“ನನಗೆ ಬಸ್ಸೇ ಸಾಕು, ಬಸ್ಸ್‌ನಲ್ಲಿಯೇ ಹೋಗುತ್ತೇನೆ… ನಿಮ್ಮ ಮನೆಯಲ್ಲಿ ಒಂದು ದಿನ ಇದ್ದು” ಎಂದು ಅಜ್ಜಿ ನನಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಳು. ನನಗೆ ನನ್ನ ಅಹಂ ಬಿಡುತ್ತಿರಲಿಲ್ಲ. ನಾನು ಈ ಕಡೆಯಿಂದ ಆ ಕಡೆಯ ಫೋನಿನಲ್ಲಿದ್ದ ದೇಶದ, ಅದರಲ್ಲೂ ಕರ್ನಾಟಕದ ಪ್ರಖ್ಯಾತ ಎನ್‌ಜಿಒ ಮುಖ್ಯಸ್ಥನಿಗೆ ಅಜ್ಜಿಯನ್ನು ಆಕೆಯ ಊರಿಗೆ ಕಳುಹಿಸಲು ತಕ್ಷಣವೇ ಕಾರು ಕಳಿಸಲು ಅಬ್ಬರಿಸುತ್ತಿದ್ದೆ. ಇದನ್ನೆಲ್ಲಾ ಅರಚುತ್ತಿದ್ದ ನನ್ನನ್ನು ನಿರ್ಲಕ್ಷಿಸಿ ಅಜ್ಜಿ, ನಮ್ಮ ಮಗನೊಂದಿಗೆ ನಿರುಮ್ಮಳವಾಗಿ ಆಟ ಆಡುತ್ತಾ ಕುಳಿತಿತ್ತು – ನಡುಮನೆಯಲ್ಲಿ.
ಇದು ನಡೆದದ್ದು – ೨೦೦೧ರಲ್ಲಿ. ಆ ಅಜ್ಜಿ ಯಾರೂ ಅಲ್ಲ, ಸಾಲುಮರದ ತಿಮ್ಮಕ್ಕ. ಚಿಕ್ಕನಾಯಕನಹಳ್ಳಿಯ ನಮ್ಮ ಮನೆಯಲ್ಲಿ ಇದೆಲ್ಲಾ ನಡೆಯುತ್ತಿತ್ತು. ಆಗಿದ್ದು ಇಷ್ಟೇ:
೨೦೦೧ರಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಲ್ಲಿಗೆರೆ ಗ್ರಾಮದಲ್ಲಿ ಆ ಹೆಸರಾಂತ ಎನ್‌ಜಿಒ ಹಸಿರೋತ್ಸವ ಆಚರಿಸುತ್ತಿತ್ತು. ಇದು ಒಂದು ಜಲಾನಯನ ಪ್ರದೇಶ. ಆ ಏರಿಯಾದಲ್ಲಿ ನಾನು ವೆಟರಿನರಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ಜನರ ಜತೆಗಿನ ನನ್ನ ಒಡನಾಟ ಆ ಸಂಸ್ಥೆಗೆ ಆ ಜಲಾನಯನ ಪ್ರದೇಶದ ಅಭಿವೃದ್ಧಿಗೆ ಆಯಾಚಿತವಾಗಿ ಒದಗಿಬಂದಿತ್ತು.
ಇದಕ್ಕಿಂತ ಹಿಂದೆಯೇ ಚಿಕ್ಕನಾಯಕನಹಳ್ಳಿಯಲ್ಲಿ ಮನೆಗೊಂದು ಮರ ಆಂದೋಲನಕ್ಕೆ ಅಜ್ಜಿ ಬಂದು ನಮ್ಮ ಮನೆಯಲ್ಲಿಯೇ ತಂಗಿ, ಫ್ಯಾಮಿಲಿ ಮೆಂಬರಂತಾಗಿತ್ತು. ಈ ಅಜ್ಜಿಯನ್ನು ಹಸಿರೋತ್ಸವಕ್ಕೆ ಕರೆಯುವ, ಕಳಿಸುವ ಜವಾಬ್ದಾರಿಯನ್ನೂ ಕೊಟ್ಟು ನನ್ನ ಅಹಂ ಹೆಚ್ಚಿಸಿದ್ದರು; ಹಾಗಾಗಿ ಅವರ ಒಳಾಸೆಯೂ ಕೈಗೂಡಿತ್ತು.
ಅಂದು ಎಂದಿನಂತೆ ಅಜ್ಜಿ ಬಂತು. ನಾಲ್ಕಾರು ಗ್ರಾಮಗಳ ಮಹಿಳೆಯರು ಆ ಕಾರ್ಯಕ್ರಮದಲ್ಲಿ ಒಗ್ಗೂಡಿ ನಿಜಕ್ಕೂ ಹಸಿರು ಹಬ್ಬವನ್ನೇ ಅಲ್ಲಿ ಸೃಷ್ಟಿಸಿದರು. ಹಾಗಿತ್ತು ಆ ಅಜ್ಜಿಯ ಬಿಯಿಂಗ್‌ನೆಸ್! ಎಲ್ಲರ ಮನಸ್ಸಿನಲ್ಲಿಯೂ ಹಸಿರುಕ್ಕಿ ಆ ದಿನ ಸಾರ್ಥಕಗೊಂಡಿತು. ಅದೇ ಕಾರ್ಯಕ್ರಮಕ್ಕೆ ನಬಾರ್ಡ್ ಅಧಿಕಾರಿಗಳನ್ನೂ ಕೆಲವು ವಿದೇಶಿಯರನ್ನೂ ಹೈಟೆಕ್ ಬಸ್ಸಿನಲ್ಲಿ ಕರೆಸಿಕೊಂಡಿತ್ತು ಆ ಸಂಸ್ಥೆ. ಅವರಿಗಾಗಿಯೇ ವಿಶೇಷ ವ್ಯವಸ್ಥೆ ಇತ್ತು. ಆ ದೊಡ್ಡ ಹೊಲಮಾಳದಲ್ಲಿ ಅವರಿಗಾಗಿಯೇ ವಿಶೇಷ ಟೆಂಟ್ ಎದ್ದು ನಿಂತಿತ್ತು.
ಇದನ್ನು ಓದಿ: ಸಾಲುಮರದ ತಿಮ್ಮಕ್ಕ ಗೌರವಾರ್ಥ ರಾಜ್ಯದ 114 ಸ್ಥಳಗಳಲ್ಲಿ ತಲಾ 114 ಸಸಿ ನೆಟ್ಟು ಪೋಷಣೆ: ಸಚಿವ ಈಶ್ವರ್ ಖಂಡ್ರೆ
ಈ ಅಜ್ಜಿಯನ್ನು ಅವರ ನಡುವೆ ಕರೆದೊಯ್ದು ಕೂರಿರಿ ಅವರಿಗೆ ಬೇಕಾದ ಹಾಗೆ ಮಾತಾಡಿಸಿ, ಚಿತ್ರಿಸಿಕೊಂಡರು. ಜನರ ನಡುವೆ ಬ್ಯುಸಿ, ಬಿಸಿಯಾಗಿದ್ದ ನಾನು ದೂರದಿಂದಲೇ ಗಮನಿಸಿದ್ದೆ. ಕಾರ್ಯಕ್ರಮ ಮುಗಿದ ನಂತರ ಈ ಅಜ್ಜಿಯನ್ನು ವಾಪಸ್ಸು ಕರೆದುಕೊಂಡು ಹೋಗುವ ವ್ಯವಸ್ಥೆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ನಾನು ಅಲ್ಲಿಂದ ಇಪ್ಪತ್ತು ಕಿ.ಮೀ. ದೂರದ ನನ್ನ ಮನೆಗೆ ನನ್ನದೇ ವ್ಯವಸ್ಥೆಯಲ್ಲಿ ಕರೆದುಕೊಂಡು ಬಂದೆ. ಆದರೆ ಆ ‘ಅತಿಥಿ’ಗಳಿಗೆ ರಾಜೋಪಚಾರ! ಈಗ ಅರ್ಥವಾಯಿತೇ ಆರಂಭದ ನನ್ನ ಫೋನ್ ಕಿರುಚಾಟ. ಕೊನೆಗೂ ಎನ್‌ಜಿಒ ಮುಖ್ಯಸ್ಥ ಕಾರು ಕಳಿಸಿಕೊಟ್ಟ. ಇದೇಕೆ ಕಾರು ತರಿಸಿದೆ. ನನಗೆ ಬಸ್ಸೇ ಸಾಕಿತ್ತು ಎಂದು ಗೊಣಗುತ್ತಲೇ ಕಾರು ಹತ್ತಿದ ಅಜ್ಜಿ ಇಡೀ ಪಯಣದ ಉದ್ದಕ್ಕೂ ಅದನ್ನು ಮತ್ತೆ ಮತ್ತೆ ಪ್ರಕಟಿಸುತ್ತಿತ್ತು.
ಕೊನೆಗೂ ಕಾರಿನಲ್ಲಿಯೇ ಊರಿಗೆ ತಲುಪಿಸಿ ಬಂದೆ. ಈಗ, ಇಷ್ಟು ವರುಷಗಳ ನಂತರವೂ ನನ್ನನ್ನು ಕಾಡುತ್ತಲೇ ಇರುವ ಹಲವು ಪ್ರಶ್ನೆಗಳು ಹಾಗೆಯೇ ಇವೆ. ಎನ್‌ಜಿಒ ,ಅಜ್ಜಿಯನ್ನು ಘನತೆಯಿಂದ ನಡೆಸಿಕೊಳ್ಳಲಿಲ್ಲ ಎಂಬುದಕ್ಕೆ ನಾವು ಕಂಡುಕೊಂಡ ಪ್ರತಿಭಟನೆಯ ಹಾದಿ ಸರಿ ಇತ್ತೆ? ಬೇರೆ ಅಧಿಕಾರಿಗಳಿಗೆ, ವಿದೇಶಿಯರಿಗೆ ಮಾಡಿದ ವಿಶೇಷ ವ್ಯವಸ್ಥೆಯನ್ನು ಈ ಅಜ್ಜಿಗೂ ನಿರೀಕ್ಷಿಸಿದ್ದು ತಪ್ಪೇ ಪರಿಸರ ಕಾಳಜಿಯ ಗುತ್ತಿಗೆಯನ್ನು ಆ
ಅಧಿಕಾರಿಗಳಿಗೆ, ಎನ್‌ಜಿಒಗಳಿಗೆ ಕೊಟ್ಟಿದ್ದು ಯಾರು? ಯಾವ ಹಮ್ಮು ಬಿಮ್ಮು ತೋರಿಸದೆ ತನ್ನ ಕೆಲಸಮುಗಿಸಿ ತನ್ನ ಹೊಲದಿಂದ ಮನೆಗೆ ಹೊರಟ ನಿರುಮ್ಮಳತೆಯ ಅಜ್ಜಿಯ ಮನಸ್ಥಿತಿ ನಮಗಿನ್ನೂ ದಕ್ಕಿಲ್ಲವೇ? ಅತ್ಯಂತ ಸಹಜವಾಗಿ, ಸರಳವಾಗಿ ಗಿಡಮರದೊಳಗೆ ಬೆರೆತು ಕಾಯಕ ಮಾಡುತ್ತಿರುವ ಅಜ್ಜಿಗೆ, ಅಜ್ಜಿಯ ವ್ಯಕ್ತಿತ್ವಕ್ಕೆ, ಅಜ್ಜಿಯ ಮಾದರಿಗೆ ಘನತೆ ತಂದುಕೊಟ್ಟು ಈ ಲೋಕದ ಕಣ್ಣಿನಲ್ಲಿ ಹೀರೋ (ಹೀರೋಯಿನ್) ಮಾಡಬೇಕಿತ್ತೆ? ಬಸ್ಸಿನಲ್ಲಿ ಊರಿಗೆ ಹಿಂದಿರುಗಬೇಕೆನ್ನುವ ‘ಗಾಂಧಿ ಮಾರ್ಗ’ಕ್ಕೆ ನಾವು ಕೈ ಜೋಡಿಸಬೇಕಿತ್ತೆ? ಇಂತಹ ಹಲವು ಪ್ರಶ್ನೆಗಳಿಗೆ ದಶಕಗಳ ನಂತರವೂ ಗೊಂದಲದಲ್ಲಿದ್ದೇನೆ. ೨೦೦೧ರಲ್ಲಿ ಅಷ್ಟು ಬ್ಯುಸಿಯಾಗಿರಲಿಲ್ಲ. ಇದೆಲ್ಲಾ ಆದ ನಂತರದ ಕಾಲದಲ್ಲಿ ಅಜ್ಜಿ ಬ್ಯುಸಿಯಾಗಿ ಹೋಯಿತು. ನನಗೆ ಮತ್ತೆ ಸಿಕ್ಕಲೇ ಇಲ್ಲ. ಅಜ್ಜಿಯನ್ನು ಅಜ್ಜಿಯಂತೆ ಬಿಡದ ಹುಚ್ಚು ಪ್ರಚಾರದ ಹಪಾಹಪಿ ಪ್ರಪಂಚ ಕೊನೆಕೊನೆಗೆ ಅಜ್ಜಿಯನ್ನು ನುಂಗಲು ಶುರು ಮಾಡಿತೇ? ಅಜ್ಜಿಯನ್ನು ಬ್ಯುಸಿಯಾಗಿ ಇಟ್ಟ ಈ ಲೋಕದ ನಡತೆ ಅಜ್ಜಿಗೆ ಇಷ್ಟವಿತ್ತೆ?
ತಮ್ಮ ಪಾಪಪ್ರಜ್ಞೆಗೆ ಅಜ್ಜಿಯನ್ನು ಕುಣಿಸಿತೇ ಈ ಪ್ರಪಂಚ? ದಲಿತ ಸಾಧಕರಿಗೆ ಇದೊಂದು ಶಾಪವಾಗಿದೆಯೇ? ಭರಪೂರವಾಗಿ ಒದಗಿಬರುವ ಅತಿಪ್ರಚಾರ, ಅತಿಮೆಚ್ಚುಗೆ ಅವರನ್ನು ಅವರಂತಾಗಿಯೇ ಇರಲು ಬಿಡಲೇ ಇಲ್ಲವೇ?
” ಅತ್ಯಂತ ಸಹಜವಾಗಿ, ಸರಳವಾಗಿ ಗಿಡಮರದೊಳಗೆ ಬೆರೆತು ಕಾಯಕ ಮಾಡುತ್ತಿರುವ ಅಜ್ಜಿಗೆ, ಅಜ್ಜಿಯ ವ್ಯಕ್ತಿತ್ವಕ್ಕೆ, ಅಜ್ಜಿಯ ಮಾದರಿಗೆ ಘನತೆ ತಂದುಕೊಟ್ಟು ಈ ಲೋಕದ ಕಣ್ಣಿನಲ್ಲಿ ಹೀರೋ (ಹೀರೋಯಿನ್) ಮಾಡಬೇಕಿತ್ತೆ? ಬಸ್ಸಿನಲ್ಲಿ ಊರಿಗೆ ಹಿಂದಿರುಗಬೇಕೆನ್ನುವ ‘ಗಾಂಧಿ ಮಾರ್ಗ’ಕ್ಕೆ ನಾವು ಕೈ ಜೋಡಿಸಬೇಕಿತ್ತೆ? ಇಂತಹ ಹಲವು ಪ್ರಶ್ನೆಗಳಿಗೆ ದಶಕಗಳ ನಂತರವೂ ಗೊಂದಲದಲ್ಲಿದ್ದೇನೆ.”
-ಡಾ.ಸಿ.ಎಸ್.ರಘುಪತಿ, ಮೈಸೂರು





