ಚಿನ್ನದ ಪಂಜರದೊಳಗಿನ ಗಿಣಿಯಂತಹ ಬದುಕು, ನಿವೃತ್ತಿಯ ನಂತರ ಸಾಮಾನ್ಯರಂತೆ ಜೀವನ
ಮಕ್ಕಳು ದೇವರಿಗೆ ಸಮಾನ ಎಂದು ಮಕ್ಕಳಲ್ಲಿ ದೇವರನ್ನು ಕಾಣುವುದು ನಮ್ಮಲ್ಲಿ ಸಾಮಾನ್ಯ. ಇದು ಮಕ್ಕಳಲ್ಲಿನ ಮುಗ್ಧತೆಯ ಕಾರಣಕ್ಕೆ ಸಾಮಾನ್ಯವಾಗಿ ಭಾವನಾತ್ಮಕ ನೆಲೆಯಲ್ಲಿ ನಡೆಯುತ್ತದೆಯೇ ವಿನಾ ವಾಸ್ತವದಲ್ಲಲ್ಲ. ಆದರೆ, ಅದೇ ಮಕ್ಕಳನ್ನು ನಿಜಕ್ಕೂ ಜೀವಂತ ದೇವರೆಂದು ನಂಬಿ ಪೂಜಿಸಿದರೆ ಹೇಗಿರುತ್ತದೆ?
ಎರಡು ವರ್ಷ ಎಂಟು ತಿಂಗಳ ಆರ್ಯತಾರಾ ಶಾಕ್ಯ ಮೇಲು ನೋಟಕ್ಕೆ ಬೇರಾವುದೇ ಮುದ್ದಾದ ನೇಪಾಳಿ ಹೆಣ್ಣು ಮಗುವಿನಂತೆ ಕಾಣಿಸಿಕೊಂಡರೂ ವಾಸ್ತವದಲ್ಲಿ ಅವಳು ಸಾಮಾನ್ಯ ಹೆಣ್ಣು ಮಗುವಲ್ಲ. ಅವಳು ಯಾವತ್ತೂ ಕೆಂಪು ಬಣ್ಣದ ಬಟ್ಟೆ ತೊಟ್ಟು, ಅದಕ್ಕೆ ತಕ್ಕ ಅಲಂಕಾರ ಮಾಡಿಕೊಂಡು, ಸಾಂಪ್ರದಾಯಿಕವಾದ ಆಭರಣಗಳನ್ನು ಧರಿಸಿಕೊಂಡಿರುತ್ತಾಳೆ. ಅವಳ ಹಣೆಯಲ್ಲಿ ‘ಅಗ್ನಿ ಚಕ್ಷು (ಮೂರನೇ ಕಣ್ಣು)’ ವನ್ನು ಚಿತ್ರಿಸಲಾಗಿದೆ. ಅವಳ ಆ ಕಣ್ಣು ಬ್ರಹ್ಮಾಂಡದಲ್ಲಿರುವ ಎಲ್ಲವನ್ನೂ ನೋಡಬಲ್ಲದು ಎಂದು ನೇಪಾಳದ ೨.೯೭ ಕೋಟಿ ಜನ ನಂಬುತ್ತಾರೆ. ಏಕೆಂದರೆ, ಅವಳು ಅವರಿಗೆ ಜೀವಂತ ದೇವತೆ! ನೇಪಾಳಿಗರು ಅವಳನ್ನು ‘ಕುಮಾರಿ’ ಎಂದು ಕರೆಯುತ್ತಾರೆ.
ಕಳೆದ ೫೦೦-೭೦೦ ವರ್ಷಗಳಿಂದ ಮಲ್ಲಾ ರಾಜರ ಕಾಲದಿಂದ ನೇಪಾಳಿಗರು ‘ಕುಮಾರಿ’ಯರನ್ನು ತಮ್ಮ ದೇಶದ ರಕ್ಷಕ ದೇವತೆ ತಲೇಜು ಭವಾನಿಯ ಅವತಾರವೆಂದು ಪೂಜಿಸುತ್ತ ಬಂದಿದ್ದಾರೆ. ಅವರ ಈ ನಂಬಿಕೆಯ ಹಿನ್ನೆಲೆಯಲ್ಲಿ ಹಲವು ಸ್ವಾರಸ್ಯಕರ ಕತೆಗಳಿವೆ. ಅವುಗಳಲ್ಲಿ ಮುಖ್ಯವಾದುದು ಇದು- ತ್ರೈ ಲೋಕ್ಯ ಮಲ್ಲ ನೇಪಾಳದ ರಾಜನಾಗಿದ್ದಾಗ ತಲೇಜು ಭವಾನಿ ರಾತ್ರಿ ಹೊತ್ತು ಅರಮನೆಗೆ ಬಂದು ಒಂದು ರಹಸ್ಯ ಕೋಣೆಯಲ್ಲಿ ಅವನೊಂದಿಗೆ ಪಗಡೆಯಾಡುತ್ತಿದ್ದಳು. ಮತ್ತು, ಅವನಿಗೆ ರಾಜ್ಯಾಡಳಿತದ ವಿಚಾರದಲ್ಲಿ ಸಲಹೆ, ಸೂಚನೆ ಕೊಡುತ್ತಿದ್ದಳು. ಒಂದು ರಾತ್ರಿ ಹೀಗೆ ಆಡುತ್ತಿದ್ದಾಗ ರಾಜನು ಕಾಮುಕ ದೃಷ್ಟಿಯಿಂದ ಅವಳತ್ತ ನೋಡಿದನು. ಅದರಿಂದ ಸಿಟ್ಟಿಗೆದ್ದ ಅವಳು ಅರಮನೆಯಿಂದ ಹೊರ ನಡೆದಳು. ತನ್ನ ತಪ್ಪನ್ನು ಅರಿತ ತ್ರೆ ಲೋಕ್ಯ ಮಲ್ಲನು ಅವಳ ಕ್ಷಮೆ ಕೇಳಿ, ಪರಿಪರಿಯಾಗಿ ಕೇಳಿಕೊಂಡರೂ ಅವಳು ಒಪ್ಪಲಿಲ್ಲ. ಕೊನೆಗೆ ಅವಳು ಶಾಕ್ಯ ವಂಶದ ಮೈನೆರೆಯದ ಹೆಣ್ಣು ಮಗುವಿನಲ್ಲಿ ತಾನು ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದಳು. ಅಲ್ಲಿಂದ ಕುಮಾರಿ ಆರಾಧನೆ ರೂಢಿಗೆ ಬಂದಿತು.
ಇದನ್ನು ಓದಿ: ಮೇಲುಕೋಟೆ: ಪ್ರವಾಸಿಗರಿಗೆ ತ್ಯಾಜ್ಯದ ದರ್ಶನ
ಆರ್ಯತಾರಾ ಶಾಕ್ಯ ನೇಪಾಳದ ಈಗಿನ ಕುಮಾರಿ. ಮೊನ್ನೆ ಸೆಪ್ಟೆಂಬರ್ ೧ ರಂದು ಅವಳನ್ನು ಕುಮಾರಿಯನ್ನಾಗಿ ಆಯ್ಕೆ ಮಾಡಲಾಯಿತು. ೨೦೧೭ರಲ್ಲಿ ಕುಮಾರಿಯಾಗಿ ಆಯ್ಕೆಯಾಗಿದ್ದ ತೃಶ್ಣಾ ಶಾಕ್ಯಗೆ ೧೧-೧೨ ವರ್ಷ ತುಂಬಿದರೂ ಮೈನೆರೆದ ಕಾರಣ ಅವಳನ್ನು ನಿವೃತ್ತಿಗೊಳಿಸಿ, ಎರಡು ವರ್ಷ ಎಂಟು ತಿಂಗಳ ಪ್ರಾಯದ ಆರ್ಯತಾರಾಳನ್ನು ಕುಮಾರಿಯನ್ನಾಗಿ ಮಾಡಲಾಯಿತು. ಎಲ್ಲಾ ಹೆಣ್ಣು ಮಕ್ಕಳು ಕುಮಾರಿಯರಾಗಲು ಸಾಧ್ಯವಿಲ್ಲ. ಬುದ್ಧನು ಜನಿಸಿದ ಶಾಕ್ಯ ವಂಶದ ನೇವಾರ್ ಎಂಬ ಅಕ್ಕಸಾಲಿ ಜಾತಿಯ ಹೆಣ್ಣು ಮಕ್ಕಳು ಮಾತ್ರವೇ ಇದಕ್ಕೆ ಅರ್ಹರು. ಅಂದರೆ, ಕುಮಾರಿಯರನ್ನು ಪೂಜಿಸುವವರು ಬಹುಸಂಖ್ಯಾತ ಹಿಂದೂಗಳಾದರೂ ಆಕೆ ಬೌದ್ಧ ಧರ್ಮದವಳು. ಹಾಗಾಗಿ, ಹಿಂದೂಗಳ ಜೊತೆ ಬೌದ್ಧರೂ ಕುಮಾರಿಯನ್ನು ಪೂಜಿಸುತ್ತಾರೆ.
ಕುಮಾರಿಯಾಗಿ ಆಯ್ಕೆಯಾಗುವ ಹೆಣ್ಣು ಹಲವು ಅರ್ಹತೆಗಳನ್ನು ಹೊಂದಿರಬೇಕು. ಎರಡರಿಂದ ನಾಲ್ಕು ವರ್ಷದೊಳಗಿನ ಕನ್ಯೆಯಾಗಿದ್ದು, ಮೈನೆರೆದಿರಬಾರದು ಮತ್ತು ಯಾವುದೇ ಕಾರಣಕ್ಕೆ ಮೈಯಿಂದ ರಕ್ತ ಹೋಗಿರಬಾರದು. ಮೈಮೇಲೆ ಕೀರು, ಗಾಯ ಮೊದಲಾಗಿ ಯಾವುದೇ ರೀತಿಯ ಕಲೆಗಳಿರಬಾರದು. ಯಾವುದೇ ಕಾಯಿಲೆ ಇಲ್ಲದೆ ಆರೋಗ್ಯವಾಗಿರಬೇಕು. ಚರ್ಮ, ಕಣ್ಣು, ಕೂದಲು, ಹಲ್ಲು ಮೊದಲಾಗಿ ಯಾವುದೇ ಅಂಗವೂ ಊನವಾಗಿರಬಾರದು. ಪ್ರಮುಖ ಜ್ಯೋತಿಷಿಗಳ ತಂಡವೊಂದು ಇಂತಹ ಕೆಲವು ಹೆಣ್ಣು ಮಕ್ಕಳನ್ನು ಆಯ್ಕೆ ಮಾಡುತ್ತದೆ. ನಂತರ, ಈ ಹೆಣ್ಣು ಮಕ್ಕಳನ್ನು ‘ಬತ್ತೀಸ್ ಲಕ್ಷಣ್’ ಎಂಬ ಕಣ್ಣು ಪರೀಕ್ಷೆ, ಸ್ವರ ಪರೀಕ್ಷೆ, ತೊಡೆ ಪರೀಕ್ಷೆ, ಎದೆ ಪರೀಕ್ಷೆ, ಕೂದಲು ಪರೀಕ್ಷೆ, ಕೈಕಾಲು ಪರೀಕ್ಷೆ ಮತ್ತು ಹಲ್ಲು ಪರೀಕ್ಷೆ ಮೊದಲಾದ ಮೂವತ್ತೆರಡು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ.
ಬತ್ತೀಸ್ ಲಕ್ಷಣ್ ಹಂತದಲ್ಲಿ ಯಶಸ್ವಿಯಾದವರನ್ನು ಕಾಠ್ಮಂಡುವಿನಲ್ಲಿರುವ ಅರಮನೆಗೆ ತಂದು ಮತ್ತಷ್ಟು ಕಠಿಣ ಪರೀಕ್ಷೆಗಳಿಗೆ ಒಳಪಡಿಸುತ್ತಾರೆ. ಅವುಗಳಲ್ಲಿಮೊದಲನೆಯದು ಆಗ ತಾನೇ ಕತ್ತರಿಸಿ ಸಾಲಾಗಿ ಇರಿಸಿದ ೧೦೮ ಆಡು ಹಾಗೂ ೧೦೮ ಕೋಣಗಳ ರುಂಡಗಳನ್ನು ಹಾದು ಹೋಗುವುದು. ಅದರ ನಂತರ, ಅಷ್ಟೇ ಸಂಖ್ಯೆಯ ಕುರಿ, ಕೋಣಗಳ ರುಂಡಗಳನ್ನು ಇರಿಸಿದ ಒಂದು ಕತ್ತಲೆ ಕೋಣೆಯಲ್ಲಿ ಒಂದು ರಾತ್ರಿ ಕಳೆಯುವುದು. ಈ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ ಒಬ್ಬಳನ್ನು ರಕ್ತ ಪ್ರಿಯ ತಲೇಜು ಭವಾನಿಯ ಅವತಾರವೆಂದು ಆಯ್ಕೆ ಮಾಡಲಾಗುತ್ತದೆ. ಹೀಗೆ ಆಯ್ಕೆಯಾದ ಹುಡುಗಿಯನ್ನು ಹಲವು ರೀತಿಯ ಧಾರ್ಮಿಕ ಶುದ್ಧೀಕರಣಕ್ಕೆ ಒಳಪಡಿಸಿದ ನಂತರ ತಲೇಜು ಭವಾನಿ ಅವಳ ದೇಹವನ್ನು ಪ್ರವೇಶಿಸಿ ಅವಳು ಕುಮಾರಿಯಾದಳು ಎಂದು ಘೋಷಿಸಲಾಗುತ್ತದೆ. ನಂತರ, ಅವಳನ್ನು ವಿಧ್ಯುಕ್ತವಾಗಿ ‘ಕುಮಾರಿ ಗೃಹ’ಕ್ಕೆ ಒಯ್ಯಲಾಗುತ್ತದೆ.
ಇದನ್ನು ಓದಿ : ಕುಟುಂಬದವರಿಂದ ಕುಟುಂಬದ ಗಣತಿ!
ಅರಮನೆಯ ಸನಿಹದಲ್ಲಿರುವ ಕುಮಾರಿ ಗೃಹ ಕುಮಾರಿಯ ಅಧಿಕೃತ ವಾಸಗೃಹ. ಸದಾ ಅಲಂಕೃತಳಾಗಿರುವ ಕುಮಾರಿ ಸಿಂಹಾಸನದಲ್ಲಿ ಕುಳಿತುಕೊಂಡು ದರ್ಶನ ನೀಡುತ್ತಾಳೆ. ಅವಳು ಯಾವತ್ತೂ ಚಪ್ಪಲಿ ಧರಿಸುವಂತಿಲ್ಲ. ಭಕ್ತರು ಅವಳಿಗೆ ಹೂ ಹಣ್ಣು ಕಾಯಿ, ಬಟ್ಟೆ, ಬಳೆ ಮೊದಲಾದ ವಸ್ತುಗಳ ಜೊತೆ ಬೇಯಿಸಿದ ಮೊಟ್ಟೆ, ಹುರಿದ ಮೀನುಗಳ ಕಾಣಿಕೆಗಳನ್ನು ಅರ್ಪಿಸಿ, ಅವಳ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಬೇಡುತ್ತಾರೆ. ಕುಮಾರಿಯ ಮುಖದ ಭಾವನೆ ಯಾವತ್ತೂ ಸ್ಥಿರವಾಗಿರಬೇಕು. ಒಂದು ವೇಳೆ ಅವಳು ಯಾರನ್ನಾದರೂ ನೋಡಿ ಅತ್ತರೆ ಅವರಿಗೆ ಕೆಟ್ಟದ್ದಾಗುತ್ತದೆ. ಹಾಗೂ, ಯಾರನ್ನಾದರೂ ನೋಡಿ ನಕ್ಕರೆ ಅವರಿಗೆ ಸಾವು ಸಂಭವಿಸುತ್ತದೆ ಎಂದು ನಂಬಲಾಗುತ್ತದೆ! ನೇಪಾಳದ ರಾಜ ವರ್ಷಕ್ಕೊಮ್ಮೆ ನಡೆಯುವ ‘ಇಂದ್ರ ಜಾತ್ರ’ ಹಬ್ಬದಂದು ಕುಮಾರಿ ಗೃಹಕ್ಕೆ ಬಂದು ಅವಳ ದರ್ಶನ ಪಡೆದು, ಅವಳ ಪಾದ ಪೂಜೆ ಮಾಡುತ್ತಾನೆ (೨೦೦೮ರಲ್ಲಿ ನೇಪಾಳದಲ್ಲಿ ರಾಜಾಡಳಿತ ನಿಂತ ಮೇಲೆ ಈ ಕ್ರಮ ಈಗ ರೂಢಿಯಲ್ಲಿಲ್ಲ.)
ಕುಮಾರಿಯಾದ ಹೆಣ್ಣು ಒಂದು ವರ್ಷದಲ್ಲಿ ೧೩ ಬಾರಿಗಿಂತ ಹೆಚ್ಚು ಸಲ ತನ್ನ ವಾಸಗೃಹದಿಂದ ಹೊರಬರುವಂತಿಲ್ಲ. ಹೊರ ಬಂದಾಗ ಅವಳ ಕಾಲು ನೆಲಕ್ಕೆ ತಾಕಬಾರದು. ಅವಳನ್ನು ಚಿನ್ನದ ರಥದಲ್ಲಿ ಕುಳ್ಳಿರಿಸಿ, ಭಕ್ತರು ಅದನ್ನುಎಳೆಯುತ್ತಾರೆ. ಅವಳಿಗೆ ತನ್ನ ಹೆತ್ತವರನ್ನೂ ನೋಡುವ ಅವಕಾಶ ಬಹಳ ಕಡಿಮೆ. ಅವಳ ಎಲ್ಲ ಕೆಲಸಕ್ಕೂ ಶಾಕ್ಯ ಜಾತಿಯ ಆಳುಗಳಿದ್ದು ಅವಳ ಬೇಕು ಬೇಡಗಳನ್ನು ಅವರೇ ನೋಡಿಕೊಳ್ಳುತ್ತಾರೆ. ಅವಳು ದಿನವಿಡೀ ತನ್ನ ವಾಸಗೃಹದೊಳಗೇ ಇದ್ದು ತನ್ನ ಆರೈಕೆ ಮಾಡುವವರ ಮಕ್ಕಳೊಂದಿಗೆ ಆಟವಾಡುತ್ತಲೋ, ವಿಡಿಯೋ ಗೇಮ್ ಆಡುತ್ತಲೋ ಕಾಲ ಕಳೆಯಬೇಕು. ಆಗಾಗ್ಗೆ ಅವಳು ತನ್ನ ಕೋಣೆಯ ಬೃಹತ್ ಗಾತ್ರದ ಕಿಟಕಿ ಬಳಿ ಬಂದು ಕೆಲವು ಕ್ಷಣ ಜನ ಸಾಮಾನ್ಯರಿಗೆ ದರ್ಶನ ಕೊಡುತ್ತಾಳೆ. ನೇಪಾಳದ ಬೇರೆ ನಗರಗಳಿಗೆ ಬೇರೆ ಬೇರೆ ಕುಮಾರಿಯರಿರುತ್ತಾರೆ. ಆದರೆ, ಕಾಠ್ಮಂಡುವಿನ ಕುಮಾರಿ ಇವರೆಲ್ಲರಿಗೂ ಅಧಿದೇವತೆಯಾಗಿರುತ್ತಾಳೆ.
ಧನಕುಮಾರಿ ಭಜ್ರಾಚಾರ್ಯ ಎಂಬವರು ಅತ್ಯಂತ ಹೆಚ್ಚು ಕಾಲ ಕುಮಾರಿಯಾಗಿದ್ದವರು. ೧೯೫೪ರಲ್ಲಿ ಪತಾನ್ ಪಟ್ಟಣದ ಕುಮಾರಿಯಾಗಿಆಯ್ಕೆಗೊಂಡ ಇವರು ವಯಸ್ಸಾದರೂ ಮೈನೆರೆಯದ ಕಾರಣ ೧೯೮೪ರ ತನಕ ಮೂವತ್ತು ವರ್ಷಗಳ ಕಾಲ ಕುಮಾರಿಯಾಗಿದ್ದರು. ಆ ವರ್ಷ ರಾಜಾ ದೀಪೇಂದ್ರ ಇವರನ್ನು ಬಲವಂತವಾಗಿ ಕುಮಾರಿ ಪಟ್ಟದಿಂದ ತೆಗೆದಿದ್ದರು. ಅದನ್ನು ವಿರೋಧಿಸಿ ಧನಕುಮಾರಿ ತನ್ನ ಮನೆಯೊಳಗೆ ಕುಮಾರಿಯ ರೀತಿಯಲ್ಲಿ ಹಲವು ವರ್ಷ ಒಬ್ಬಂಟಿಯಾಗಿ ಜೀವಿಸಿದ್ದರು. ಅವರ ಸೊಸೆ ಮುಂದೆ ೨೦೦೧ ರಿಂದ ೨೦೧೦ರ ವರೆಗೆ ಅದೇ ಪತಾನ್ ಪಟ್ಟಣದ ಕುಮಾರಿಯಾಗಿದ್ದರು.
ಇದನ್ನು ಓದಿ: ಮೈಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಿದ್ಧತೆ
ಹೆಣ್ಣು ಮಕ್ಕಳು ಸಾಮಾನ್ಯವಾಗಿ ೧೧ ಅಥವಾ ೧೨ ನೇ ವರ್ಷ ಪ್ರಾಯದಲ್ಲಿ ಮೈ ನೆರೆಯುವುದರಿಂದ ಆ ಪ್ರಾಯ ತಲುಪಿದಾಗ ಅವಳು ಕುಮಾರಿ ಪಟ್ಟದಿಂದ ನಿವೃತ್ತಳಾಗುತ್ತಾಳೆ. ಅಥವಾ ಅದಕ್ಕೂ ಮೊದಲೇ ಅವಳು ಮೈ ನೆರೆದರೆ, ಅಥವಾ ಏನಾದರೂ ಗಾಯವಾಗಿ ಅಥವಾ ಕಾಯಿಲೆ ತಗಲಿ ಮೈಯಿಂದ ರಕ್ತ ಹೋದರೆ ಅವಳು ತನ್ನ ಕುಮಾರಿ ಪಟ್ಟವನ್ನು ಕಳೆದುಕೊಳ್ಳುತ್ತಾಳೆ. ಕುಮಾರಿಯಾಗಿದ್ದು ಜನರಿಂದ ಆರಾಧಿಸಲ್ಪಡುತ್ತ ವೈಭವದ ವಾತಾವರಣದಲ್ಲಿ ಬಾಲ್ಯ ಜೀವನ ನಡೆಸಿದ ಆ ಹೆಣ್ಣು ಮಗುವಿಗೆ ಕುಮಾರಿ ಪಟ್ಟ ಕಳೆದುಕೊಂಡು ಕುಮಾರಿ ಗೃಹದಿಂದ ಹೊರ ಬಂದು ಒಬ್ಬಳು ಸಾಮಾನ್ಯ ಹೆಣ್ಣು ಮಗುವಿನಂತೆ ಬದುಕುವಾಗ ಹಲವು ಗೊಂದಲಗಳನ್ನು ಎದುರಿಸಬೇಕಾಗುತ್ತದೆ. ಮೊದಲಿಗೆ, ಇವಳ ಪ್ರಾಯದ ಇತರ ಸಾಮಾನ್ಯ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ಇವಳು ಅನಕ್ಷರಸ್ಥಳಾಗಿದ್ದು ಮನೆಯಲ್ಲಿರಬೇಕು. ಇತ್ತೀಚೆಗೆ ಕುಮಾರಿಯರಿಗೆ ಕುಮಾರಿ ಗೃಹದಲ್ಲೇ ಖಾಸಗಿಯಾಗಿ ಶಿಕ್ಷಣ ನೀಡುವ ಕ್ರಮ ಜಾರಿಗೆ ಬಂದಿದೆ.
ಮತ್ತೊಂದು, ಮಾಜಿ ಕುಮಾರಿಯನ್ನು ಮದುವೆಯಾಗುವ ಗಂಡು ಐದು ವರ್ಷದೊಳಗೆ ಸಾಯುತ್ತಾನೆ ಎಂಬ ಪ್ರತೀತಿ ಇರುವುದರಿಂದ ಇವರಿಗೆ ಮದುವೆ ಪ್ರಸ್ತಾಪ ಬರುವುದು ಕಷ್ಟವಾಗಿ ಅನೇಕರು ಅವಿವಾಹಿತರಾಗುಳಿಯಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಒಮ್ಮೆ ದೇವತಾ ಸ್ವರೂಪಿಗಳಾಗಿದ್ದು ಜನರಿಂದ ಪೂಜಿಸಲ್ಪಟ್ಟು ನಂತರ ಆ ಸ್ಥಾನ ಕಳೆದುಕೊಂಡು ಜನಸಾಮಾನ್ಯರಲ್ಲಿ ಒಬ್ಬರಾಗಿ ಬದುಕುವ ಕುಮಾರಿಯರದ್ದು ಚಿನ್ನದ ಪಂಜರದೊಳಗಿನ ಗಿಣಿಯಂತಹ ಬದುಕು. ಪಂಜರದೊಳಗಿರುವ ತನಕ ಇವರು ಪೂಜನೀಯ ದೇವತೆಯರು. ಪಂಜರದಿಂದ ಹೊರ ಬಿದ್ದ ನಂತರ ಶಾಪಗ್ರಸ್ತ ದೇವತೆಯರು! ಇತ್ತೀಚಿನ ವರ್ಷಗಳಲ್ಲಿ ನೇಪಾಳವೂ ಆಧುನಿಕತೆಗೆ ತೆರೆದುಕೊಳ್ಳುತ್ತಿರುವುದರಿಂದ ಕುಮಾರಿ ಆರಾಧನೆ ವಿರುದ್ಧ ಅಲ್ಲಿ ಪ್ರತಿರೋಧ ಹುಟ್ಟುತ್ತಿದೆ.
” ಕುಮಾರಿಯಾದ ಹೆಣ್ಣು ಒಂದು ವರ್ಷದಲ್ಲಿ ೧೩ ಬಾರಿಗಿಂತ ಹೆಚ್ಚು ಸಲ ತನ್ನ ವಾಸಗೃಹದಿಂದ ಹೊರಬರುವಂತಿಲ್ಲ. ಹೊರ ಬಂದಾಗ ಅವಳ ಕಾಲು ನೆಲಕ್ಕೆ ತಾಕಬಾರದು. ಅವಳನ್ನುಚಿನ್ನದ ರಥದಲ್ಲಿ ಕುಳ್ಳಿರಿಸಿ, ಭಕ್ತರು ಅದನ್ನು ಎಳೆಯುತ್ತಾರೆ. ಅವಳಿಗೆ ತನ್ನ ಹೆತ್ತವರನ್ನೂ ನೋಡುವ ಅವಕಾಶ ಬಹಳ ಕಡಿಮೆ.”
-ಪಂಜು ಗಂಗೊಳ್ಳಿ





