ತುಂತುರು ಮಳೆ ನಡುವೆ ರೂಪುಗೊಂಡ ಸಮಾಜವಾದಿ ರೈತ ಸಭಾ
ಯಾವುದೇ ಘೋಷಣೆಗಳಿಲ್ಲ , ಮೈಕು ಪಟಾಕಿ ತಮಟೆಗಳ ಅಬ್ಬರವಿಲ್ಲ. ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು , ಇಬ್ಬರ ಸಾಲು ಮಾಡಿಕೊಂಡು ಮೌನ ಮೆರವಣಿಗೆ ಹೊರಟಿತು. ಅಷ್ಟೊಂದು ಜನ ರೈತರ ನಿಶ್ಶಬ್ದ ಸಾಲನ್ನು ಜನ ಬೆಕ್ಕಸ ಬೆರಗಾಗಿ ನಿಂತು ನೋಡಿದರು. ಅದಾದ ಮೇಲೆ ತವರದವರಕೊಪ್ಪಲು , ಗ್ಯಾರಳ್ಳಿ , ದಾಸರಕೊಪ್ಪಲು ಹೀಗೆ ಒಂದೊಂದು ಹಳ್ಳಿಗಳ ಮುಂದೆಯೂ ಹೋದಂತೆ ಸಾವಿರಾರು ಜನ ನಿಂತು ಮೌನ ಮೆರವಣಿಗೆ ನೋಡುತ್ತಾ ವಿಸ್ಮಯದಿಂದ ನಿಂತಿದ್ದರು.
ಹಿಂದೆಂದೂ ಬೇಸಾಯಗಾರರು ಮೆರವಣಿಗೆಯಲ್ಲಿ ಹೋಗಿದ್ದವರೇ ಅಲ್ಲ. ಅದವರಿಗೆ ಗೊತ್ತೂ ಇರಲಿಲ್ಲ. ತಿಂಗಳೊಪ್ಪತ್ತಿನಿಂದ ಯುವಕರು ಹಳ್ಳಿ ಹಳ್ಳಿ ತಿರುಗುತ್ತ ಜೂನ್ ೨೩ ಸೋಮವಾರ ಎಂದು ಹೇಳುತ್ತಿದ್ದರಲ್ಲಾ? ಆ ಕುರಿತು ಎಲ್ಲರಿಗೂ ಒಂದು ತೀರದ ಕುತೂಹಲವಿತ್ತು.
ತಮ್ಮವರದೇ ಮೆರವಣಿಗೆ ಎಂದು ಹಳ್ಳಿಗರು ಸಂಭ್ರಮಿಸಿ ನೋಡಿದರು. ಆ ಸಡಗರ ಮುಖಗಳಲ್ಲಿ ಢಾಳಾಗಿ ಕಾಣುತ್ತಿತ್ತು.
ಒಂದಷ್ಟು ಜನರ ಕೈಯ್ಯಲ್ಲಿ ಸೊಟ್ಟಂಬಟ್ಟ ಬರೆಸಿದ ಫಲಕಗಳಿದ್ದವು. ರೈತರು ಬೆಳೆದ ಬೆಳೆಗಳಿಗೆ ನ್ಯಾಯಬೆಲೆ ಬೇಕು. ರಸ ಗೊಬ್ಬರದ ಬೆಲೆ ಇಳಿಯಬೇಕು ಎಂಬ ಫಲಕಗಳು. ಹಿಂದಿನ ದಿನ ರೈತಕ್ರಾಂತಿ ಎಂಬ ಎರಡು ಬ್ಯಾನರ್ ಗಳಿದ್ದವು . ಈ ದಿನ ಹೊಸ ನಾಮಕರಣ ಸಮಾಜವಾದಿ ರೈತ ಸಭಾ ಎಂಬ ಬ್ಯಾನರುಗಳು. ಚಳವಳಿ ಬೆಳವಣಿಗೆಯ ಸಂಕೇತ.
ಅಂದು ದಾರಿಯುದ್ದಕ್ಕೂ ಬಿರು ಮಳೆ ಮತ್ತು ತುಂತುರು ಮಳೆ. ವರ್ಷವೆಲ್ಲಾ ಬಿಸಿಲಲ್ಲಿ ಒಣಗಿ, ಮಳೆಯಲ್ಲಿ ನೆಂದು ಉಳುಮೆ ಮಾಡಿದ್ದ ಬೇಸಾಯಗಾರರಿಗೆ ಆ ತುಂತುರೆಲ್ಲ ಯಾವ ಲೆಕ್ಕ? ನೆನೆಯುತ್ತಾ ಸಾಗಿದರು ದಾರಿಗುಂಟ.
ದಾಸರಕೊಪ್ಪಲಿನತ್ತ ಸಾಗುತ್ತಿದ್ದಾಗ ಬರಸಿಡಿಲಿನಂತಹ ಸುದ್ದಿ ಬಂತು. ಇನ್ಸ್‌ಪೆಕ್ಟರ್ ಬರ ಹೇಳಿದ್ದರೆಂದು ಅವರ ಬಳಿ ಹೋದೆ. ಅವರ ಜೀಪಿನಲ್ಲಿದ್ದ ವೈರ್‌ಲೆಸ್ಸಿನಲ್ಲಿ ಭೀಕರ ಸುದ್ದಿ ಬಿತ್ತರವಾಗುತ್ತಿತ್ತು. ಪ್ರಧಾನಿ ಇಂದಿರಾರ ಮಗ ಸಂಜಯ್ ಗಾಂಧಿ ವಿಮಾನಾಪಘಾತದಲ್ಲಿ ಅಂದೇ ದುರ್ಮರಣಕ್ಕೀಡಾಗಿದ್ದ. ಅದು ಬೆಳಿಗ್ಗೆ ಎಂಟು ಗಂಟೆಗೆ ಸಂಭವಿಸಿತ್ತು. ಸರ್ಕಾರಿ ರಜೆ ಘೋಷಣೆಯಾಗಿತ್ತು.
ಸಂಜಯ್ ಗಾಂಧಿಯದು ವರ್ಣರಂಜಿತ ವ್ಯಕ್ತಿತ್ವ. ಮೂವತ್ಮೂರು ವರ್ಷದ ಆತ ಮೂರು ತಿಂಗಳ ಮಗುವನ್ನು ಬಿಟ್ಟು ಅಗಲಿದ್ದ. ಡ್ಯಾಶಿಂಗ್ ಲೀಡರ್ ಅನ್ನಿಸಿಕೊಂಡಿದ್ದ ಅವನು ತುರ್ತುಸ್ಥಿತಿಯ ಅಟ್ಟಹಾಸಕ್ಕೆ ಪ್ರತೀಕವಾಗಿದ್ದ. ದೆಹಲಿಯ ಚಾಂದಿನಿ ಚೌಕ್, ಟರ್ಕ್‌ಮನ್ ಗೇಟು ಪ್ರಕರಣದಲ್ಲಿ ಬುಲ್ಡೋಜರ್‌ಗಳನ್ನು ವಾಸದ ಮನೆಗಳ ಮೇಲೆ ನುಗ್ಗಿಸಿದ್ದು , ಅಡ್ಡಾದಿಡ್ಡಿಯಾಗಿ ನಸ್‌ಬಂದಿ ಮಾಡಿಸಿದ್ದನೆಂಬುದು ಕುಖ್ಯಾತಿಯನ್ನು ತಂದಿತ್ತು.
ಜಾತಾ ಆಯೋಜಿಸಿದ್ದವರೆಲ್ಲಾ ನನ್ನ ಪೂರ್ವಾಶ್ರಮದ ಆಪ್ತ ಒಡನಾಡಿಗಳೇ. ದತ್ತ, ಮೂರ್ತಿ, ನಂಜುಂಡೇಗೌಡರ ಬಳಿ ಹೋಗಿ ಸಂಜಯ್ ದುರ್ಮರಣವನ್ನು ತಿಳಿಸಿ, ‘ಮೆಮೊರಾಂಡಮ್ ಕೊಡುವುದಕ್ಕೆ ಈಗ ಡಿಸಿ ಕಛೇರಿ ಮುಚ್ಚಿರುತ್ತೆ. ಏನ್ಮಾಡ್ತೀರಾ?’ ಕೇಳಿದೆ.
‘ಡಿಸಿ ಇಲ್ಲದಿದ್ರೇನು. ಅತ್ತೆ ಸತ್ರೆ ಅಮಾಸೆ ನಿಲ್ಲೊಲ್ಲ. ಸಂಜಯ ಸತ್ರೆ ಹುಣ್ಣಿಮೇನೂ ನಿಲ್ಲೋದಿಲ್ಲ. ಮೆರವಣಿಗೆ ನಿಲ್ಸೋದಿಲ್ಲ. ಡೀಸಿ ತಗೋತಾನೆ ಅಂತ ನಾವೇನು ಜಾತಾ ತೆಗೆದಿಲ್ಲ. ಪೂರ್ತಿ ಮೆರವಣಿಗೆ ನಡೆಸುತ್ತೇವೆ. ಬೇಡಿಕೆ ಪತ್ರವನ್ನು ನಿಧಾನಕ್ಕೆ ಕೊಟ್ಟರಾಯ್ತು !’ ಎಂದು ಉಛಾಯಿಸಿದರು ಯುವಕರು. ಗುಂಪಿನ ಮಸ್ತಿ ತಲೆಗೇರಿದಂತಿತ್ತು!
ಸರ್ಕಲ್ ಇನ್ಸ್‌ಪೆಕ್ಟರ್ ಹೇಳಿ ಕಳಿಸಿದ್ದನ್ನು ಅರುಹಿದೆ, ಹಾಸನ ಪೂರ್ತಿ ಬಂದ್ ಆಗಿದೆ. ಹೋಟೆಲ್ ಗೀಟೆಲ್ ಇರೋದಿಲ್ಲ ಊಟಕ್ಕೆ ಏನು ಮಾಡ್ತೀರಿ? ಊಟ ತಿಂಡಿ ಇರಲಿ ನೀರೂ ಸಿಕ್ಕೋದಿಲ್ಲ. ಬೆಳಗ್ಗಿನಿಂದ ರೈತರು ಬರೀ ಹೊಟ್ಟೇಲಿ ಬಂದಿದ್ದಾರೆ. ಊಟ ಕೊಡದಿದ್ದರೆ ಸುಮ್ಮನಿರ್ತಾರಾ? ತಕರಾರು ತೆಗೆಯೋಲ್ವ? ಏನಾದ್ರೂ ವ್ಯವಸ್ಥೆ ಮಾಡಬೇಕು
ಪೊಲೀಸ್ ಬಂದೋಬಸ್ತ್ ಎಂದರೆ ಬರೀ ಲಾಠಿ ಬಂದೂಕ ಹಿಡಿದು ಬರುವುದಲ್ಲ ಅಥವಾ ಬಡಿಯುವುದಲ್ಲ. ಯಾವ್ಯಾವ ವಿಚಾರದಲ್ಲಿ ಅಸಮಧಾನ ಉಂಟಾಗಬಹುದು, ಜಗಳ ಜೂಟಿ ನಡೆಯಬಹುದು ಎಂದು ಮೊದಲೇ ತಿಳಿದು ಸಲಹೆ ಸೂಚನೆ ನೀಡಬೇಕಾಗುತ್ತದೆ.
ಊಟದ ಯೋಚನೆಯನ್ನೇ ಯುವಕರು ಮಾಡಿದಂತಿರಲಿಲ್ಲ. ನಿನ್ನಿನ ಸಮಾವೇಶದಲ್ಲಿ ತಿಂದ ಊಟವೇ ಸಾಕಾಗುತ್ತೆ ಅಂದು ಕೊಂಡಿದ್ದರೇನೋ?! ಬಂದ ರೈತರು ಅವರ ಪಾಡಿಗೆ ವಾಪಸ್ ಹೋಗ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು.
ದೊಡ್ಡ ಜಾತಾ ಅವರಿಗೂ ಹೊಸದು. ‘ಇನ್ನೇನು ಮಾಡೋದು? ತಲೆಗೆ ಒಂದೊಂದು ರೂಪಾಯಿ ಸಂಗ್ರಹಿಸಿ ನಾವೇ ಏನಾದ್ರೂ ಅಡುಗೆ ಮಾಡಿಸ್ತೀವಿ’ ಎಂದರು ಆರ್‌ಪಿ ವೆಂಕಟೇಶಮೂರ್ತಿ ಮೂರ್ತಿ.
ಆಗ ದತ್ತ , ‘ ಬೇಡಿ, ಬೇಡಿ ಒಂದು ರೂಪಾಯಿ ಜಾಸ್ತಿ ಆಯ್ತು. ಎಂಟಾಣೆ ಕಲೆಕ್ಟ್ ಮಾಡೋಣಂತೆ’ ಎಂದರು. ‘
ಅದೆಂಗೆ ಆಗುತ್ತೆ? ಇವರೆಲ್ಲಾ ನೋಡೋಕೆ ಕಡ್ಡಿ ಇದ್ದಂಗಿದ್ರೂ. ಒಬ್ಬೊಬ್ಬರೂ ಒಂದೊಂದು ಮಂಕರಿ ಮುಗುಸ್ತಾರೆ. ಕೊಟ್ಮೇಲೆ ಹೊಟ್ಟೆ ತುಂಬಾ ಕೊಡಬೇಕು. ಒಂದು ರುಪಾಯೇ ಇರಲಿ!’ ಅಂತ ಇನ್ಯಾರೋ ಅಂದರು.
ಪರಿಸ್ಥಿತಿ ವಿವರಿಸಿ ಒಂದೊಂದು ರೂಪಾಯಿ ಸಂಗ್ರಹಿಸ ತೊಡಗಿದರು. ವೋಟ್ಲಲ್ಲಾದ್ರೆ ಎರಡು ರುಪಾಯಿ ಕೊಡಬೇಕಾಗುತ್ತೆ ಅಂತ ಗೊತ್ತಿದ್ದರಿಂದ ತಕರಾರು ಮಾಡದೆ ರೈತರು ವಂತಿಗೆ ಕೊಟ್ಟರು. ಅಡುಗೆಗಾಗುವಷ್ಟು ಹಣ ಸಂಗ್ರಹವಾಗೇಬಿಟ್ಟಿತು. ಮೆರವಣಿಗೆ ಹಾಸನದ ಪ್ರಮುಖ ಬೀದಿಗಳಲ್ಲಿ ಸಾಗಿತು. ಹತ್ತಾರು ಕಿಮೀ ನಡೆದಿದ್ದರೂ , ಮಳೆ ಧೋ ಅನ್ನುತ್ತಿದ್ದರೂ ರೈತರಾರೂ ಕೆಂದಿರಲಿಲ್ಲ.
ಈಗ ನೇರ ಡಿಸಿ ಕಛೇರಿಗೆ ಹೋದರೆ ಅಡುಗೆ ಆಗಿರೊಲ್ಲ. ಅಲ್ಲಿ ಕಾಯುತ್ತಾ ನಿಂತರೆ ಜನ ವರಾತ ತೆಗೀತಾರೆ. ಆದ್ದರಿಂದ ಅಡುಗೆ ಎಲ್ಲಾ ರೆಡಿಯಾಗುವ ತನಕ ಜಾತಾ ಮಾಡ್ತಾನೇ ಇರೋಣ ಎಂದು ತೀರ್ಮಾನಿಸಿದರು.
ಹೊಸಲೈನಿನ ಮೂಲಕ ಹೋಗಿ ಸಹ್ಯಾದ್ರಿ ಸರ್ಕಲ್, ಕೆ.ಆರ್.ಪುರಂ, ಅಲ್ಲಿಂದ ಚರ್ಚ್, ಟೌನಿನ ಬೀದಿಗಳಲ್ಲಿ ರೌಂಡು ಹೊಡ್ಕಂಡು ಹೋಗುವುದೆಂದು ಕರಕೊಂಡು ಹೊರಟರು. ಸುಸ್ತಾಗುತ್ತೆ ಎಂದು ರೈತರು ಮೆರವಣಿಗೆ ಬಿಟ್ಟು ಹೋಗುವಂತಿಲ್ಲ. ದಿನವೂ ಉತ್ತಿಬಿತ್ತಿ ದುಡಿಯುವವರಿಗೆ ಯಾವ ಸುಸ್ತು? ಊರೆಲ್ಲ ರಜಾ. ಆಗಿನ್ನೂ ಒಂದೊಂದು ರೂಪಾಯಿ ಕೊಟ್ಟಿದ್ದಾರೆ!. ಯಾರೂ ತಕರಾರು ತೆಗೆಯಲಿಲ್ಲ.
ಮೆರವಣಿಗೆ ಮೂರು ಗಂಟೆ ವೇಳೆಗೆ ಡಿಸಿ ಕಛೇರಿ ತಲುಪಿತು. ಬಾಯಿಗೆ ಕಪ್ಪು ಬಟ್ಟೆ , ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಮೌನವಾಗಿ ಸಾಗುತ್ತಿದ್ದ ಮೆರವಣಿಗೆ ಕಂಡು ತುಂಬ ಜನರು , ಅದು ಸಂಜಯ್ ಗಾಂಧಿ ಸಾವಿನ ಶೋಕ ಮೆರವಣಿಗೆ ಎಂದೇ ತಿಳಿದಿದ್ದರಂತೆ!
ಡಿಸಿ ಕಛೇರಿ ತಲುಪಿದ ಮೆರವಣಿಗೆಯನ್ನುದ್ದೇಶಿಸಿ ಯುವಕರು ಮಾತಾಡಿದರು. ರೈತರಿಗಾಗುತ್ತಿರುವ ಮೋಸ ವಂಚನೆಗಳ ಬಗ್ಗೆ , ಬೆಲೆ ತಾರತಮ್ಯದ ಬಗ್ಗೆ , ರಸಗೊಬ್ಬರದ ಅಭಾವದ ಬಗ್ಗೆ ಕ್ರಮ ಕೈಗೊಳ್ಳದ ಸರ್ಕಾರವನ್ನು ಟೀಕಿಸಿ, ಮನವಿ ಪತ್ರವನ್ನು ಅಲ್ಲೇ ಸುಟ್ಟು ಹಾಕಿದರು. ಇನ್ನೊಂದು ಪ್ರತಿಯನ್ನು ನಾಳೆ ಡೀಸಿಗೆ ಕೊಡುತ್ತೇವೆಂದರು.
ಸಭೆ ಚದುರಿತು. ಜಾತಾ ಎಂದು ಜನರನ್ನು ಹಿಡಿದು ತಂದ ಮೆರವಣಿಗೆ ಅದಾಗಿರಲಿಲ್ಲ. ಊಟ ಇರಲಿ ನೀರಿನ ವ್ಯವಸ್ಥೆಯೂ ಇರಲಿಲ್ಲ. ಸಂಜಯ್ ಸಾವಿನ ಕಾರಣಕ್ಕಾಗಿ ಅಂಗಡಿ ಹೋಟೆಲುಗಳೆಲ್ಲ ಮುಚ್ಚಿದ್ದವು. ಬೆಳಗಿನ ತಿಂಡಿಯೂ ಇಲ್ಲದೆ ಮೈಲುಗಟ್ಟಲೇ ಬರಿ ಹೊಟ್ಟೆಯಲ್ಲಿ ನಡೆದು ಸುಸ್ತಾಗಿದ್ದ ರೈತರಿಗೆ ಬೇಗನೆ ಊಟ ಕೊಡಬೇಕಿತ್ತು. ಅಡುಗೆ ಭಟ್ಟರನ್ನು ಕರೆಸಿ ಅಲ್ಲೇ ಒಲೆ ಹಾಕಿಸಿ ಚಿತ್ರಾನ್ನ ಮೊಸರನ್ನ ಮಾಡಿಸಿದ್ದರು. ಸಂಜೇವರೆಗೂ ಅನ್ನ ಸಂತರ್ಪಣೆ ನಡೆಯಿತು. ಪೊಲೀಸರಾದ ನಮಗೆ ಸಿಕ್ಕಿದ್ದೂ ಅದೇ ಪ್ರಸಾದ.
ಜನ ತಾವಾಗಿ ಬಂದು ಪಾಲ್ಗೊಳ್ಳುವ ಅಸಲಿ ಮೆರವಣಿಗೆ ಎಂದರೆ ಇದು.
ಪಕ್ಷಗಳು ಪುಡಾರಿಗಳು ನಡೆಸುವ ಇಂದಿನ ಮೆರವಣಿಗೆಗಳ ವರಸೆಯೇ ಬೇರೆ. ಇಂಥ ಮೆರವಣಿಗೆಗಳಿಗೆ ಬರುವ ಜನ ತಾವಾಗಿ ಬಂದವರಲ್ಲ. ಕರೆದುಕೊಂಡೂ ಬಂದವರಲ್ಲ. ಹಿಡಿದುಕೊಂಡು ಬಂದವರು! ಅದಕ್ಕೂ ಒಬ್ಬ ದಲ್ಲಾಳಿ ಕಂತ್ರಾಟುದಾರನಿರುತ್ತಾನೆ. ತಲೆಗೆ ಎರಡು ಸಾವಿರ ಎಂದು ಫಿಕ್ಸ್ ಮಾಡಿ ಲಕ್ಷಗಳನ್ನು ಕೊಟ್ಟರೆ ಮುಗಿಯಿತು. ಹಳ್ಳಿ ಹಳ್ಳಿಗೊಂದು ಬಸ್ಸು ಫಿಕ್ಸ್ ಮಾಡುತ್ತಾನೆ. ಮೂರು ಹೊತ್ತೂ ಇಸ್ಪೀಟಾಡಿಕೊಂಡು ಕೂತಿರುವ ಸೋಮಾರಿ ಸಿದ್ದರನ್ನು ಕಂಡು ಮಾತಾಡುತ್ತಾನೆ. ಅಪ್ ಅಂಡ್ ಡೌನ್, ಊಟ ತಿಂಡಿ, ಕೊನೆಗೆ ಕೈಗೆ ಸಾವಿರ ಕ್ಯಾಸ್ ಕೊಡ್ತೀವಿ ಎಂದರೆ ಸಾಕು. ಪುಸಲಾಯಿಸುವ ಅಗತ್ಯವೇ ಇಲ್ಲ. ಬಿಟ್ಟಿ ಬೆಂಗ್ಳೂರು ಟ್ರಿಪ್ಪು. ದಬದಬಾ ಹತ್ತಿಬಿಡುತ್ತಾರೆ ಪಕ್ಸದ ನಿಸ್ಟಾವಂತ ಕಾರ್ಯಕರ್ತರು!. ಎಲ್ಲಾ ಪಕ್ಷಗಳಿಗೂ ಇವರೇ ಖಾಯಂ ಕಾರ್ಯಕರ್ತರು. ಜಾತಾ ಮುಗಿಯುವ ತನಕ ದಾರಿಯುದ್ದಕ್ಕೂ ಕಡ್ಲೇಬೀಜ ಬಿಸ್ಲೇರಿಗಳು. ಎರಡು ಭರ್ಜರಿ ಊಟ ಮಾಡಿಸಿ ಊರಿಗೆ ವಾಪಸ್ ತಂದು ಬಿಡುತ್ತಾನೆ ಬ್ರೋಕರ್ ಭೀಷ್ಮಾಚಾರಿ. ಒಬ್ಬೊಬ್ಬನ ಕೈಗೂ ಒಂದೊಂದು ಸಾವಿರ ಮಡಗುತ್ತಾನೆ. ಸಾವಿರಾರು ಕಾರ್ಯಕರ್ತರು ಬಂದಿದ್ದರು ಎಂಬ ಸುದ್ದಿ ಡಾಳಾಗಿ ಪ್ರಕಟವಾಗುತ್ತದೆ. ಮೆರವಣಿಗೆಗೆ ಬಂದಿದ್ದ ಒಂದೇ ಬಗೆಯ ನೂರಾರು ಬಸ್ಸುಗಳು ಒಟ್ಟಿಗೆ ನಿಂತಿರುವ ಚಿತ್ರಗಳು ಟೀವಿಯಲ್ಲಿ ಕಾಣಿಸುತ್ತವೆ. ಅಚ್ಚುಕಟ್ಟಾಗಿ ಪ್ರಿಂಟ್ ಮಾಡಿಸಿರುವ ನೂರಾರು ಫಲಕಗಳು, ಬ್ಯಾನರ್‌ಗಳು , ಅದೇ ಬಣ್ಣದ ಟೋಪಿ ಇಲ್ಲವೇ ಶಾಲುಗಳು , ಓಪನ್ ಲಾರಿಗಳು, ಮೇಕಪ್ ಲಲನಾಮಣಿಗಳು, ಮೈಕು ಪೈಕುಗಳು ರಾರಾಜಿಸುತ್ತವೆ. ಸಾವಿರಾರು ಕಾರ್ಯಕರ್ತರು ತಾವಾಗಿ ಬಂದಿದ್ದರು ಎಂಬ ಪರಾಕು ಕೇಳಿಸುತ್ತದೆ. ಅಸಲಿಯತ್ತು ಮಾತ್ರ ಲೋಕಕ್ಕೆ ಗೊತ್ತು.
ಆಗೆಲ್ಲಾ ನಡೆಯುತ್ತಿದ್ದ ಅಂದಿನ ಆ ರೈತರ ಅಸಲಿ ಜಾತಾ ಎಲ್ಲಿ ? ಇಂದು ನಡೆಯುವ ಹಿಡ್ಕೊಂಡು ಬಂದ ನಕಲಿ ಮೆರವಣಿಗೆಗಳು ಎಲ್ಲಿ?
(ಮುಂದುವರೆದಿದೆ . . ).