನಿಸಿದರೆ ಭಾರತೀಯ ಸಮಾಜದಲ್ಲಿ ಹಿಂಸೆ ಮತ್ತು ಕ್ರೌರ್ಯ ಒಂದು ವ್ಯಾಧಿಯಂತೆ ಹರಡುತ್ತಿರುವುದು ಸ್ಪಷ್ಟವಾಗುತ್ತದೆ. ಇದು ಸಾಂಸ್ಕ ತಿಕವಾಗಿ ವ್ಯಸನವಾಗಿ ಪರಿಣಮಿಸುತ್ತಿದೆ. ಇದಕ್ಕೆ ಬಲಿಯಾಗುತ್ತಿರುವುದು ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು, ತಳಸಮುದಾಯಗಳು ಮತ್ತು ಅಂಚಿನಲ್ಲಿರುವ ಸಾಮಾನ್ಯ ಜನತೆ. ಈ ಹಿಂಸಾತ್ಮಕ ಮನಸ್ಥಿತಿಯ ಕಾರಣಗಳನ್ನು ಸಮಾಜಶಾಸ್ತ್ರೀಯ ನೆಲೆಯಲ್ಲಿ ನೋಡಿದಾಗ ನಮ್ಮ ಸಮಾಜವನ್ನು ಕಾಡುತ್ತಿರುವ ಪಿತೃಪ್ರಧಾನತೆ ಮತ್ತು ಸಾಂಸ್ಕ ತಿಕ ಜಾತಿ ಶ್ರೇಷ್ಠತೆಯಲ್ಲಿ ಗುರುತಿಸಬಹುದು. ಈ ಮನಸ್ಥಿತಿಯನ್ನು ಹೋಗಲಾಡಿಸುವ ಪ್ರಯತ್ನಗಳು ನಮ್ಮ ನಡುವೆ ನಡೆಯುತ್ತಿದೆಯೇ? ಈ ಪ್ರಶ್ನೆಗೆ ನಾವು ನಿರುತ್ತರರಾಗುತ್ತೇವೆ.
ಈ ವಿಕೃತ ಬೆಳವಣಿಗೆಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಸತ್ಯದ ಹಾದಿಯನ್ನು ಭಾರತೀಯ ಸಮಾಜ ಎಂದೋ ತೊರೆದಿದೆ. ಹಾಗಾಗಿಯೇ ಗಾಂಧಿ ಸೃಜಿಸಿದ ಸತ್ಯದ ಹಾದಿಗಳೆಲ್ಲವೂ ಮುಚ್ಚಿಹೋಗುತ್ತಿವೆ. ಸಾಂಸ್ಕೃತಿಕವಾಗಿ ಪುರಾಣ ಮಿಥ್ಯೆಗಳನ್ನು ಸಮಕಾಲೀನಗೊಳಿಸುವ ಪ್ರಯತ್ನಗಳು ಸಮಾಜವನ್ನು ಆವರಿಸುತ್ತಿರುವಂತೆಯೇ, ಪ್ರಾಚೀನ ನಂಬಿಕೆಗಳು ಸೃಜಿಸಿದಂತಹ ಅವೈಚಾರಿಕ-ಅವೈಜ್ಞಾನಿಕ ಚಿಂತನಾಧಾರೆಗಳಿಗೆ ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳೂ ಆಸರೆ ನೀಡಲಾರಂಭಿಸಿವೆ. ವೈಚಾರಿಕತೆಯಿಂದ ವಿಮುಖವಾದ ಯಾವುದೇ ಸಮಾಜವೂ ಸತ್ಯದ ಹಾದಿಯಲ್ಲಿ ನಡೆಯಲಾಗುವುದಿಲ್ಲ ಎಂಬ ಸರಳ ವಾಸ್ತವವನ್ನು ಗ್ರಹಿಸುವುದರಲ್ಲಿ ಭಾರತೀಯ ಸಮಾಜ ವಿಫಲವಾಗಿದೆ.
ಇತ್ತೀಚಿನ ಎರಡು ಘಟನೆಗಳು ಈ ಸಂದರ್ಭದಲ್ಲಿ ಉಲ್ಲೇಖನಾರ್ಹ. ಹರಿಯಾಣದ ಮಿತ್ರೊಲ್ ಎಂಬ ಗ್ರಾಮದಲ್ಲಿ ತಾನೇ ಸಾಕಿದ ಗೋವುಗಳನ್ನು ವಾಹನವೊಂದರಲ್ಲಿ ಸಾಗಿಸುತ್ತಿದ್ದ ೪೫ ವರ್ಷದ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಇಲ್ಲಿ ನಮಗೆ ಇಲ್ಲಿ ಕಾಣಬೇಕಿರುವುದು ಆ ಘಟನೆಯ ಹಿಂದೆ ಅಡಗಿರುವ ಮಾನಸಿಕ ಕ್ರೌರ್ಯ ಮತ್ತು ಹಿಂಸೆ ಎಂಬ ಅದರ ಉತ್ಪನ್ನ. ಮತ್ತೊಂದು ಘಟನೆ ಕರ್ನಾಟಕದ ವಿಜಯಪುರ ಜಿಲ್ಲೆಯ ಇಟ್ಟಿಗೆ ಕಾರ್ಖಾನೆಯೊಂದರ ಕಾರ್ಮಿಕರ ಮೇಲೆ ನಡೆದ ಭೀಕರ ಹಲ್ಲೆ. ಅನುಮತಿ ಪಡೆಯದೆ ನೌಕರಿಗೆ ಗೈರಾದ ಕಾರಣಕ್ಕೆ ಅಮಾನುಷ ರೀತಿಯಲ್ಲಿ ಶಿಕ್ಷೆಗೊಳಗಾದ ಕಾರ್ಮಿಕರು ದಲಿತರು ಎನ್ನುವುದು ಕಾಕತಾಳೀಯವೇನಲ್ಲ. ಈ ಘಟನೆಗಳು ಏನನ್ನು ಸೂಚಿಸುತ್ತವೆ ಎನ್ನುವುದಕ್ಕಿಂತಲೂ, ಇಂತಹ ಅಮಾನುಷ ಘಟನೆಗಳಿಗೆ ನಮ್ಮ ಸಮಾಜದಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಯತ್ತ ಗಮನಹರಿಸಬೇಕಿದೆ. ಇಲ್ಲಿ ಗಾಂಽ ನೆನಪಾಗುತ್ತಾರೆ. ಗೋವುಗಳ ರಕ್ಷಣೆಗಾಗಿ ಮನುಷ್ಯರನ್ನು ಕೊಲ್ಲುವುದು, ಸಿರಿವಂತಿಕೆಯ ದರ್ಪದಿಂದ ಮನುಷ್ಯರನ್ನು ಪ್ರಾಣಿಗಳನ್ನು ಬಡಿದಂತೆ ಬಡಿಯುವುದು, ಜಾತಿಯ ಕಾರಣಕ್ಕಾಗಿ ಹೆತ್ತ ಮಕ್ಕಳನ್ನೇ ಪೋಷಕರು ಕೊಲೆ ಮಾಡುವುದು, ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳನ್ನು ಕೊಂದು ಬಿಸಾಡುವುದು ಇವೆಲ್ಲವೂ ಗಾಂಧಿ ಬಿಟ್ಟುಹೋದ ಸತ್ಯದ ಹಾದಿಯನ್ನು ಮತ್ತಷ್ಟು ವಿಕೃತಗೊಳಿಸುವ ಬೆಳವಣಿಗೆಗಳು. ಇದು ಮಹಾತ್ಮನಿಗೆ ನಾವು ಮಾಡುವ ಬಹುದೊಡ್ಡ ಅಪಚಾರ ಅಲ್ಲವೇ? ಇದಕ್ಕಿಂತಲೂ ದೊಡ್ಡ ಅಪಚಾರ ಎನಿಸುವುದು ಭಾರತದ ರಾಜಕೀಯವನ್ನು ಆವರಿಸಿರುವ ದ್ವೇಷ ರಾಜಕಾರಣ ಮತ್ತು ಅಪ್ರಾಮಾಣಿಕತೆ. ನವ ಭಾರತದ ಪ್ರಜಾತಂತ್ರದಲ್ಲಿ ಚಾರಿತ್ರಿಕ ಸತ್ಯ ಘಟನೆಗಳನ್ನು ಸುಳ್ಳಾಗಿಸುವ ಹಾಗೂ ಐತಿಹಾಸಿಕ ಸುಳ್ಳುಗಳನ್ನು ಜನರ ನಡುವೆ ಬಿತ್ತುವ ಒಂದು ಹೊಸ ಪರಂಪರೆಯನ್ನು ನಾವು ಎದುರಿಸುತ್ತಿದ್ದೇವೆ.
ತನ್ಮೂಲಕ ಸ್ವತಃ ಮಹಾತ್ಮ ಗಾಂಧಿ ಸೇರಿದಂತೆ, ಸ್ವಾತಂತ್ರ್ಯ ಪೂರ್ವ ಭಾರತದ ಅನೇಕ ದಾರ್ಶನಿಕರ ತತ್ವ ದರ್ಶನಗಳನ್ನು ಅಪಭ್ರಂಶಗೊಳಿಸಲಾಗುತ್ತಿದೆ. ಈ ಸುಳ್ಳುಗಳೇ ದೇಶದ ಯುವ ಸಮೂಹವನ್ನು ದಿಕ್ಕು ತಪ್ಪಿಸುತ್ತಿವೆ. ಇದರೊಡನೆ ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸುತ್ತಿರುವ ತಳಸ್ತರದ ಅಸಮಾನತೆಗಳನ್ನು, ಅಭಿವೃದ್ಧಿ ಪಥದ ಅನಿವಾರ್ಯತೆ ಎಂಬ ಮಿಥ್ಯೆಯನ್ನೂ ಸಮಾಜದಲ್ಲಿ ಬಿತ್ತಲಾಗುತ್ತಿದೆ. ಹಾಗಾಗಿಯೇ ದೇಶದ ಸುಶಿಕ್ಷಿತ ಮಧ್ಯಮ ವರ್ಗಗಳೂ ಕೂಡ ತಾವು ಎದುರಿಸುತ್ತಿರುವ ಅನಿಶ್ಚಿತತೆ-ಅಭದ್ರತೆಯನ್ನು ಮನಗಾಣದಂತಾಗಿದೆ. ನಿರುದ್ಯೋಗ, ನಿರ್ವಸತಿಕತೆಯಿಂದ ಬಳಲುತ್ತಿರುವ ಯುವಸ್ತೋಮ ನವ ಉದಾರವಾದದ ಭ್ರಮಾಲೋಕದಲ್ಲಿ ಬಂದಿಯಾಗಿದ್ದು, ತನ್ನ ಸುತ್ತಲಿನ ವಾಸ್ತವಗಳನ್ನೂ ಗಮನಿಸದಂತಾಗಿದೆ.
ಶ್ರದ್ಧಾಂಜಲಿಗೂ ಮುನ್ನ…ಜನವರಿ ೩೦ರಂದು ಗಾಂಧಿ ಹುತಾತ್ಮರಾದ ಆ ಭೀಕರ ಕ್ಷಣಗಳನ್ನು ವಿಷಾದದಿಂದ ಸ್ಮರಿಸುತ್ತಲೇ ನಾವು ಗಮನಿಸಬೇಕಿರುವುದು ನಮ್ಮ ಸಮಾಜ ತಲುಪಿರುವ ಈ ದುಸ್ಥಿತಿಯನ್ನು. ತಾತ್ವಿಕವಾಗಿ ಅಥವಾ ಸೈದ್ಧಾಂತಿಕವಾಗಿ ಗಾಂಧಿ ಸ್ವೀಕೃತರಾಗುವುದು ವ್ಯಕ್ತಿಗತ ಅಭಿಪ್ರಾಯಕ್ಕೆ ಬಿಟ್ಟ ವಿಚಾರ. ಆದರೆ ಗಾಂಧಿ ತಮ್ಮ ಜೀವನದುದ್ದಕ್ಕೂ ಅನುಸರಿಸಿದ ಸತ್ಯ ಶೋಧನೆಯ ಹಾದಿ, ಪ್ರಾಮಾಣಿಕ ಸರಳ ಜೀವನದ ಮಾರ್ಗ ಮತ್ತುಅಹಿಂಸಾತ್ಮಕ ದಾರಿಯ ಸೌಹಾರ್ದ ಪರಂಪರೆ ಇವುಗಳನ್ನು ನಾವು ಕಡೆಗಣಿಸಲಾಗುವುದಿಲ್ಲ. ಸಮಾಜವನ್ನು ಹಿಂಸೆ, ಕ್ರೌರ್ಯ ಮತ್ತು ಸುಳ್ಳುಗಳು ವ್ಯಾಧಿಯಂತೆ ಕಾಡುತ್ತಿರುವ ಈ ಹೊತ್ತಿನಲ್ಲಿ ಗಾಂಧಿ ಒಬ್ಬ ವ್ಯಕ್ತಿಯಾಗಿ ಪ್ರಸ್ತುತವಾಗುತ್ತಾರೆ.
ಗಾಂಧಿ ಹತ್ಯೆ ಸಮಕಾಲೀನ ಭಾರತದ ಒಂದು ಕರಾಳ ಗಳಿಗೆಯ ದುರ್ಘಟನೆ. ಅವರ ತತ್ವಾದರ್ಶಗಳನ್ನು ಕಡೆಗಣಿಸುತ್ತಲೇ ಬಂದಿರುವ ಭಾರತದ ರಾಜಕಾರಣ ಈ ದುರ್ಘಟನೆಯನ್ನು ಮತ್ತೆಮತ್ತೆ ನೆನಪಿಸುವುದೇ ಅಲ್ಲದೆ, ಪ್ರತಿ ಪ್ರಜೆಯನ್ನೂ ಆತ್ಮಾವಲೋಕನಕ್ಕೆ ಜಾರುವಂತೆ ಮಾಡುತ್ತದೆ. ಗಾಂಧಿ ಪ್ರತಿಪಾದಿಸಿದ ಸತ್ಯಾದರ್ಶಗಳಿಂದ ಬಹುದೂರ ಸಾಗಿರುವ ಸತ್ಯೋತ್ತರ ಯುಗದ ನವ ಭಾರತ ತನ್ನ ಸುಳ್ಳುಗಳ ಪೊರೆಯಿಂದ ಕಳಚಿಕೊಳ್ಳಬೇಕಿದೆ. ಹಾಗೆಯೇ ಹಿಂಸೆ ಮತ್ತು ಕ್ರೌರ್ಯದ ಸಾಮಾಜಿಕ ವ್ಯಾಧಿಯನ್ನು, ವ್ಯಸನವನ್ನು ಕೊನೆಗಾಣಿಸುವ ಹಾದಿಯಲ್ಲಿ, ಗಾಂಧಿಯವರನ್ನು ಅಂಬೇಡ್ಕರ್ ಅವರೊಡನೆಯೇ ಅವಲಂಬಿಸಬೇಕಿದೆ. ಆಗ ಭಾರತ ಹುತಾತ್ಮ ದಿನವನ್ನು ಆಚರಿಸುವ ನೈತಿಕ ಹಕ್ಕು ಪಡೆದುಕೊಳ್ಳುತ್ತದೆ. ಈ ಆತ್ಮವಿಮರ್ಶೆಗೆ ನಾವು ತಯಾರಾಗಲು ಇದು ಸಕಾಲ. ಆಗಿದ್ದೇವೆಯೇ?
ಗಾಂಧಿ ಹತ್ಯೆ ಸಮಕಾಲೀನ ಭಾರತದ ಒಂದು ಕರಾಳ ಗಳಿಗೆಯ ದುರ್ಘಟನೆ. ಅವರ ತತ್ವಾದರ್ಶಗಳನ್ನು ಕಡೆಗಣಿಸುತ್ತಲೇ ಬಂದಿರುವ ಭಾರತದ ರಾಜಕಾರಣ ಈ ದುರ್ಘಟನೆಯನ್ನು ಮತ್ತೆಮತ್ತೆ ನೆನಪಿಸುವುದೇ ಅಲ್ಲದೆ, ಪ್ರತಿ ಪ್ರಜೆಯನ್ನೂ ಆತ್ಮಾವಲೋಕನಕ್ಕೆ ಜಾರುವಂತೆ ಮಾಡುತ್ತದೆ. ಗಾಂಧಿ ಪ್ರತಿಪಾದಿಸಿದ ಸತ್ಯಾದರ್ಶಗಳಿಂದ ಬಹುದೂರ ಸಾಗಿರುವ ಸತ್ಯೋತ್ತರ ಯುಗದ ನವ ಭಾರತ ತನ್ನ ಸುಳ್ಳುಗಳ ಪೊರೆಯಿಂದ ಕಳಚಿಕೊಳ್ಳಬೇಕಿದೆ.