ಸುರೇಶ್ ಕಂಜರ್ಪಣೆ
ಬಿಹಾರದ ನಂತರ ಎರಡನೇ ಹಂತದಲ್ಲಿ ಒಂಬತ್ತು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮಾಡುವುದಾಗಿ ಭಾರತ ಚುನಾವಣಾ ಆಯೋಗ ಘೋಷಿಸಿದೆ. ಈ ತರಾತುರಿ ಕ್ರಮಕ್ಕೆ ತಮಿಳುನಾಡು, ಕೇರಳ ಮುಖ್ಯಮಂತ್ರಿಗಳೂ ಸೇರಿದಂತೆ ಪ್ರಜ್ಞಾವಂತ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದ್ದು, ನಿಜವಾದ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವ ಮತ್ತು ವಲಸೆ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಪಿತೂರಿ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಇದರ ಹಿನ್ನೆಲೆಯಲ್ಲಿ ಈ ಲೇಖನ.
ಭಾರತ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾನೂನುಬದ್ಧವಾಗಿ ಮಾಡಲೇಬೇಕಾದ ಒಂದು ಉಪಕ್ರಮ. ಅದನ್ನು ಮಾಡಬಾರದು ಎಂದು ಯಾರೂ ಹೇಳುವಂತಿಲ್ಲ. ಮತದಾರರ ಪಟ್ಟಿ ಕಾಲ ಕಾಲಕ್ಕೆ ಪರಿಷ್ಕರಣೆ ಆಗಬೇಕು. ಏಕೆಂದರೆ ಮರಣ ಹೊಂದಿದವರು, ಊರು ಬಿಟ್ಟವರು, ವಾಸ ಇಲ್ಲದವರ ಬಗ್ಗೆ ಪರಿಷ್ಕರಣೆ ಮಾಡಿ ಸುಧಾರಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕಾಗುತ್ತದೆ.
ಇಡೀ ಈ ಪ್ರಕ್ರಿಯೆಯನ್ನು ಸಮಗ್ರವಾಗಿ ನಡೆಸಬೇಕು ನಿಜ. ಆದರೆ, ಈ ಜವಾಬ್ದಾರಿ ಹೊತ್ತಿರುವ ಭಾರತ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಸ್ತುತ ಸಂಪೂರ್ಣವಾಗಿ ಕುಸಿದಿದೆ. ಅದು ಬಿಹಾರದಲ್ಲಿ ಎಸ್‌ಐಆರ್ ಮಾಡಿದಾಗ ಅಲ್ಲಿ ಕಂಡಂತಹ ಹುಳುಕುಗಳು, ಅದರ ಪೂರ್ವಗ್ರಹಗಳು, ಹುನ್ನಾರಗಳು, ದುಷ್ಟತನ ಯಾವ ಮಟ್ಟದಲ್ಲಿದ್ದವು ಎಂದರೆ, ಅದೇ ರೀತಿ ದೇಶಾದ್ಯಂತ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತೇವೆ ಎಂದಾಗ ಎಲ್ಲರಲ್ಲೂ ಸಂಶಯ ಹುಟ್ಟುವಂತೆ ಮಾಡಿದೆ. ಅದು ತನ್ನ ವಿಶ್ವಾಸಾರ್ಹತೆಗೆ ಕುಂದು ಅಥವಾ ಊನ ಬಂದ ಕಾರಣಗಳೇನಿವೆ ಅವುಗಳನ್ನು ತಿದ್ದಿಕೊಂಡ ಲಕ್ಷಣಗಳು ಕಾಣಿಸುತ್ತಿಲ್ಲ. ಸುಪ್ರೀಂ ಕೋರ್ಟ್ ಹೇಳಿದೆ ಎನ್ನುವ ಕಾರಣಕ್ಕೆ ಏನೋ ಮಾಡಿದೆ ಎನ್ನುವುದನ್ನು ಬಿಟ್ಟರೆ ಅದರ ಒಟ್ಟಾರೆ ಸಾಂಸ್ಥಿಕ ವರ್ತನೆ, ಅದರಲ್ಲೂ ಬಿಹಾರದಲ್ಲಿ ಮಾಡಲು ಹೊರಟಂತಹ ಲೋಪವನ್ನೇ ಮುಂದುವರಿಸಬಹುದು ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದೆ.
ಉದಾಹರಣೆಗೆ, ಮತದಾರರು ವಯಸ್ಸಿನ ಘೋಷಣಾ ಪತ್ರವನ್ನು ಒದಗಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ. ನಾನು ೧೯೫೯ರಲ್ಲಿ ಹುಟ್ಟಿದವನು. ನಾನು ಊರು ಬಿಟ್ಟುಬಂದು ೨೦ ವರ್ಷಗಳಾಯಿತು. ನಾನು ಎಲ್ಲಿಂದ ನನ್ನ ಅಪ್ಪ ಎಲ್ಲಿ ಹುಟ್ಟಿದರು ಎಂದು ದಾಖಲೆಗಳನ್ನು ತರಲಿ? ನಾನು ನನ್ನ ಐವತ್ತು ವರ್ಷಗಳ ಹಿಂದಿನ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್ ಇದೆಯಾ ಎಂದು ನೋಡಬೇಕು. ಅದರಲ್ಲಿ ನನ್ನ ಹುಟ್ಟಿದ ದಿನಾಂಕ ಹಾಗೂ ಹೆಸರು ಏನಿದೆ ಅದನ್ನು ಒದಗಿಸಿ ನಾನು ಸಾಬೀತುಪಡಿಸಬೇಕಾಗುತ್ತದೆ.
ಇದನ್ನೂ ಓದಿ:-ಭ್ರಷ್ಟ ವ್ಯಕ್ತಿಯ ದುರಾಡಳಿತಕ್ಕೆ ಸರ್ಕಾರ ಅಂತ್ಯ ಹಾಡಿದೆ
ಆದರೆ ನನ್ನ ತಲೆಮಾರಿನ ೬೦ ವರ್ಷ ದಾಟಿದವರಲ್ಲಿ ಬಹಳಷ್ಟು ಜನರು ಪ್ರಾಯಶಃ ಮೆಟ್ರಿಕ್ ದಾಟಿಲ್ಲ. ಮೊನ್ನೆ ಆಂಧ್ರಪ್ರದೇಶದಲ್ಲಿ ಬೆಂಕಿ ಗಾಹುತಿಯಾದ ಬಸ್ಸಿನ ಚಾಲಕ ಐದನೇ ತರಗತಿಯಷ್ಟೇ ಓದಿದ್ದು, ಫೇಕ್ ಎಸ್‌ಎಸ್‌ಎಲ್‌ಸಿ ಡಾಕ್ಯುಮೆಂಟ್ ಮಾಡಿಕೊಂಡು ಚಾಲನಾ ಪರವಾನಗಿ ಪಡೆದಿದ್ದ ಎಂದು ತಿಳಿದು ಬಂದಿದೆ. ಹೀಗೆ ಎಸ್‌ಎಸ್‌ಎಲ್‌ಸಿ ಆಗದೇ ಇರುವವರು ಏನು ಮಾಡಬೇಕು? ಇಂಥವರು ಯಾವ ದಾಖಲೆಗಳನ್ನು ನೀಡಬೇಕು?
ಸದ್ಯ, ಈ ದಾಖಲೆಗಳ ಹೊರತಾಗಿಯೂ ಆಧಾರ್ ಕಾರ್ಡ್, ನಾಗರಿಕರ ಗುರುತು ಎನ್ನಲಾಗುವ ಮೊದಲಿನ ಮತದಾರರ ಚೀಟಿ, ರೇಷನ್ ಕಾರ್ಡ್ ಇತ್ಯಾದಿಗಳಿವೆ. ಪುಣ್ಯವಶಾತ್ ಇವೆಲ್ಲ ಊರ್ಜಿತವಾಗಿದ್ದು, ಇವುಗಳನ್ನು ಹಾಜರುಪಡಿಸಲು ಅವಕಾಶವಿದೆ. ಆದರೆ, ಈಗಾಗಲೇ ನೀಡಿರುವ ಮತದಾರರ ಚೀಟಿ ಇದ್ದರೆ ಅದನ್ನು ಏನು ಮಾಡಬೇಕು ಎಂಬುದರ ಬಗ್ಗೆಸ್ಪಷ್ಟತೆ ಇಲ್ಲ. ನಾವು ಮಾಡಬೇಕಾದ ಕೆಲಸ ಏನೆಂದರೆ ಈ ಪ್ರತಿಯೊಂದಕ್ಕೂ ಸ್ಪಷ್ಟೀಕರಣವನ್ನು ಕೇಳಬೇಕು. ಅದಕ್ಕೆ ಬೇಕಾದ ದಾಖಲೆಗಳನ್ನು ನಾವು ಮೊದಲು ಸಿದ್ಧಪಡಿಸಿ ಹೊಂದಿಸಿಕೊಳ್ಳಬೇಕಲ್ಲವೇ? ಮೊನ್ನೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಿತ್ತು. ಅದು ಕೇಳಿದ ಮಾಹಿತಿಗಳನ್ನೆಲ್ಲ ಕೊಡಲೇಬೇಕೆಂಬ ಕಡ್ಡಾಯವೇನು ಇರಲಿಲ್ಲ. ಅದು ನಮ್ಮನ್ನು ಏನೂ ಮಾಡಲ್ಲ. ಆದರೆ ಎಸ್‌ಐಆರ್ ಹಾಗಲ್ಲ. ಇದರಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ನಾವು ಈ ದೇಶದ ನಾಗರಿಕರೇ ಅಲ್ಲ ಎನ್ನುವ ಮಟ್ಟಕ್ಕೂ ನಮ್ಮನ್ನು ದೂಡಬಹುದು.
ಚುನಾವಣಾ ಆಯೋಗ ನಿರ್ದಿಷ್ಟ ಗುರುತಿನ ಚೀಟಿಗಳು ಹಾಗೂ ದಾಖಲೆಗಳನ್ನು ಹಾಜರುಪಡಿಸಬಹುದು ಎಂದು ಹೇಳಿರುವುದು ಸರಿಯಷ್ಟೆ.ಆದರೆ ಇವು ಯಾವುದನ್ನೂ ಹೊಂದಿಲ್ಲದ ಸಮುದಾಯಗಳ ಜನರೂ ಇದ್ದಾರೆ.ಉದಾಹರಣೆಗೆ, ಅಲೆಮಾರಿ ಜನಾಂಗದವರು. ಅವರನ್ನು ಎಲ್ಲಿ ಹಿಡಿಯುತ್ತೀರಿ? ಹಾಗಾಗಿ ಸಾಕಷ್ಟು ಪ್ರಚಾರ ಕೊಟ್ಟು ಎಸ್‌ಐಆರ್ ಅಭಿಯಾನ ನಡೆಸಬೇಕು. ಈ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ದೊಡ್ಡ ಪ್ರಮಾಣದಲ್ಲಿ ಸಕ್ರಿಯವಾಗಬೇಕು; ಸಿವಿಲ್ ಸೊಸೈಟಿ ಕೂಡ ಇದರಲ್ಲಿ ತೊಡಗಿಸಿಕೊಳ್ಳಬೇಕು.
ಕಾಲಾವಕಾಶ ಅಗತ್ಯ: ಇಡೀ ಮತದಾರರ ಪಟ್ಟಿ ಪರಿಷ್ಕರಣೆ ಉಪಕ್ರಮವು ಎಲ್ಲರನ್ನೂಒಳಗೊಳ್ಳುವ ಉದಾರ ನೀತಿ ಆಗಬೇಕೇ ಹೊರತು ಇದರ ನೆಪದಲ್ಲಿ ಅರ್ಹ ಮತದಾರರನ್ನು ಮತದಾನದಿಂದ ಹೊರಗಿಡುವ ಕುತಂತ್ರವಾಗಬಾರದು.ಈ ಕಾರ್ಯಾಚರಣೆ ಬಗ್ಗೆ ಪ್ರಕಟಿಸಿ ಕನಿಷ್ಠ ಒಂದು ತಿಂಗಳಾದರೂ ಕಾಲಾವಕಾಶ ನೀಡಬೇಕಿತ್ತು. ನಾಡಿದ್ದು ಸೋಮವಾರದಿಂದಲೇ ಮಾಡುತ್ತೇವೆ ಎಂದರೆ ಏನರ್ಥ? ನಾವು ಮೂರು ಸರ್ತಿ ಬರುತ್ತೇವೆ ಆಗಲೂ ಸಿಗದೇ ಇದ್ದರೆ ನೀವು ಆನ್‌ಲೈನ್‌ನಲ್ಲಿ ಮಾಡಿ ಎಂದಿದ್ದಾರೆ. ಇದು ಎಷ್ಟು ಜನರಿಗೆ ಸಾಧ್ಯ? ನಾವು ಕೆಲಸಕ್ಕೆ ಹೋಗಿದ್ದಾಗ ಅವರು ನಮ್ಮ ಮನೆಗೆ ಬಂದರೆ ಏನು ಪ್ರಯೋಜನ? ಇದು ಬಿಹಾರದಲ್ಲಿ ಮಾಡಿದ್ದಂತಹ ಕುತಂತ್ರ ಹಾಗೂ ಸಂಚಿನ ಯೋಜನೆಯಂತೆ ಕಾಣಿಸುತ್ತಿರುವುದು ಈ ಕಾರಣಕ್ಕೆ. ಚುನಾವಣಾ ಆಯೋಗ ಸಾಕಷ್ಟು ಸಮಯಾವಕಾಶ ನೀಡಿ ನಂತರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಪ್ರಾರಂಭಿಸಬೇಕು. ಚುನಾವಣೆಯಲ್ಲಿ ಮತ ಹಾಕಿ ಎಂದು ಹೇಳುವುದಕ್ಕೆ ಮಾತ್ರ ದೊಡ್ಡ ದೊಡ್ಡ ಸಿನಿಮಾ ನಟರನ್ನು, ಕ್ರಿಕೆಟ್ ಆಟಗಾರರನ್ನು ಬಳಸಿಕೊಳ್ಳುವ ಚುನಾವಣಾ ಆಯೋಗ ಸೂಕ್ಷ್ಮ ವಿಚಾರವಾದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಏಕೆ ಬಳಸಿಲ್ಲ? ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಲ್ಲವೇ?





